ಪ್ರಧಾನಿ ಬಂದ್ರೆ ಮಾತ್ರ ಬೆಂಗಳೂರಿನ ರಸ್ತೆಗಳಿಗೆ ಮುಕ್ತಿನಾ..?

Social Share

ಬೆಂಗಳೂರು, ನ.7- ಉದ್ಯಾನನಗರಿಯ ರಸ್ತೆ ಗುಂಡಿಗಳಿಗೆ ಬಿದ್ದು ಜನಸಾಮಾನ್ಯರು ಕೈ-ಕಾಲು ಮುರಿದುಕೊಂಡು ಪ್ರಾಣ ಕಳೆದುಕೊಳ್ಳುತ್ತಿದ್ದರೂ ಮುಚ್ಚದೆ ನಿರ್ಲಕ್ಷ್ಯ ತೋರುವ ಬಿಬಿಎಂಪಿ… ಆದರೆ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬಂದರೆ ರಸ್ತೆಗಳಿಗೆ ಮುಕ್ತಿ ದೊರಕಿಸುತ್ತದೆ.

ಕೆಂಪೇಗೌಡ ರೈಲ್ವೆ ನಿಲ್ದಾಣ ಮುಂಭಾಗದ ರಸ್ತೆ ತುಂಬ ಗುಂಡಿಗಳಿದ್ದು, ದುರಸ್ತಿಗಾಗಿ ಸಂಚಾರಿ ಪೊಲೀಸರು, ಸಾರ್ವಜನಿಕರು ಎಷ್ಟೇ ದೂರು ನೀಡಿದರೂ ಸಹ ಗುಂಡಿ ಮುಚ್ಚದ ಪಾಲಿಕೆ ಇದೀಗ ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಹೊಸ ರಸ್ತೆಗಳನ್ನೇ ನಿರ್ಮಾಣ ಮಾಡುತ್ತಿದ್ದಾರೆ.

ನ.11ರಂದು ಪ್ರಧಾನಿಯವರು ಸಿಟಿ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ನಿರ್ಮಾಣ ಕಾರ್ಯಗಳು ಭರದಿಂದ ಸಾಗುತ್ತಿವೆ. ಕೆಲವು ತಿಂಗಳುಗಳ ಹಿಂದೆ ವಿವಿಧ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಹಾಗೂ ಸಮಾವೇಶಕ್ಕಾಗಿ ಆಗಮಿಸಿದಾಗ ಬೆಂಗಳೂರು ವಿಶ್ವವಿದ್ಯಾಲಯದ ರಸ್ತೆ ಹಾಗೂ ಕೆಂಗೇರಿ ಸುತ್ತಮುತ್ತಲಿನ ರಸ್ತೆಗಳನ್ನು ರಾತ್ರೋರಾತ್ರಿ ಸ್ವಚ್ಛಗೊಳಿಸಿ ಡಾಂಬರು ಹಾಕಲಾಗಿತ್ತು. ಆದರೆ, ಅವರು ಹೋದ ನಂತರ ಒಂದೇ ದಿನಕ್ಕೆ ರಸ್ತೆಗಳ ಬಂಡವಾಳ ಬಯಲಾಗಿ ಗುಂಡಿ ಬಿದ್ದಿದ್ದವು. ಇದು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಿತ್ತು.

ಈಗ ಮತ್ತೆ ಮೋದಿಯವರು ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ರಸ್ತೆಗಳನ್ನು ಕನ್ನಡಿಯಂತೆ ಮಾಡಲು ಕೋಟಿ ಕೋಟಿ ಖರ್ಚು ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನರೇಂದ್ರ ಮೋದಿಯವರೇ ನಮ್ಮ ಏರಿಯಾಗೂ ಬನ್ನಿ, ನಮ್ಮ ರಸ್ತೆಗಳನ್ನೂ ಒಮ್ಮೆ ನೋಡಿ ಎಂದು ಸಾರ್ವಜನಿಕರು ಲೇವಡಿ ಮಾಡುತ್ತಿದ್ದಾರೆ.

ಆಗಾಗ ಬೆಂಗಳೂರು ರೌಂಡ್ಸ್ ಹಾಕುತ್ತಿದ್ದರೆ ರಸ್ತೆಗಳೆಲ್ಲವೂ ಚೆನ್ನಾಗಿರುತ್ತವೆ. ಯಾವುದೇ ಅನಾಹುತಗಳು ಸಂಭವಿಸುವುದಿಲ್ಲ. ಎರಡು ವರ್ಷಗಳಿಂದ ಬೆಂಗಳೂರಿನ ಹೃದಯ ಭಾಗವಾದ ಮೆಜೆಸ್ಟಿಕ್ ರಸ್ತೆಗಳು ಹಾಳಾಗಿವೆ. ಜನರು ಬಿದ್ದು ಕೆಲವರು ಪ್ರಾಣ ಕಳೆದುಕೊಂಡು ಮತ್ತೆ ಕೆಲವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗುತ್ತಿದ್ದರೂ ಬಿಬಿಎಂಪಿ ತಲೆ ಕೆಡಿಸಿಕೊಂಡಿರಲಿಲ್ಲ.

