ರಾಜಧಾನಿ ಬೆಂಗಳೂರಿನಲ್ಲಿ ಹಿರಿಜೀವಗಳ ಹತ್ಯೆಗೆ ಹೊಣೆ ಯಾರು..?

Social Share

ನಿವೃತ್ತರ ಸ್ವರ್ಗ ಖ್ಯಾತಿಯ ಸಿಲಿಕಾನ್ ಸಿಟಿಯಲ್ಲಿ ಹಿರಿಯ ಜೀವಗಳಿಗೆ ಬೆಲೆ ಇಲ್ಲದಂತಾಗಿದೆ. ನಿರಂತರವಾಗಿ ವೃದ್ಧ-ವೃದ್ಧೆಯರ ಕೊಲೆ ನಡೆಯುತ್ತಿರುವುದರಿಂದ ಇಲ್ಲಿ ಒಂಟಿ ಜೀವನ ನಡೆಸುವ ಹಿರಿಜೀವಗಳು ಪ್ರಾಣ ಕೈಯಲ್ಲಿಡಿದುಕೊಂಡು ಜೀವನ ದೂಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಒಂಟಿ ಜೀವನ ನಡೆಸುವ ವೃದ್ಧ-ವೃದ್ಧೆಯರನ್ನು ಟಾರ್ಗೆಟ್ ಮಾಡಿಕೊಂಡು ದುಷ್ಕರ್ಮಿಗಳು ಅವರನ್ನು ಭೀಕರವಾಗಿ ಹತ್ಯೆ ಮಾಡಿ ಮೈಮೇಲಿದ್ದ ಆಭರಣ ಹಾಗೂ ಮನೆಯಲ್ಲಿದ್ದ ಹಣ, ಆಭರಣ ದೋಚಿ ಪರಾರಿಯಾಗುತ್ತಿರುವುದು ಮಾಮೂಲಾಗಿದೆ.
ನಗರ ಬೆಳೆದಂತೆ ಅಪರಾಧಗಳ ಸಂಖ್ಯೆಯೂ ಹೆಚ್ಚುತ್ತಿದೆ. ಎಷ್ಟೇ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದರೂ ಅಪರಾಧ ಪ್ರಕರಣಗಳ ಹೆಚ್ಚಳಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ.

ಹಣ, ಆಸ್ತಿ ಸಂಪಾದಿಸಿ, ಮನೆ ನಿರ್ಮಿಸಿಕೊಂಡು ತಮ್ಮ ಹೆತ್ತ ಮಕ್ಕಳು ಸುಖವಾಗಿರಲೆಂದು ಹಿರಿಯ ಜೀವಗಳು ಬಯಸುತ್ತವೆ. ಆದರೆ ಕೌಟುಂಬಿಕ ಕಲಹ ಹಾಗೂ ಇನ್ನಿತರ ಕಾರಣಗಳಿಂದ ಮಕ್ಕಳು ತಮ್ಮ ವಯಸ್ಸಾದ ತಂದೆ-ತಾಯಿಯನ್ನು ಬಿಟ್ಟು ಬೇರೆ ಮನೆ ಮಾಡಿಕೊಂಡು ಹೋಗುತ್ತಿದ್ದಾರೆ.

ಹಾಗಾಗಿ ಹಿರಿಜೀವಗಳು ಒಂಟಿ ಜೀವನ ನಡೆಸಬೇಕಾದ ಪರಿಸ್ಥಿತಿ ಬಂದೊದಗಿದೆ. ಮನೆ ಬಾಡಿಗೆ ಹಾಗೂ ಇನ್ನಿತರ ಮೂಲಗಳಿಂದ ಬರುವ ಹಣದಿಂದ ಜೀವನ ನಡೆಸುವಂತಾಗಿದೆ. ಆದರೆ ಅವರು ಸಂಪಾದಿಸಿ ಕೂಡಿಟ್ಟ ಹಣ, ಆಭರಣ ಅವರುಗಳ ಪ್ರಾಣಕ್ಕೆ ಕುತ್ತು ತರುತ್ತಿದೆ.

