ಒಂದೇ ಮಳೆಗೆ ತತ್ತರಿಸಿದ ಸಿಲಿಕಾನ್ ಸಿಟಿ ಬೆಂಗಳೂರು, ಓರ್ವ ಸಾವು, ಮನೆಗಳಿಗೆ ನುಗ್ಗಿದ ಕೊಳಚೆ ನೀರು..!

ಬೆಂಗಳೂರು, ಅ.4- ರಾತ್ರಿ ಸುರಿದ ಯಮಸ್ವರೂಪಿ ಮಳೆಗೆ ಬೆಂಗಳೂರು ಬೆಚ್ಚಿಬಿದ್ದಿದೆ. ಮಳೆಗೆ ಓರ್ವ ಬಲಿಯಾಗಿದ್ದು, 10ಕ್ಕೂ ಹೆಚ್ಚು ಜಾನುವಾರುಗಳು ಪ್ರಾಣ ಕಳೆದುಕೊಂಡಿವೆ. ನಗರದ ಬಹುತೇಕ ಪ್ರದೇಶಗಳಲ್ಲಿ ಕೊಳಚೆ ನೀರು ಮನೆಗಳಿಗೆ ನುಗ್ಗಿದ ಪರಿಣಾಮ ಜನ ರಾತ್ರಿ ಇಡೀ ಜಾಗರಣೆ ಮಾಡುವಂತಾಗಿದೆ.

ಇಂದು ಮುಂಜಾನೆ ಜಯನಗರದ ಸೌತ್ ಎಂಡ್ ವೃತ್ತದ ಬಳಿ ಬೈಕ್‍ನಲ್ಲಿ ಹೋಟೆಲ್‍ಗೆ ತೆರೆಯಲು ತೆರಳುತ್ತಿದ್ದ ವ್ಯಕ್ತಿಯೊಬ್ಬರು ರಸ್ತೆಗೆ ಅಡ್ಡಲಾಗಿ ಉರುಳಿಬಿದ್ದಿದ್ದ ಮರಕ್ಕೆ ಡಿಕ್ಕಿ ಹೊಡೆದು ತೀವ್ರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಪ್ರಾಣ ಬಿಟ್ಟಿದ್ದಾರೆ. ಮಳೆ ಅನಾಹುತಕ್ಕೆ ಬಲಿಯಾದ ವ್ಯಕ್ತಿಯನ್ನು ನಾಗರಾಜರಾವ್ ಎಂದು ಗುರುತಿಸಲಾಗಿದೆ.

ಇದರ ಜೊತೆಗೆ ರಾಜರಾಜೇಶ್ವರಿನಗರ ವ್ಯಾಪ್ತಿಯಲ್ಲಿ ಆರು ಹಸು, ಆರು ಮೇಕೆ ಬಲಿಯಾಗಿವೆ. ಅಂದಾನಪ್ಪ ಎಂಬ ವ್ಯಕ್ತಿಯ ದನದ ಕೊಟ್ಟಿಗೆಗೆ ನೀರು ನುಗ್ಗಿದ ಪರಿಣಾಮ ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಕೊಚ್ಚಿ ಹೋಗಿವೆ.

ಶಂಕರಮಠ ವಾರ್ಡ್ ಮತ್ತು ಶಕ್ತಿಗಣಪತಿನಗರ ವಾರ್ಡ್‍ಗಳಲ್ಲಿ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ನೂರಾರು ಮಂದಿ ಸಂಕಷ್ಟಕ್ಕೀಡಾಗಿದ್ದಾರೆ.
ಜೆ.ಸಿ.ನಗರ, ಕಮಲನಗರ ಸುತ್ತಮುತ್ತಲ ಪ್ರದೇಶಗಳಲ್ಲಿ ಇರುವ ತಗ್ಗುಪ್ರದೇಶಗಳಿಗೆ ಕೊಳಚೆ ನೀರು ನುಗ್ಗಿ ಭಾರೀ ಅನಾಹುತ ಸಂಭವಿಸಿದೆ.
ಮನೆಯ ಮುಂದೆ ಇರಿಸಿದ್ದ ವಾಹನಗಳು ನೀರಿನಲ್ಲಿ ಮುಳುಗಿ ಹೋಗಿದ್ದು, ಜನ ಮನೆಗಳಿಗೆ ನುಗ್ಗಿದ ನೀರನ್ನು ಹೊರಹಾಕಲು ರಾತ್ರಿ ಇಡೀ ಹರಸಾಹಸಪಡುವಂತಾಯಿತು.

