ಹೈದರಾಬಾದ್,ಜ.25-ಸೈಬರ್ ಕಳ್ಳರು ಸಹಕಾರಿ ಬ್ಯಾಂಕ್‍ವೊಂದರ ಸರ್ವರ್‍ಗಳನ್ನು ಹ್ಯಾಕ್ ಮಾಡಿ ಸುಮಾರು 12 ಕೋಟಿ ರೂ.ಗಳನ್ನು ಲೂಟಿ ಮಾಡಿರುವ ಘಟನೆ ತೆಲಂಗಾಣದ ಹೈದರಾಬಾದ್‍ನಲ್ಲಿ ನಡೆದಿದೆ. ಇದು ನಗರದಲ್ಲೇ ಅತಿದೊಡ್ಡ ಸೈಬರ್ ವಂಚನೆ ಪ್ರಕರಣವಾಗಿದೆ.
ಸೈಬರ್ ಕಳ್ಳರು ಬ್ಯಾಂಕ್‍ನ ಸರ್ವರ್‍ಗಳನ್ನು ಹ್ಯಾಕ್ ಮಾಡಿದ ನಂತರ ಸುಮಾರು 100ಕ್ಕೂ ಹೆಚ್ಚು ಮುಖ್ಯ ಖಾತೆಗಳಿಗೆ ಲಾಗಿನ್ ಆಗಿರುವುದು ಮಾತ್ರವಲ್ಲದೆ ಆ ಖಾತೆಗಳಿಂದ 12 ಕೋಟಿ ರೂ.ಗಳನ್ನು ಬೇರೆ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ.
ಹೈದರಾಬಾದ್ ನಗರದಲ್ಲಿರುವ ಆಂಧ್ರಪ್ರದೇಶ ಮಹೇಶ್ ಕೋ ಆಪರೇಟಿವ್ ಬ್ಯಾಂಕ್‍ನ ಸರ್ವರ್‍ಗಳನ್ನು ಹ್ಯಾಕ್ ಮಾಡಿ 12 ಕೋಟಿ ರೂ. ಲೂಟಿ ಮಾಡಿರುವ ಬಗ್ಗೆ ಬ್ಯಾಂಕ್ ಅಕಾರಿಯೊಬ್ಬರು ನೀಡಿರುವ ದೂರು ಆಧರಿಸಿ ಸೈಬರ್ ವಿಭಾಗದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ .
ಬ್ಯಾಂಕ್ ಖಾತೆಗಳ ಆಂತರಿಕ ಪರಿಶೀಲನೆ ಸಂದರ್ಭದಲ್ಲಿ ಭಾರೀ ಪ್ರಮಾಣದ ಹಣ ವರ್ಗಾವಣೆ ಆಗಿರುವ ಅಂಶ ಬೆಳಕಿಗೆ ಬಂದಿದ್ದು, ಕೂಡಲೇ ಬ್ಯಾಂಕ್ ಅಕಾರಿಗಳು ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದು, ಯಾರ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗಿದೆ ಎಂಬುದರ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಆಂಧ್ರಪ್ರದೇಶದ ಪ್ರತಿಷ್ಠಿತ ಮಹೇಶ್ ಸಹಕಾರಿ ಬ್ಯಾಂಕ್, ಹೈದರಾಬಾದ್‍ನಲ್ಲಿ ಕೇಂದ್ರ ಕಚೇರಿ ಹೊಂದಿದ್ದು, ನಾಲ್ಕು ರಾಜ್ಯಗಳಲ್ಲಿ 45 ಶಾಖೆಗಳನ್ನು ಹೊಂದಿದೆ.