ಕಳೆದ ಶನಿವಾರ ಎಚ್‍ಎಸ್‍ಆರ್ ಲೇಔಟ್ 1ನೇ ಹಂತದಲ್ಲಿ ಬಾಡಿಗೆ ಹಣದಿಂದ ಒಂಟಿಯಾಗಿ ಜೀವಿಸುತ್ತಿದ್ದ ಜಯಶ್ರೀ(83) ಎಂಬುವರನ್ನು ದುಷ್ಕರ್ಮಿಗಳು ಕೊಲೆ ಮಾಡಿ ಹಣ, ಆಭರಣ ದೋಚಿ ಪರಾರಿಯಾಗಿದ್ದಾರೆ.

ಈ ಹಿಂದೆ ಇದೇ ರೀತಿ ಎಲೆಕ್ಟ್ರಿಕಲ್ ಉಪಕರಣಗಳ ಸಗಟು ವ್ಯಾಪಾರಿ ಜುಗುರಾಜ್ ಜೈನ್ ಮತ್ತು ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂಟಿ ಜೀವನ ನಡೆಸುತ್ತಿದ್ದ ಯಶೋಧಮ್ಮ(73) ಎಂಬುವರನ್ನು ಕೊಲೆ ಮಾಡಿ ಹಣ, ಆಭರಣ ದೋಚಲಾಗಿತ್ತು.

ಹೀಗೆ ಬೆಂಗಳೂರು ನಗರದಲ್ಲಿ ನಿರಂತರವಾಗಿ ವೃದ್ದ-ವೃದ್ದೆಯರ ಕೊಲೆಗಳು ನಡೆಯುತ್ತಲೇ ಇವೆ. ಒಂಟಿಯಾಗಿ ವಾಸಿಸುವ ವೃದ್ಧರು ತಮ್ಮ ಮನೆ ಬಾಡಿಗೆದಾರರ ಜೊತೆ ಸಲುಗೆಯಿಂದ ಇರುವುದಲ್ಲದೆ ಅವರೊಂದಿಗೆ ಹಣಕಾಸಿನ ವ್ಯವಹಾರ ಇಟ್ಟುಕೊಂಡಿರುತ್ತಾರೆ.

ಸಿ.ಕೆ.ಅಚ್ಚುಕಟ್ಟು ಪೊಲೀಸ್‍ಠಾಣೆ ವ್ಯಾಪ್ತಿಯಲ್ಲಿ ಯಶೋಧಮ್ಮ ಅವರ ಮನೆಯಲ್ಲಿ ಬಾಡಿಗೆಗೆ ಇದ್ದ ಯುವಕನೇ ಆ ಹಿರಿಜೀವವನ್ನು ಭೀಕರವಾಗಿ ಇರಿದು ಕೊಲೆ ಮಾಡಿ ಆಭರಣ ದೋಚಿದ್ದ. ಕೊಲೆ ಮಾಡಿದ್ದ ಆರೋಪಿಗೆ ಯಶೋಧಮ್ಮ ಸಾಲ ನೀಡಿದ್ದರು ಎಂಬುದು ಇಲ್ಲಿ ಉಲ್ಲೇಖಾರ್ಹ.

ನಗರದಲ್ಲಿ ಒಂಟಿ ಜೀವನ ನಡೆಸುವ ಶ್ರೀಮಂತ ಹಿರಿಜೀವಗಳು ತಮ್ಮ ಭದ್ರತೆ ಮತ್ತು ಸುರಕ್ಷತೆಗಾಗಿ ಸೆಕ್ಯುರಿಟಿ ಗಾರ್ಡ್‍ಗಳನ್ನು ನೇಮಿಸಿಕೊಳ್ಳುವುದು ವಾಡಿಕೆಯಾಗಿದೆ. ಆದರೆ ತಮ್ಮ ಪ್ರಾಣ ಹಾಗೂ ಆಸ್ತಿ ರಕ್ಷಣೆಗಾಗಿ ನೇಮಿಸಿಕೊಳ್ಳುವ ರಕ್ಷಕರೇ ಭಕ್ಷಕರಾಗುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ.