ಇದೇ ಪ್ರದೇಶದಲ್ಲಿ ಮಳೆನೀರು ನುಗ್ಗಿದ ಪರಿಣಾಮವೃದ್ಧರೊಬ್ಬರು ನೀರಿನಲ್ಲಿ ಸಿಲುಕಿಕೊಂಡಿದ್ದು, ಬಿಬಿಎಂಪಿ ಮಾಜಿ ಸದಸ್ಯ ಎಂ.ಶಿವರಾಜ್ ಮತ್ತಿತರರು ಸ್ಥಳಕ್ಕೆ ದೌಡಾಯಿಸಿ ವೃದ್ಧರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಲ್ಲಿ ಯಶಸ್ವಿಯಾದರು. ಜಗಜೀವನರಾಮ್‍ನಗರದ ಹಲವಾರು ತಗ್ಗುಪ್ರದೇಶಗಳ ಮನೆಗಳಿಗೂ ನೀರು ನುಗ್ಗಿ ಸಾಕಷ್ಟು ಅನಾಹುತವಾಯಿತು.

ನಟ ದರ್ಶನ್ ವಾಸ ಮಾಡುತ್ತಿರುವ ಐಡಿಯಲ್ ಹೋಮ್ ಬಡಾವಣೆಗೆ ಸಮೀಪದ ರಾಜಕಾಲುವೆ ನೀರು ನುಗ್ಗಿದ ಪರಿಣಾಮ ಇಡೀ ಪ್ರದೇಶ ಕೊಳಚೆಗುಂಡಿಯಂತಾಗಿ ಪರಿವರ್ತನೆಯಾಗಿತ್ತು. ನಾಗರಬಾವಿ ಸಂಪೂರ್ಣ ಜಲಾವೃತ್ತಗೊಂಡಿದು ರಸ್ತೆಗಳು, ಚರಂಡಿಗಳಂತಾಗಿ ಪರಿವರ್ತನೆಯಾಗಿತ್ತು.

ಜೆ.ಸಿ.ರೋಡ್‍ನಲ್ಲಿ ಅಂಗಡಿಮುಗ್ಗಟ್ಟುಗಳಿಗೆ ನೀರು ನುಗ್ಗಿದ ಪರಿಣಾಮ ಅಂಗಡಿಯಲ್ಲಿದ್ದ ವಸ್ತುಗಳು ನೀರಿನಲ್ಲಿ ತೇಲಾಡುತ್ತಿದ್ದವು. ಇಡೀ ಪ್ರದೇಶ ಕೆರೆಯಂತಾಗಿದ್ದು, ವಾಹನ ಸವಾರರು ಮುಂದೆ ಚಲಿಸಲಾಗದೆ ಪರದಾಡುವಂತಾಗಿತ್ತು. ರಾಜರಾಜೇಶ್ವರಿನಗರದ 15 ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಜನ ಬಿಬಿಎಂಪಿ ಅಕಾರಿಗಳಿಗೆ ಇಡೀ ಶಾಪ ಹಾಕುತ್ತಿದ್ದರು.

