ಬೆಂಗಳೂರು,ಜ.4- ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಲಾಕ್‍ಡೌನ್ ಮಾಡಬೇಕೆ ? ಬೇಡವೇ ಎಂಬುದು ಇಂದು ಸಂಜೆ ನಡೆಯಲಿರುವ ಮಹತ್ವದ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ನಿರ್ಧಾರವಾಗಲಿದೆ. ಶನಿವಾರ-ಭಾನುವಾರ ವಾರಾಂತ್ಯದ ಲಾಕ್‍ಡೌನ್, ಈಗಿರುವ ಕಫ್ರ್ಯೂ ಸಮಯವನ್ನು ವಿಸ್ತರಿಸುವುದು ಹಾಗೂ ರಾಜ್ಯದ ಗಡಿಭಾಗಗಳಲ್ಲಿ ಹೆಚ್ಚಿನ ಬಿಗಿ ಕ್ರಮ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಸಂಪೂರ್ಣವಾಗಿ ಕಡಿವಾಣ ಹಾಕದೆ ಒಂದಿಷ್ಟು ಕಠಿಣ ನಿಯಮಗಳನ್ನು ರೂಪಿಸುವುದು ಸೇರಿದಂತೆ ಎಲ್ಲಾ ಸಾಧ್ಯ ಸಾಧ್ಯತೆಗಳನ್ನು ಸರ್ಕಾರ ಮುಕ್ತವಾಗಿಟ್ಟುಕೊಂಡಿದೆ.
ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಕೆ.ಸುಧಾಕರ್, ಕಂದಾಯ ಸಚಿವ ಆರ್.ಅಶೋಕ್ ಹಾಗೂ ಆರೋಗ್ಯ ಸಚಿವಾಲಯದ ಹಿರಿಯ ಅಕಾರಿಗಳು ಸೇರಿದಂತೆ ಮತ್ತಿತರರ ಜೊತೆ ಮಹತ್ವದ ಸಭೆ ನಡೆಸಲಿದ್ದಾರೆ.
ಕಳೆದ ಒಂದು ವಾರದಿಂದ ರಾಜ್ಯದಲ್ಲಿ ನಿರಂತರವಾಗಿ ಕೋವಿಡ್ ಪ್ರಕರಣಗಳು ಏರುಮುಖವಾಗುತ್ತಿದ್ದು, ಇದನ್ನು ನಿಯಂತ್ರಿಸಲು ಸರ್ಕಾರ ಕೆಲವು ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳುವ ಸಂಭವವಿದೆ. ಇಂದು ಯಾವುದೇ ಕಠಿಣ ನಿರ್ಧಾರ ಸರ್ಕಾರದಿಂದ ಪ್ರಕಟವಾಗದಿದ್ದರೂ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ತನ್ನ ತೀರ್ಮಾನವನ್ನು ಪ್ರಕಟಿಸಲಿದೆ.
ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ಕೋವಿಡ್ ಪಾಸಿವಿಟಿ ದರ ಶೇ.2ಕ್ಕಿಂತಲೂ ಹೆಚ್ಚಾಗುತ್ತಿದ್ದು, ಜನತೆಯಲ್ಲಿ ಆತಂಕವನ್ನು ಸೃಷ್ಟಿಸಿದೆ. ಪಾಸಿವಿಟಿ ದರ ಶೇ.5ರಷ್ಟು ಹಾಗೂ ಐಸಿಯು ಬೆಡ್‍ಗಳಲ್ಲಿ ಶೇ.40ರಷ್ಟು ದಾಖಲಾದರೆ ಸರ್ಕಾರ ತಕ್ಷಣವೇ ಹಿಂದುಮುಂದು ನೋಡದೆ ಲಾಕ್‍ಡೌನ್ ಮಾಡಬೇಕೆಂದು ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.
