ಬೆಂಗಳೂರು,ಜ.17-ಕೊರೊನಾ ಹಿನ್ನಲೆಯಲ್ಲಿ ಬಂದ್ ಮಾಡಲಾಗಿರುವ ಶಾಲೆಗಳನ್ನು ಮತ್ತೆ ತೆರೆಯಬೇಕು ಎಂದು ಖಾಸಗೀ ಶಾಲೆಗಳ ಒಕ್ಕೂಟ (ರುಪ್ಸಾ ) ಒತ್ತಾಯಿಸಿದೆ. ಕೊರೊನಾ ಹೆಚ್ಚಿರುವ ರಾಜ್ಯದ 6 ಜಿಲ್ಲೆಗಳಲ್ಲಿ ಒಂದರಿಂದ 9ರವರೆಗಿನ ಶಾಲೆಗಳನ್ನು ಸರ್ಕಾರ ಬಂದ್ ಮಾಡಿದೆ.
ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯ ಹತ್ತಿರವಾಗುತ್ತಿರುವುದರಿಂದ 5ನೆ ತರಗತಿ ಮೇಲ್ಪಟ್ಟ ತರಗತಿಗಳನ್ನು ಆರಂಭಿಸಲು ಅನುಮತಿ ನೀಡುವಂತೆ ರುಪ್ಸಾ ಮನವಿ ಮಾಡಿಕೊಂಡಿದೆ. ಕಳೆದ ಒಂದೂವರೆ ವರ್ಷದಿಂದ ಭೌತಿಕ ತರಗತಿಗಳು ಸರಿಯಾಗಿ ನಡೆದಿಲ್ಲ, ಈಗ ಮತ್ತೆ 1 ರಿಂದ 9ನೆ ತರಗತಿವರೆಗೆ ಶಾಲೆಗಳನ್ನು ಬಂದ್ ಮಾಡಲಾಗಿದೆ. ಇದರಿಂದ ಮಕ್ಕಳ ಭವಿಷ್ಯ ಹಾಳಾಗಲಿದೆ.
ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಕೊರೊನಾ ಬಂದಿರುವ ಪ್ರದೇಶಗಳ ಶಾಲೆಗಳನ್ನು ಮಾತ್ರ ಬಂದ್ ಮಾಡುವುದು ಸೂಕ್ತ ಎಂದು ರುಪ್ಸಾ ಅಭಿಪ್ರಾಯಪಟ್ಟಿದೆ. ಯಾವುದೋ ಒಂದು ಶಾಲೆಯ ಮಕ್ಕಳಿಗೆ ಕೊರೊನಾ ಬಂದರೆ ಇಡಿ ಜಿಲ್ಲೆಯ ಶಾಲೆಗಳನ್ನು ಬಂದ್ ಮಾಡುವುದು ಎಷ್ಟು ಸರಿ.
ಕನಿಷ್ಠ 5 ತರಗತಿ ಮೇಲ್ಪಟ್ಟ ತರಗತಿಗಳ ಆರಂಭಕ್ಕಾದರೂ ಅವಕಾಶ ಕೋಡಿ ಎಂದು ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕೋಟೆ ಶಿಕ್ಷಣ ಸಚಿವ ನಾಗೇಶ್ ಅವರಿಗೆ ಪತ್ರ ಬರೆದಿದ್ದಾರೆ. ಕೊರೊನಾ ಕಾರಣದಿಂದ ಬೆಂಗಳೂರು ನಗರ, ಬೆಳಗಾವಿ, ಮೈಸೂರು, ಧಾರವಾಡ, ಮಂಡ್ಯ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಶಾಲೆಗಳನ್ನು ಬಂದ್ ಮಾಡಲಾಗಿದೆ.