ಎಚ್‍ಎಎಲ್ ಸಮೀಪದ ರಮೇಶ್‍ನಗರದಲ್ಲಿ 12 ಅಡಿ ಎತ್ತರದ 100 ಮೀಟರ್ ಉದ್ದದ ಎಚ್‍ಎಎಲ್‍ಗೆ ಸೇರಿದ ಕಾಂಪೌಂಡ್ ಕುಸಿದುಬಿದ್ದಿದೆ. ಇದರ ಪರಿಣಾಮ ಕಾಂಪೌಂಡ್ ಸಮೀಪ ನಿಲ್ಲಿಸಿದ್ದ 10ಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿವೆ. ಅದೇ ರೀತಿ ಸುಂಕದಕಟ್ಟೆಯಲ್ಲೂ ಮಳೆಯ ಅನಾಹುತವಾಗಿದ್ದು, ಗುಂಡಿ ಬಿದ್ದಿದ್ದ ರಸ್ತೆಗಳಿಂದಾಗಿ ರೋಡ್‍ಗಳು ಸಾವಿನ ಗುಂಡಿಗಳಾಗಿ ಪರಿವರ್ತನೆಯಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.

ಕೋರಮಂಗಲದ 6ನೇ ಬ್ಲಾಕ್‍ನಲ್ಲೂ ಹಲವಾರು ಮನೆಗಳಿಗೆ ನೀರು ನುಗ್ಗಿದೆ. ಕೋರಮಂಗಲದ ಹಲವಾರು ಪ್ರದೇಶಗಳು ಜಲಾವೃತಗೊಂಡಿದ್ದು, ಸ್ಥಳಕ್ಕೆ ದೌಡಾಯಿಸಿರುವ ಬಿಬಿಎಂಪಿ ಸಿಬ್ಬಂದಿಗಳು ಪರಿಹಾರ ಕಾರ್ಯಗಳನ್ನು ಕೈಗೊಂಡಿದ್ದಾರೆ. ಧರೆಗುರುಳಿ ಬಿದ್ದ ನೂರಾರು ಮರಗಳು: ಮಲ್ಲೇಶ್ವರಂ, ಆರ್‍ಆರ್‍ನಗರ, ರಾಜಾಜಿನಗರ, ಜಯನಗರ, ಸುಂಕದಕಟ್ಟೆ ಜೆ.ಸಿ.ನಗರ ಮತ್ತಿತರ ಹಲವಾರು ಪ್ರದೇಶಗಳಲ್ಲಿ ನೂರಾರು ಮರಗಳು ಧರೆಗುರುಳಿ ಬಿದ್ದಿವೆ.

# ಎಲ್ಲೆಲ್ಲಿ ಎಷ್ಟೆಷ್ಟು ಮಳೆ:
ನಿನ್ನೆ ಮಧ್ಯರಾತ್ರಿ 12 ಗಂಟೆ ವೇಳೆಗೆ ನಗರದ ಹಲವು ಪ್ರದೇಶಗಳಲ್ಲಿ ಭಾರೀ ಪ್ರಮಾಣದ ಮಳೆಯಾಗಿದೆ. ಜ್ಞಾನಭಾರತಿಯಲ್ಲಿ 98 ಮಿ.ಮೀ, ನಾಗರಬಾವಿಯಲ್ಲಿ 91, ಹಂಪಿನಗರದಲ್ಲಿ 90, ನಂದಿನಿ ಬಡಾವಣೆಯಲ್ಲಿ 78, ಹೆಗ್ಗನಹಳ್ಳಿಯಲ್ಲಿ 67.5, ಮಾರುತಿಮಂದಿರದಲ್ಲಿ 64.5, ವಿವಿಪುರಂನಲ್ಲಿ 58.5, ರಾಜರಾಜೇಶ್ವರಿನಗರದಲ್ಲಿ 53.5 ಹಾಗೂ ದಯಾನಂದನಗರದಲ್ಲಿ 48.5 ಮಿ.ಮೀನಷ್ಟು ಮಳೆಯಾಗಿದೆ.