ಈ ಬಗ್ಗೆ ಇಂದಿನ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಲಿದ್ದು, ಈಗಾಗಲೇ ಮಹಾರಾಷ್ಟ್ರ, ದೆಹಲಿ, ಪಶ್ಚಿಮಬಂಗಾಳ ಸೇರಿದಂತೆ ಮತ್ತಿತರ ಕಡೆ ಕೈಗೊಂಡಿರುವ ನಿಯಮಗಳನ್ನು ರಾಜ್ಯದಲ್ಲೂ ಮುಂದುವರೆಸಬೇಕೆ ಎಂಬ ಬಗ್ಗೆ ಮುಖ್ಯಮಂತ್ರಿಯವರು ತಾಂತ್ರಿಕ ಸಲಹಾ ಸಮಿತಿ ಸದಸ್ಯರಿಂದ ಅಭಿಪ್ರಾಯ ಪಡೆಯಲಿದ್ದಾರೆ.
ಒಂದು ಮೂಲದ ಪ್ರಕಾರ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಆತಂಕಗೊಂಡಿರುವ ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಿಸಲು ಎಲ್ಲಾ ಆಯ್ಕೆಗಳನ್ನು ಮುಕ್ತವಾಗಿ ಇಟ್ಟುಕೊಂಡಿದೆ. ಈಗಾಗಲೇ ರಾತ್ರಿ 10ರಿಂದ ಮುಂಜಾನೆ 5ರವರೆಗೆ ನೈಟ್ ಕಫ್ರ್ಯೂ ವಿಧಿಸಲಾಗಿದೆ. ಸಾಧ್ಯಸಾಧ್ಯತೆಗಳು: ಕಳೆದ ಒಂದು ವಾರದಿಂದ ನಿರಂತರವಾಗಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಸರ್ಕಾರ ಕಠಿಣ ನಿಯಮಗಳನ್ನು ಜಾರಿ ಮಾಡುವ ಬಗ್ಗೆ ಚಿಂತನೆ ನಡೆಸಿದೆ.
ಕಫ್ರ್ಯೂ ಸಮಯವನ್ನು ಮತ್ತಷ್ಟು ವಿಸ್ತರಣೆ ಮಾಡುವುದು, ರಾಜಧಾನಿ ಬೆಂಗಳೂರು, ಬೆಳಗಾವಿ, ಮೈಸೂರು, ದಕ್ಷಿಣ ಕನ್ನಡ ಸೇರಿದಂತೆ ಮತ್ತಿತರ ಕಡೆ ಕಫ್ರ್ಯೂ ಸಮಯವನ್ನು ವಿಸ್ತರಣೆ ಮಾಡುವ ಸಂಭವವಿದೆ. ಒಟ್ಟು ಕೋವಿಡ್ ಪ್ರಕರಣಗಳಲ್ಲಿ ಶೇ.75ರಷ್ಟು ಬೆಂಗಳೂರು ಮಹಾನಗರದಲ್ಲೇ ಕಾಣಿಸಿಕೊಳ್ಳುತ್ತಿರುವುದರಿಂದ ಇಲ್ಲಿ ಮತ್ತಷ್ಟು ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಇದರ ಜೊತೆಗೆ ಸೆಮಿಲಾಕ್‍ಡೌನ್, ವಾರಾಂತ್ಯದ ಲಾಕ್‍ಡೌನ್, ಪ್ರಮುಖ ಸ್ಥಳಗಳಿಗೆ ನಿರ್ಬಂಧ ವಿಸುವುದು, ಸರ್ಕಾರಿ, ಖಾಸಗಿ ಕೈಗಾರಿಕೆಗಳು, ಗಾರ್ಮೆಂಟ್ಸ್ ಮತ್ತಿತರ ಕಡೆ ಶೇ.50 -50ರಷ್ಟು ಸಿಬ್ಬಂದಿಗಳ ಹಾಜರಾತಿ ಸೇರಿದಂತೆ ಮತ್ತಿತರ ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳುವ ಸಂಭವವಿದೆ.