ಸೆಕ್ಯೂರಿಟಿಗಾರ್ಡ್‍ಗಳಾಗಿ ಬರುವ ಕೆಲವರು ಕೆಲ ದಿನಗಳ ಕಾಲ ನಂಬಿಕೆ ಬರುವಂತೆ ನಟಿಸಿ ಕೊನೆಗೊಂದು ದಿನ ತಮ್ಮ ಮಾಲೀಕರ ಕತ್ತು ಕೊಯ್ದು ಕೊಲೆ ಮಾಡಿ ಹಣ, ಆಭರಣ ದೋಚಿ ಪರಾರಿಯಾಗುತ್ತಾರೆ. ಜುಗುರಾಜ್ ಜೈನ್ ಅವರ ಪ್ರಕರಣದಲ್ಲಿ ತಮ್ಮ ಸಹಾಯಕನೇ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಕೊಲೆ ಮಾಡಿ ಕೋಟ್ಯಂತರ ನಗದು ಮತ್ತು ಚಿನ್ನಾಭರಣ ದೋಚಿ ಪರಾರಿಯಾಗಿದ್ದ.

ಬಾಡಿಗೆದಾರ, ಸೆಕ್ಯುರಿಟಿಗಾರ್ಡ್, ಸಹಾಯಕರೆ… ಕೊಲೆಗಾರರಾದರೆ ಯಾರನ್ನು ನಂಬುವುದು? ಇದಕ್ಕೆಲ್ಲ ಕಾರಣ ಆಸ್ತಿ, ಹಣ, ಆಭರಣ ಎನ್ನುವುದು ಗಮನಾರ್ಹ ಅಂಶ. ದುಡಿಯುವ ವಯಸ್ಸಿನಲ್ಲಿ ದುಡಿದು ನೆಮ್ಮದಿ ಜೀವನ ನಡೆಸುವ ಹಿರಿಯ ಜೀವಗಳಿಗೆ ಅವರ ಇಳಿಯವಯಸ್ಸಿನಲ್ಲಿ ಜೊತೆಯಲ್ಲಿ ಮಕ್ಕಳು ಇಲ್ಲದಿರುವುದೇ ಈ ಅನಾಹುತಗಳಿಗೆ ಮೂಲ ಕಾರಣವಾಗಿದೆ. ಆಧುನಿಕ ಯುಗದ ಹೆಣ್ಣುಮಕ್ಕಳು ಅತ್ತೆ, ಮಾವ ಸೇರಿದಂತೆ ತುಂಬು ಕುಟುಂಬದಲ್ಲಿ ಜೀವನ ನಡೆಸಲು ಇಷ್ಟವಿಲ್ಲದೆ ಅತ್ತೆಮಾವಂದಿರನ್ನು ತೊರೆದು ಗಂಡ, ಮಕ್ಕಳ ಜೊತೆ ಪ್ರತ್ಯೇಕವಾಗಿ ವಾಸಿಸಲು ಬಯಸುತ್ತಾರೆ.

ತನ್ನಗಿದ್ದ ಒಬ್ಬನೇ ಮಗ ಮನೆ ಬಿಟ್ಟು ಬೇರೆ ಮನೆ ಮಾಡಿಕೊಂಡು ಹೋದಾಗ ಉಂಟಾಗುವ ನೋವು, ಯಾತನೆ ಅದನ್ನು ಅನುಭವಿಸಿದ ತಂದೆ-ತಾಯಿಗಳಿಗೆ ಮಾತ್ರ ಗೊತ್ತು. ಈ ಎಲ್ಲ ನೋವುಗಳನ್ನು ಸಹಿಸಿಕೊಂಡು, ಮಕ್ಕಳು, ಮೊಮ್ಮಕ್ಕಳು ದೂರವಾಗಿದ್ದರೂ ತಾವು ದುಡಿದು ಕೂಡಿಟ್ಟ ಹಣದಲ್ಲಿ ನೆಮ್ಮದಿ ಜೀವನ ನಡೆಸಿಕೊಂಡು ಹೋಗೋಣ ಎಂದರೆ ಅಂಥವರಿಗೆ ಕೊಲೆಗಡುಕರ ಕಾಟ ವಿಪರೀತವಾಗಿದೆ.

