ಜೆಜೆನಗರ ರೀತಿಯಲ್ಲೇ ಬೆಂಗಳೂರಿನಲ್ಲಿ ಮತ್ತೊಂದು ಕೊಲೆ

ಬೆಂಗಳೂರು,ಏ.24- ಇತ್ತೀಚೆಗೆ ಜೆಜೆನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ರೀತಿಯಲ್ಲೇ ಕೆಂಗೇರಿ ರೈಲ್ವೆ ನಿಲ್ದಾಣ ಸಮೀಪದ ರೈಲ್ವೆ ಹಳಿ ಮೇಲೆ ಯುವಕನ ಕೊಲೆಯಾಗಿದೆ. ಕೆಂಗೇರಿ ಉಪನಗರದ ಎಂಟಿಎಸ್ ಕಾಲೋನಿ ನಿವಾಸಿ ಭರತ್(24) ಕೊಲೆಯಾದ ಯುವಕ.

ನಿನ್ನೆ ರಾತ್ರಿ ಕೆಂಗೇರಿಯಲ್ಲಿ ಕರಗ ಮಹೋತ್ಸವ ನಡೆಯುತ್ತಿತ್ತು. ಕರಗ ನೋಡಲು ಭರತ ತನ್ನ ಸ್ನೇಹಿತರ ಜೊತೆ ಬಂದಿದ್ದಾನೆ. ಕರಗ ನೋಡಿಕೊಂಡು ಕೆಂಗೇರಿ ಬಳಿ ಹೋಗುತ್ತಿದ್ದಾಗ ಅದೇ ಮಾರ್ಗದಲ್ಲಿ ಬರುತ್ತಿದ್ದ ಡಿಯೋ ಬೈಕ್ ಭರತ್‍ನ ಕೈ ತಾಗಿದೆ.

ಆ ಸಂದರ್ಭದಲ್ಲಿ ಭರತ್, ನೋಡಿಕೊಂಡು ಗಾಡಿ ಓಡಿಸಿ ಎಂದು ಸವಾರನಿಗೆ ಹೇಳಿದ್ದಾನೆ. ಇದರಿಂದ ಕೋಪಗೊಂಡ ಡಿಯೋ ಬೈಕ್‍ನ ಸವಾರ ಭರತನ ಜೊತೆ ಜಗಳವಾಡಿ ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಹೇಳಿ ಹೋಗಿದ್ದಾನೆ. ಕೆಲ ನಿಮಿಷದ ಬಳಿಕ 10ರಿಂದ 15 ಮಂದಿಯ ಗ್ಯಾಂಗ್‍ನ್ನು ಕರೆದುಕೊಂಡು ಬಂದ ಆರೋಪಿ ಮುಂಜಾನೆ 2 ಗಂಟೆ ಸುಮಾರಿನಲ್ಲಿ ಭರತನ ಜೊತೆ ಜಗಳವಾಡಿದ್ದಾನೆ.

ನಂತರ ಈ ಗ್ಯಾಂಗ್‍ನವರು ರೈಲ್ವೆ ಹಳಿ ಬಳಿ ಕರೆದೊಯ್ದು ಚಾಕುವಿನಿಂದ ದೇಹದ 15 ಕಡೆ ಮನಬಂದಂತೆ ಇರಿದು ಕೊಲೆ ಮಾಡಿದ್ದಾರೆ.
ನಂತರ ಶವವನ್ನು ರೈಲ್ವೆ ಹಳಿ ಬಳಿ ಎಳೆದುಕೊಂಡು ಹೋಗುತ್ತಿದ್ದಾಗ ಅದನ್ನು ಗಮನಿಸಿದ ರೈಲ್ವೆ ಸಿಬ್ಬಂದಿ ಅವರ ಸಮೀಪ ಹೋಗುತ್ತಿದ್ದಂತೆ ಶವವನ್ನು ಸ್ಥಳದಲ್ಲೇ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ.

ಸುದ್ದಿ ತಿಳಿದು ರೈಲ್ವೆ ಎಸ್‍ಪಿ ಸಿರಿಗೌರಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಟಿ ರೈಲ್ವೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಜೆಜೆನಗರದಲ್ಲಿ ಇತ್ತೀಚೆಗೆ ಬೈಕ್ ತಾಗಿತೆಂದು ಕೋಪಗೊಂಡ ಯುವಕರ ಗುಂಪು ಚಂದ್ರು ಎಂಬಾತನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಮಾಸುವ ಮುನ್ನವೇ ಇಂದು ಮುಂಜಾನೆ ಅಂತದ್ದೇ ಮತ್ತೊಂದು ಘಟನೆ ನಡೆದಿರುವುದು ಆತಂಕ ಉಂಟು ಮಾಡಿದೆ.