ಈ ಹಿಂದೆ ಶನಿವಾರ ಮತ್ತು ಭಾನುವಾರ ಲಾಕ್‍ಡೌನ್ ಜಾರಿ ಮಾಡಿದ ಪರಿಣಾಮ ಕೋವಿಡ್ ಪಾಸಿವಿಟಿ ದರ ಒಂದಿಷ್ಟು ಪ್ರಮಾಣದಲ್ಲಿ ಕಡಿಮೆಯಾಗಿತ್ತು. ಇದೀಗ ಸರ್ಕಾರವು ಈ ಆಯ್ಕೆಯನ್ನು ಸಹ ಮುಕ್ತವಾಗಿರಿಸಿದ್ದು, ಸಾಧ್ಯವಾದರೆ ವಾರಾಂತ್ಯದ ಎರಡು ದಿನಗಳ ಕಾಲ ಲಾಕ್‍ಡೌನ್ ಮಾಡುವ ಸಾಧ್ಯತೆಯೂ ಇದೆ.
ಇನ್ನು ಬಸ್, ರೈಲ್ವೆ, ವಿಮಾನ ನಿಲ್ದಾಣಗಳು, ಮಾಲ್‍ಗಳು ಮಾರುಕಟ್ಟೆ, ಸಂತೆಮೈದಾನ, ಆಟೋ ನಿಲ್ದಾಣ, ಪಾರ್ಕ್‍ಗಳು, ಜಿಮ್ ಕೇಂದ್ರಗಳು, ಸ್ವಿಮಿಂಗ್ ಪೂಲ್, ಸಿನಿಮಾ ಮಂದಿರಗಳು ಸೇರಿದಂತೆ ಮತ್ತಿತರ ಕಡೆ ಬಿಗಿಯಾದ ನಿಯಮಗಳನ್ನು ಮುಂದುವರೆಸುವ ಬಗ್ಗೆಯೂ ಚಿಂತನೆ ನಡೆದಿದೆ.
ಕಾಲೇಜುಗಳು, ಶಾಲೆಗಳಲ್ಲಿ, ವಿವಿಗಳು, ಐಟಿಬಿಟಿ ಕಂಪನಿಗಳು ಸೇರಿದಂತೆ ಮತ್ತಿತರ ಕಡೆ ಶೇ.50ರಷ್ಟು ಸಿಬ್ಬಂದಿಗೆ ಅನುಮತಿ ನೀಡುವ ಸಾದ್ಯತೆ ಇದೆ.
ಪ್ರಮುಖ ಪ್ರವಾಸಿ ತಾಣಗಳಲ್ಲೂ ಪ್ರವಾಸಿಗರಿಗೆ ನಿರ್ಬಂಧ ವಿಸಲಾಗುತ್ತಿದೆ. ಕರಾವಳಿ ತೀರಾ ಪ್ರದೇಶಗಳಾದ ದಕ್ಷಿಣ ಕನ್ನಡ, ಉಡುಪಿ, ಕಾರವಾರಗಳಲ್ಲಿ ಸಮುದ್ರಗಳಿಗೆ ದೇಶವಿದೇಶಗಳಿಂದ ದೊಡ್ಡ ಸಂಖ್ಯೆಯ ಪ್ರವಾಸಿಗರು ಆಗಮಿಸುತ್ತಿದ್ದು ಕೋವಿಡ್ ಹರಡಲು ಇದು ಕೂಡ ಕಾರಣವಾಗಲಿದೆ. ಹೀಗಾಗಿ ಇಲ್ಲಿಯೂ ನಿಬಂಧನೆ ವಿಸಲಾಗುತ್ತದೆ ಎಂದು ಹೇಳಲಾಗಿದೆ.
ಉಳಿದಂತೆ ಪ್ರವಾಸಿ ತಾಣಗಳಿಗೆ ಕಡಿವಾಣ ಬೀಳುವ ಸಂಭವವಿದೆ. ಇಂದು ನಡೆಯುವ ಸಭೆಯಲ್ಲಿ ಸರ್ಕಾರ ಎಲ್ಲ ಸಾಧ್ಯಸಾಧ್ಯತೆಗಳ ಬಗ್ಗೆ ಚರ್ಚಿಸಿ ಗುರುವಾರ ನಡೆಯುವ ಸಚಿವ ಸಂಪುಟ ಸಭೆಯ ಬಳಿಕ ತನ್ನ ಮುಂದಿನ ನಿರ್ಧಾರವನ್ನು ಪ್ರಕಟಿಸಲಿದೆ.
