ಶಿಥಿಲಗೊಂಡಿದ್ದ KMF ಕ್ವಾಟರ್ಸ್ ಕುಸಿತ, ಅಪಾಯದಿಂದ ಪಾರಾದ ಜನ

ಬೆಂಗಳೂರು,ಸೆ.28- ನಗರದಲ್ಲಿ ಕಳೆದೊಂದು ವಾರದಿಂದ ಪ್ರತಿನಿತ್ಯ ಒಂದಲ್ಲ ಒಂದು ದುರಂತ ಸಂಭವಿಸುತ್ತಲೇ ಇವೆ. ಇಂದು ಬೆಳಗ್ಗೆ ಮೂರು ಅಂತಸ್ತಿನ ಕಟ್ಟಡ ಕುಸಿದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ಲಕ್ಕಸಂದ್ರದಲ್ಲಿ ನಿನ್ನೆ ಬೆಳಗ್ಗೆ ಮೂರು ಅಂತಸ್ತಿನ ಹಳೆಯ ಕಟ್ಟಡ ಕುಸಿದು ಬಿದ್ದ ಬೆನ್ನಲ್ಲೇ ಅರ್ಧ ಕಿ.ಮೀ ದೂರದ ಕೆಎಂಎಫ್ ಆವರಣದಲ್ಲಿದ್ದ ಮೂರು ಅಂತಸ್ತಿನ ಕ್ವಾಟರ್ಸ್ ಕುಸಿದಿದೆ.

ಕೆಎಂಎಫ್ ಆವರಣದಲ್ಲಿ ನಿರ್ಮಿಸಲಾಗಿದ್ದ ಮೂರು ಅಂತಸ್ತಿನ ಕಟ್ಟಡದಲ್ಲಿ 8 ಮನೆಗಳು ಇವೆ. ಕ್ವಾಟರ್ಸ್‍ನ ಕಟ್ಟಡ ತೀವ್ರ ಶಿಥಿಲಗೊಂಡಿದ್ದರಿಂದ ಈಗಾಗಲೇ ಮೂರು ಮನೆಗಳನ್ನು ಖಾಲಿ ಮಾಡಿಸಲಾಗಿತ್ತು. ಮುನ್ನೆಚ್ಚರಿಕೆಯಾಗಿ ನಿನ್ನೆ ರಾತ್ರಿ ಐದು ಮನೆಗಳನ್ನು ಖಾಲಿ ಮಾಡಿಸಿದ್ದರಿಂದ ಈ ಕ್ವಾಟ್ರರ್ಸ್‍ನಲ್ಲಿ ಯಾರೂ ಇರಲಿಲ್ಲ.

ಈ ಕ್ವಾಟರ್ಸ್‍ನಲ್ಲಿ ವಾಸವಾಗಿದ್ದವರು ಪೂರ್ಣ ಪ್ರಮಾಣದಲ್ಲಿ ತಮ್ಮ ತಮ್ಮ ವಸ್ತುಗಳನ್ನು ತೆಗೆದುಕೊಂಡು ಹೋಗಿರಲಿಲ್ಲ. ಕೆಲ ಮನೆಗಳಲ್ಲಿ ಪಾತ್ರೆಗಳು, ಸಿಲಿಂಡರ್‍ಗಳು ಇನ್ನಿತರೆ ವಸ್ತುಗಳಿದ್ದವು. ಇಂದು ಅಥವಾ ನಾಳೆ ತೆಗೆದುಕೊಂಡು ಹೋಗುವುದಾಗಿ ನಿವಾಸಿಗಳು ಹೇಳಿದ್ದರು. ಅದರೀಗ ಕಟ್ಟಡವೇ ಕುಸಿದುಬಿದ್ದಿದೆ.

ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಆಡುಗೋಡಿ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ. ಡೈರಿ ಸರ್ಕಲ್ ಬಳಿಯಲ್ಲಿರುವ ಈ ಮೂರು ಅಂತಸ್ತಿನ ಕ್ವಾಟರ್ಸ್ ಸುಮಾರು 50 ವರ್ಷದ ಹಳೆಯದು ಎಂದು ಹೇಳಲಾಗುತ್ತಿದೆ.

ಈ ಕ್ವಾಟ್ರರ್ಸ್‍ನಲ್ಲಿ ಕೆಎಂಎಫ್ ಸಿಬ್ಬಂದಿಗಳು ವಾಸವಾಗಿದ್ದರು. ಕ್ವಾಟ್ರರ್ಸ್ ನಲ್ಲಿದ್ದವರನ್ನು ಮುಂಜಾಗ್ರತಾ ಕ್ರಮವಾಗಿ ಖಾಲಿ ಮಾಡಿಸಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕುಸಿತಗೊಂಡ ಕಟ್ಟಡದೊಳಗೆ ಎರಡು ನಾಯಿಗಳು ಸಿಕ್ಕಿಕೊಂಡಿದ್ದವು. ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಅವುಗಳನ್ನು ಹೊರತೆಗೆದು ರಕ್ಷಿಸಿದ್ದಾರೆ.

# ಮಾಲೀಕನಿಗಾಗಿ ಶೋಧ:
ನಗರದ ಲಕ್ಕಸಂದ್ರದಲ್ಲಿ ನಿನ್ನೆ ಮೂರು ಅಂತಸ್ತಿನ ಕಟ್ಟಡ ಕುಸಿತ ಘಟನೆಗೆ ಸಂಬಂಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಆಡುಗೋಡಿ ಠಾಣೆ ಪೊಲೀಸರು ಕಟ್ಟಡದ ಮಾಲೀಕ ಸುರೇಶ್‍ಗಾಗಿ ಶೋಧ ನಡೆಸುತ್ತಿದ್ದಾರೆ. ಆತ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ.

ಶಿಥಿಲಗೊಂಡಿದ್ದ ಈ ಕಟ್ಟಡದಲ್ಲಿ ಸುಮಾರು 50ರಿಂದ 60 ಮಂದಿ ಮೆಟ್ರೋ ಕಾಮಗಾರಿ ನೌಕರರು ವಾಸವಾಗಿದ್ದರು. ನಿನ್ನೆ ಮುಂಜಾನೆಯೇ ಎಲ್ಲ ಕುಟುಂಬಗಳನ್ನು ಕಟ್ಟಡದಿಂದ ತೆರವುಗೊಳಿಸಲಾಗಿತ್ತು.