ಸಂಸತ್ ಆವರಣದಲ್ಲಿ ಕೆಂಪೇಗೌಡರ ಪ್ರತಿಮೆ ಸ್ಥಾಪಿಸಲು ಎಚ್‍ಡಿಡಿ ಪತ್ರ

ಮೊನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಾಲಿಕೆಗೆ ತರಾಟೆಗೆ ತೆಗೆದುಕೊಂಡು ಶೀಘ್ರ ರಸ್ತೆ ಗುಂಡಿ ಮುಚ್ಚುವಂತೆ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ಎಚ್ಚೆತ್ತು ಗುಂಡಿ ಮುಚ್ಚುವ ಕಾರ್ಯ ಭರದಿಂದ ಸಾಗಿದೆ.

ಆದರೆ, ಕೆಲವು ಪ್ರಮುಖ ರಸ್ತೆಗಳಲ್ಲಿ ಮಾತ್ರ ಗುಂಡಿ ಮುಚ್ಚುವ ಕಾರ್ಯ ನಡೆಯುತ್ತಿದೆ. ಒಳ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾಗೆಯೇ ಇವೆ. ಈಗ ಮೋದಿಯವರು ಬರುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ಮಾಡುತ್ತಿದ್ದಾರೆ. ಮಾನ್ಯ ಪ್ರಧಾನಮಂತ್ರಿಗಳೇ ದಯವಿಟ್ಟು ಆಗಾಗ ಬೆಂಗಳೂರಿಗೆ ಬರ್ತಾ ಇರಿ. ನಮ್ಮ ರಸ್ತೆಗಳು ಹೈಟೆಕ್ ಆಗ್ತಾ ಇರ್ಲಿ ಎಂದು ಆಟೋ ಚಾಲಕರೊಬ್ಬರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರಪತಿಗಳು, ಪ್ರಧಾನಮಂತ್ರಿಗಳು, ಮುಖ್ಯಮಂತ್ರಿಗಳು, ಸಚಿವರು, ಜನಪ್ರತಿನಿಗಳು ಬಂದರೆ ಮಾತ್ರ ರಸ್ತೆಗಳು ಚೆನ್ನಾಗಿದ್ದರೆ ಸಾಕಾ, ಜನಸಾಮಾನ್ಯರು ಓಡಾಡುವ ರಸ್ತೆಗಳು ಹೇಗಿದ್ದರೆ ನಿಮಗೇನು ಚಿಂತೆ? ತೆರಿಗೆ ಕಟ್ಟುವವರು ನಾವು, ನಮ್ಮ ಜೀವ ಹಾಗೂ ನಮ್ಮ ವಾಹನಗಳಿಗೆ ತೊಂದರೆಯಾದರೆ ನಿಮಗೇನಂತೆ ಎಂದು ಟ್ಯಾಕ್ಸಿ ಚಾಲಕ ಮಹೇಶ್ ಎಂಬುವವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಂದ್ರಶೇಖರ್ ಸಾವಿನ ಪ್ರಕರಣದಲ್ಲಿ ನಿಷ್ಪಕ್ಷಪಾತವಾಗಿ ತನಿಖೆ : ಆರಗ ಜ್ಞಾನೇಂದ್ರ

ಉದ್ಯಾನನಗರಿ, ಐಟಿ ಸಿಟಿ, ಸಿಲಿಕಾನ್ ಸಿಟಿ, ನಿವೃತ್ತರ ಸ್ವರ್ಗ ಎಂದೆಲ್ಲ ಹೆಸರುವಾಸಿಯಾಗಿದ್ದ ಬೆಂಗಳೂರು ಈಗ ರಸ್ತೆಗುಂಡಿಗಳ ನಗರ ಎಂಬ ಅಪಖ್ಯಾತಿಗೆ ಕಾರಣವಾಗಿದೆ. ನ್ಯಾಯಾಲಯ ಸರ್ಕಾರಕ್ಕೆ, ಬಿಬಿಎಂಪಿಗೆ ನಿರಂತರವಾಗಿ ಛೀಮಾರಿ ಹಾಕುತ್ತಲೇ ಬಂದಿದೆ. ಇನ್ನಾದರೂ ಎಚ್ಚೆತ್ತು ರಸ್ತೆಗಳನ್ನು ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕೆಂದು ಜನರ ಆಗ್ರಹವಾಗಿದೆ.

Articles You Might Like

Share This Article