ಇಟ್ಟಿಗೆಯಿಂದ ತಲೆ ಚಚ್ಚಿ ನಡು ರಸ್ತೆಯಲ್ಲೇ ವ್ಯಕ್ತಿಯ ಭೀಕರ ಹತ್ಯೆ

Social Share

ಬೆಂಗಳೂರು, ಫೆ.25- ದುಷ್ಕರ್ಮಿಗಳು ಸಿಮೆಂಟ್ ಇಟ್ಟಿಗೆಯಿಂದ ವ್ಯಕ್ತಿಯೊಬ್ಬರ ತಲೆಗೆ ಹೊಡೆದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಡರಾತ್ರಿ ನಡೆದಿದೆ. ಕಾಮಾಕ್ಷಿಪಾಳ್ಯದ ಬಸ್ ನಿಲ್ದಾಣ ಸಮೀಪದ ಫುಟ್‍ಪಾತ್‍ನಲ್ಲಿ ದುಷ್ಕರ್ಮಿಗಳು ತಡರಾತ್ರಿ ವ್ಯಕ್ತಿಯ ತಲೆಗೆ ಸಿಮೆಂಟ್ ಇಟ್ಟಿಗೆಯಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಇಂದು ಮುಂಜಾನೆ ಈ ಮಾರ್ಗದಲ್ಲಿ ಹೋಗುತ್ತಿದ್ದ ಸಾರ್ವಜನಿಕರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ತಕ್ಷಣ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಸ್ಥಳಕ್ಕೆ ಹೋಗಿ ನೋಡಿದಾಗ ಕೊಲೆಯಾದ ವ್ಯಕ್ತಿ ಯಾರೆಂಬುದು ಗೊತ್ತಾಗಿಲ್ಲ. ನಂತರ ಆ ವ್ಯಕ್ತಿಯ ಜೇಬನ್ನು ಪರಿಶೀಲಿಸಿದಾಗ ಆಧಾರ್ ಕಾರ್ಡ್ ಪತ್ತೆಯಾಗಿದೆ. ಆ ಆಧಾರ್‍ಕಾರ್ಡ್‍ನಲ್ಲಿ ಸತೀಶ (46) ವೃಷಭಾವತಿನಗರ ಎಂಬ ವಿಳಾಸ ಇದೆ.
ಪೊಲೀಸರು ತಕ್ಷಣ ಆ ವಿಳಾಸಕ್ಕೆ ಹೋಗಿ ವಿಚಾರಿಸಿದಾಗ ಆ ಸ್ಥಳದಲ್ಲಿ ಸತೀಶ್ ವಾಸಿಸುತ್ತಿದ್ದರು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಅಕ್ಕಪಕ್ಕದವರನ್ನು ವಿಚಾರಿಸಿದಾಗ ಸತೀಶ್ ಎಂಬುವವರು ತಮಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಜೇಬಿನಲ್ಲಿ ದೊರೆತ ಆಧಾರ್ ಕಾರ್ಡ್ ಕೊಲೆಯಾದ ವ್ಯಕ್ತಿಯದ್ದೇ ಅಥವಾ ಬೇರೆಯವರ ಆಧಾರ್‍ಕಾರ್ಡ್‍ಅನ್ನು ಜೇಬಿನಲ್ಲಿ ಇಟ್ಟುಕೊಂಡಿದ್ದರೇ ಎಂಬುದನ್ನುಪೊಲೀಸರು ಪತ್ತೆಹಚ್ಚುತ್ತಿದ್ದಾರೆ. ಸ್ಥಳಕ್ಕೆ ಇನ್ಸ್‍ಪೆಕ್ಟರ್ ಪ್ರಶಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವ್ಯಕ್ತಿಯನ್ನು ಯಾರು, ಏತಕ್ಕಾಗಿ ಕೊಲೆ ಮಾಡಿದ್ದಾರೆಂಬ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

Articles You Might Like

Share This Article