ಜೀವನ ಸಂಗಾತಿಯ ಮಾತು ಕೇಳಿಕೊಂಡು ತಂದೆ-ತಾಯಿಯನ್ನು ಕಳೆದುಕೊಳ್ಳುವ ಮಕ್ಕಳು ಹೆತ್ತವರ ಕೊಲೆಯಾದಾಗ ಬಂದು ಕಣ್ಣೀರು ಸುರಿಸುತ್ತಾ ಅವರ ಜೊತೆ ನಾವಿದಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಪಶ್ಚಾತ್ತಾಪಪಡುವಂತಾಗಿದೆ.
ಅನಾಹುತ ಸಂಭವಿಸುವ ಮೊದಲೇ `ಕೂಡಿ ಬಾಳಿದರೆ ಸ್ವರ್ಗ ಸುಖ’ ಎಂಬ ದೊಡ್ಡವರ ಮಾತನ್ನು ಎಲ್ಲರೂ ಪಾಲಿಸಿದರೆ ಇಡೀ ಕುಟುಂಬವೇ ನೆಮ್ಮದಿಯಿಂದ ಇರಬಹುದಾಗಿದೆ.

ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ನಿವೃತ್ತರಾಗುವ ಅದೇಷ್ಟೋ ಮಂದಿ ತಮ್ಮ ನಿವೃತ್ತ ಜೀವನ ನಡೆಸಲು ಬೆಂಗಳೂರನ್ನೇ ಆಯ್ಕೆ ಮಾಡಿಕೊಳ್ಳುವ ಕಾಲವೊಂದಿತ್ತು. ಹೀಗಾಗಿಯೇ ಸಿಲಿಕಾನ್ ಸಿಟಿ ಹೆಗ್ಗಳಿಕೆಯ ಬೆಂಗಳೂರಿಗೆ ನಿವೃತ್ತರ ಸ್ವರ್ಗ ಎಂದು ಕರೆಯಲಾಗುತ್ತಿತ್ತು.

ಆದರೆ ಇತ್ತೀಚೆಗೆ ಒಂಟಿ ಜೀವನ ನಡೆಸುವ ಹಿರಿಯ ಜೀವಗಳ ಪ್ರಾಣಕ್ಕೆ ಬೆಲೆ ಇಲ್ಲದಂತಾಗಿರುವುದರಿಂದ ಬೆಂಗಳೂರು ನಗರ ನಿವೃತ್ತರ ಸ್ವರ್ಗ ಎಂಬ ಖ್ಯಾತಿಯಿಂದ ಹೊರ ಬರುವಂತಾಗಿದೆ.

ಇನ್ನು ಮುಂದಾದರೂ ಪೊಲೀಸರು ನಗರದಲ್ಲಿ ಒಂಟಿ ಜೀವನ ಸಾಗಿಸುತ್ತಾ ಜೀವನ ನಡೆಸುತ್ತಿರುವ ವೃದ್ದ ಜೀವಗಳು ನೆಮ್ಮದಿಯಿಂದ ಬದುಕು ಸಾಗಿಸಲು ಅನುಕೂಲವಾಗುವಂತಹ ವಾತವರಣ ನಿರ್ಮಿಸಬೇಕಾಗಿದೆ ಎಂಬುದು ಪ್ರಜ್ಞಾವಂತ ನಾಗರಿಕರ ಆಗ್ರಹವಾಗಿದೆ.

Articles You Might Like

Share This Article