# ಎಲ್ಲೆಲ್ಲಿ ಅನಾಹುತ:
ಪೂರ್ವ ವಲಯದಲ್ಲಿ 7 ತಗ್ಗುಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದ್ದು, ನಾಲ್ಕು ಕಡೆ ಭಾರೀ ಪ್ರಮಾಣದ ಮರಗಳು ಕುಸಿದು ಬಿದ್ದಿದ್ದರೆ, ಪಶ್ಚಿಮ ವಲಯದಲ್ಲಿ 10 ತಗ್ಗುಪ್ರದೇಶಗಳಿಗೆ ನೀರು ನುಗ್ಗಿದ್ದು, ಕೆಲವು ಕಡೆ ಸಮಸ್ಯೆಗಳನ್ನು ಬಗೆಹರಿಸಲಾಗಿದ್ದು, ಉಳಿದ ಪ್ರದೇಶಗಳ ಸಮಸ್ಯೆ ನಿವಾರಣೆಗೆ ಸಿಬ್ಬಂದಿಗಳು ಹರಸಾಹಸಪಡುತ್ತಿದ್ದಾರೆ.

ಅದೇ ರೀತಿ ದಕ್ಷಿಣ ವಲಯದಲ್ಲಿ ಮೂರು ಮನೆಗಳಿಗೆ ನೀರು ನುಗ್ಗಿದ್ದು ಮಳೆಯ ಆರ್ಭಟಕ್ಕೆ ಧರೆಗುರುಳಿ ಬಿದ್ದಿದ್ದ ಎರಡು ಮರಗಳನ್ನು ತೆರವುಗೊಳಿಸಲಾಗಿದೆ. ರಾಜರಾಜೇಶ್ವರಿನಗರ ವಲಯದಲ್ಲಿ 15ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿ ಪರಿಹಾರ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಕೈಗೆತ್ತಿಕೊಳ್ಳಲಾಗಿದೆ.

ದಾಸರಹಳ್ಳಿಯಲ್ಲಿ ಐದು ಪ್ರದೇಶಗಳಲ್ಲಿ, ಮಹದೇವಪುರದಲ್ಲಿ ನಾಲ್ಕು ಪ್ರದೇಶಗಳಿಗೆ ನೀರು ನುಗ್ಗಿ ಸಾಕಷ್ಟು ಅನಾಹುತವಾಗಿದೆ. ಯಲಹಂಕ ಮತ್ತು ಬೊಮ್ಮನಹಳ್ಳಿ ವಲಯಗಳಲ್ಲಿ ಭಾರೀ ಪ್ರಮಾಣದ ಮಳೆಯಾಗಿದ್ದರೂ ಅಲ್ಲಿ ಅಷ್ಟೇನೂ ಅನಾಹುತಗಳು ಸಂಭವಿಸಿಲ್ಲ.

ರಾಜರಾಜೇಶ್ವರಿನಗರ ಮತ್ತು ಪಶ್ಚಿಮ ವಲಯದಲ್ಲಿ ಸಾಕಷ್ಟು ಅನಾಹುತಗಳಾಗಿರುವುದರಿಂದ ಬಿಬಿಎಂಪಿ ಕೇಂದ್ರ ಕಛೇರಿಯಲ್ಲಿರುವ ನಿಯಂತ್ರಣ ಕೊಠಡಿ ಸಿಬ್ಬಂದಿಗಳು ರಾತ್ರಿ ಇಡೀ ಕಾರ್ಯಾಚರಣೆ ನಡೆಸಿ ಸಾರ್ವಜನಿಕರಿಂದ ಬಂದ ದೂರುಗಳನ್ನು ಸ್ವೀಕರಿಸಿ ಸಮಸ್ಯೆ ಪರಿಹಾರ ಕಾರ್ಯದಲ್ಲಿ ನಿರತರಾಗಿದ್ದರು.