ಕರ್ತವ್ಯಲೋಪ : ಕಂಟ್ರೋಲ್ ರೂಂ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಪತ್ರ

Social Share

ಬೆಂಗಳೂರು,ಅ.20- ನಗರದಲ್ಲಿ ಧಾರಾಕಾರವಾಗಿ ಮಳೆಯಾಗಿ ಸಾಕಷ್ಟು ಅನಾಹುತ ಸಂಭವಿಸುತ್ತಿದ್ದರೂ ಜನರ ಸಮಸ್ಯೆ ಆಲಿಸಿ ಪರಿಹಾರ ಸೂಚಿಸಬೇಕಿದ್ದ ಅಧಿಕಾರಿಗಳೇ ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಕರ್ತವ್ಯ ಲೋಪ ಎಸಗಿರುವುವುದು ಬಿಬಿಎಂಪಿ ಕಾರ್ಯ ವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.

ಮಳೆಯಿಂದಾಗುವ ತೊಂದರೆಗಳನ್ನು ಆಲಿಸಿ ಸಕಾಲಕ್ಕೆ ಪರಿಹಾರ ದೊರಕಿಸಿಕೊಡುವ ಉದ್ದೇಶದಿಂದ ಎಂಟು ವಲಯಗಳ ನಿಯಂತ್ರಣ ಕೊಠಡಿಗಳಲ್ಲಿ 15ಕ್ಕೂ ಹೆಚ್ಚು ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಕೇಂದ್ರ ಕಚೇರಿಯಲ್ಲಿರುವ ನಿಯಂತ್ರಣ ಕೊಠಡಿಯಲ್ಲಿ 5 ಮಂದಿ ಹಾಗೂ ಇತರ ಕಡೆಗಳಲ್ಲಿ 10ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

ಆದರೆ, ಈ ರೀತಿಯ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿರುವ 15 ಅಧಿಕಾರಿಗಳು ನಿನ್ನೆ ಮಳೆಯಾದ ಸಂದರ್ಭದಲ್ಲಿ ಕರ್ತವ್ಯಕ್ಕೆ ಹಾಜರಾಗದೆ ಕರ್ತವ್ಯ ಲೋಪ ಎಸಗಿರುವುದು ಕಂಡು ಬಂದಿದೆ. ಸ್ವತಃ ಬಿಬಿಎಂಪಿ ಆಯುಕ್ತರೆ ಜನರ ಸಮಸ್ಯೆ ಆಲಿಸಲು ಕಾಲ್ನಡಿಗೆಯಲ್ಲಿ ಜನರ ಬಳಿಗೆ ತೆರಳುತ್ತಿರುವ ಸಂದರ್ಭದಲ್ಲೇ ಅಧಿಕಾರಿಗಳು ಮಾತ್ರ ಕರ್ತವ್ಯಕ್ಕೆ ಗೈರಾಗಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿರುವ ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕ ಎ.ಎಚ್.ಬಸವರಾಜ್ ಅವರು ಕರ್ತವ್ಯ ಲೋಪ ಎಸಗಿರುವ 15 ಸಿಬ್ಬಂದಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಹಾಗೂ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ನಿನ್ನೆ ಬಿದ್ದ ಭಾರಿ ಮಳೆ ಸಂದರ್ಭದಲ್ಲಿ ಸಾರ್ವಜನಿಕರು ನಿಯಂತ್ರಣ ಕೊಠಡಿ ಸಂಪರ್ಕಿಸಲು ಪ್ರಯತ್ನಿಸಿದಾಗ ನಿಯಂತ್ರಣ ಕೊಠಡಿಯಲ್ಲಿ ಕರ್ತವ್ಯದಲ್ಲಿದ್ದ ಡಾ.ಸುನೀಲ್, ತಿಮ್ಮಪ್ಪ,ಕೃಷ್ಣೇಗೌಡ, ಅರುಣ್‍ಕುಮಾರ್, ಮಂಜೇಗೌಡ, ಸತೀಶ್, ನರೇಶ್, ಕರುಣಾಕರ್, ಕುಸುಮ, ಗಂಗಾರೆಡ್ಡಿ, ಚಂದ್ರನಾಯ್ಕ, ಯತೀಶ್, ಗದ್ದಿಗಪ್ರಸಾದ್, ಸಂದೀಪ್ ಸಿಂಗ್ ಎಂಬುವರು ಗೈರು ಹಾಜರಾಗಿರುವುದು ಗೊತ್ತಾಗಿದೆ.

ನಗರದಲ್ಲಿ ಮಳೆಯಿಂದ ಭಾರಿ ಅನಾಹುತವಾಗಿ ಜನ ಸಮಸ್ಯೆಯ ಸುಳಿಯಲ್ಲಿ ಸಿಲುಕಿ ನರಳಾಡುತ್ತಿದ್ದರೆ, ಕರ್ತವ್ಯಕ್ಕೆ ಗೈರು ಹಾಜರಾಗಿ ತಮ್ಮ ಮನೆಗಳಲ್ಲಿ ನೆಮ್ಮದಿಯಾಗಿ ನಿದ್ರಿಸುತ್ತಿದ್ದ 15 ಮಂದಿ ನಿರ್ಲಕ್ಷ್ಯ ಅಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಜನರ ಕಣ್ಣೀರು ಒರೆಸುವಂತಹ ಅಕಾರಿಗಳನ್ನು ನಿಯಂತ್ರಣ ಕೊಠಡಿಗಳಲ್ಲಿ ನಿಯೋಜನೆ ಮಾಡಬೇಕು ಎಂದು ಬಸವರಾಜ್ ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.

Articles You Might Like

Share This Article