ರಸ್ತೆ ಸುಧಾರಣೆಗೆ ಮಾ.31ರ ಗಡುವು, ಬಿಬಿಎಂಪಿ ಅಧಿಕಾರಿಗಳಿಗೆ ಸಿಎಂ ತರಾಟೆ

Social Share

ಬೆಂಗಳೂರು,ಜ.2- ನಗರದಲ್ಲಿ ಭಾರೀ ಮಳೆಯಿಂದಾಗಿ ಗುಂಡಿ ಬಿದ್ದಿದ್ದ ರಸ್ತೆಗಳನ್ನು ಮಾ.31ರೊಳಗೆ ಮುಚ್ಚಿ, ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡದಿದ್ದರೆ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಎಚ್ಚರಿಸಿದ್ದಾರೆ. ಮಳೆಗಾಲ ಮುಗಿದು ತಿಂಗಳು ಕಳೆದರೂ ನಗರದ ಅನೇಕ ಪ್ರಮುಖ ರಸ್ತೆಗಳಲ್ಲೇ ಗುಂಡಿ ಬಿದ್ದಿವೆ.
ಇದರಿಂದ ಸಾರ್ವಜನಿಕರು ಇಡೀ ಶಾಪ ಹಾಕುತ್ತಿದ್ದಾರೆ. ಇದನ್ನು ಮುಚ್ಚಲು ನಿಮಗೆ ಸಮಸ್ಯೆಯಾದರು ಏನು ಎಂದು ಸಿಎಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಬೆಂಗಳೂರು ಅಭಿವೃದ್ಧಿ ಕುರಿತಂತೆ ಶಾಸಕರು, ಸಂಸದರು ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರ ಬಿಬಿಎಂಪಿ ಅಧಿಕಾರಿಗಳ ಕಾರ್ಯ ವೈಖರಿ ವಿರುದ್ಧ ಅಸಮಾಧಾನವನ್ನು ಹೊರಹಾಕಿದರು.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ನಗರದ ಒಟ್ಟು 700 ಕಿ.ಮೀ ರಸ್ತೆಗಳಲ್ಲಿ ಗುಂಡಿಗಳಿವೆ. ಮಾ.31ರೊಳಗೆ ಇವುಗಳನ್ನು ಮುಚ್ಚಲು ಸೂಚನೆ ನೀಡಲಾಗಿದೆ. ಒಂದು ವೇಳೆ ಉದಾಸೀನ ತೋರಿದರೆ ಅಂಥವರ ಮೇಲೆ ಶಿಸ್ತು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ಕೊಟ್ಟರು.
ಜ.31ರೊಳಗೆ ನಗರದಲ್ಲಿ ಬೀದಿ ದೀಪಗಳನ್ನು ಬದಲಾಯಿಸಿ ಬಿಬಿಎಂಪಿಯಿಂದ ಎಲ್‍ಇಡಿ ದೀಪಗಳನ್ನು ಅಳವಡಿಸಲಾಗುವುದು. ನಿರ್ಭಯ ಯೋಜನೆಯಡಿ ಬೆಂಗಳೂರಿನಲ್ಲಿ 7 ಸಾವಿರ ಸಿಸಿಟಿವಿಗಳನ್ನು ಅಳವಡಿಕೆ ಮಾಡುವುದಾಗಿ ಹೇಳಿದರು. ಬಿಬಿಎಂಪಿ ವಾರ್ಡ್‍ಗಳಲ್ಲಿ 150 ಎಂಜಿನಿಯರ್‍ಗಳನ್ನು ಸದ್ಯಕ್ಕೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುವುದು. ಮೂರ್ನಾಲ್ಕು ತಿಂಗಳೊಳಗೆ ಈ ಪ್ರಕ್ರಿಯೆ ಮುಗಿಯಲಿದೆ ಎಂದರು.
ಟಿಡಿಆರ್ ಸಮಸ್ಯೆ ಪರಿಹರಿಸಲು ಹೊಸ ನೀತಿಯನ್ನು ಜಾರಿ ಮಾಡಲಾಗುವುದು. ಟೆಂಡರ್ ಶ್ಯೂರ್ ಕಾಮಗಾರಿ ನಡೆಸಲು ಸೂಚನೆ ನೀಡಲಾಗಿದೆ. ಒಟ್ಟು 1500 ಕೋಟಿ ಹೆಚ್ಚುವರಿ ಹಣವನ್ನು ನೀಡಲು ಸಿಎಂ ಸೂಚಿಸಿದ್ದಾರೆ. ಇದರಿಂದ ಮಳೆ ನೀರು,ರಾಜ ಕಾಲುವೆಗಳ ಮೂಲಕ ಸರಾಗವಾಗಿ ಹರಿಯಲು ಅನುಕೂಲವಾಗುತ್ತದೆ. ಚರಂಡಿಯಲ್ಲಿ ಹೂಳೆತ್ತುವುದಕ್ಕೂ ಇದನ್ನು ಬಳಸುತ್ತೇವೆ ಎಂದರು.
ಇದಕ್ಕೂ ಮುನ್ನ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಗರದಲ್ಲಿ ಸಂಚಾರ ದಟ್ಟಣೆ, ರಾಜಕಾಲುವೆ ಒತ್ತುವರಿ, ರಸ್ತೆ ಅಗಲೀಕರಣ, ಸರ್ಕಾರಿ ಜಮೀನು ಭೂ ಕಬಳಿಕೆ ಹಾಗೂ ಒತ್ತುವರಿದಾರರ ಬಗ್ಗೆ ಅಧಿಕಾರಿಗಳ ವಿರುದ್ಧ ಕೆಂಡ ಕಾರಿದರು.

Articles You Might Like

Share This Article