ಬೆಂಗಳೂರು,ಜ.22- ಆನ್‍ಲೈನ್ ಒಲಿಂಪಿ ಟ್ರೇಡಿಂಗ್‍ನಲ್ಲಿ ಹಣ ತೊಡಗಿಸಿ ನಷ್ಟವುಂಟಾಗಿ ಮಾಡಿಕೊಂಡಿದ್ದ ಸಾಲದ ಹಣ ತೀರಿಸಲು ಬ್ಯಾಂಕ್ ದರೋಡೆ ಮಾಡಿದ್ದ ಮೆಕ್ಯಾನಿಕಲ್ ಎಂಜಿನಿಯರನ್ನು ಬಂಧಿಸಿ ನಗದೂ ಸೇರಿದಂತೆ 85.38 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳುವಲ್ಲಿ ಮಡಿವಾಳ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಾಮಾಕ್ಷಿಪಾಳ್ಯದ ನಿವಾಸಿಧೀರಜ್ (28) ಬಂಧಿತ ಮೆಕಾನಿಕಲ್ ಎಂಜನಿಯರ್. ಇವರ ತಂದೆ ಗಾರೆ ಮೇಸ್ತ್ರಿ. ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಈತನಿಗೆ 30 ಸಾವಿರ ಸಂಬಳ ಬರುತ್ತಿತ್ತು. ವಿದ್ಯಾವಂತನಾದ ಧೀರಜ್ ಆಮಿಷಕ್ಕೆ ಒಳಗಾಗಿ ಒಲಿಂಪಿ ಟ್ರೇಡಿಂಗ್‍ನಲ್ಲಿ ಹಣ ತೊಡಗಿಸಿ ಸಂಪೂರ್ಣ ನಷ್ಟ ಮಾಡಿಕೊಂಡಿರುತ್ತಾರೆ. ನಂತರ ಕ್ರೆಡಿಟ್‍ಕಾರ್ಡ್, ಬಜಾಜ್ ಫೈನಾನ್ಸ್ ಮತ್ತು ಸ್ನೇಹಿತರಿಂದ 35 ಲಕ್ಷ ರೂ. ಸಾಲ ಮಾಡಿಕೊಂಡಿದ್ದಾನೆ.
ಸಾಲಗಾರರು ಹಣ ವಾಪಸ್ ಕೊಡುವಂತೆ ಒತ್ತಾಯಿಸುತ್ತಿದ್ದರು. ಹಣ ಹೊಂದಿಸಲು ಗೂಗಲ್‍ನಲ್ಲಿ ಬ್ಯಾಂಕ್ ದರೋಡೆ ಹೇಗೆ ಮಾಡಬಹುದು ಎಂದು ಸರ್ಚ್ ಮಾಡಿದ್ದಾನೆ.ಧೀರಜ್ ಬ್ಯಾಂಕ್ ದರೋಡೆಗೆ ನಿರ್ಧರಿಸಿ ಒಂದು ವಾರಗಳ ಕಾಲ 20ಕ್ಕೂ ಹೆಚ್ಚು ವಿವಿಧ ಬ್ಯಾಂಕ್‍ಗಳಿಗೆ ಹೋಗಿ ಯಾವ ವೇಳೆಯಲ್ಲಿ ಜನರು ಕಡಿಮೆಯಿರುತ್ತಾರೆ, ಯಾವ ಬ್ಯಾಂಕ್‍ಗಳಲ್ಲಿ ಸೆಕ್ಯೂರಿಟಿಗಾರ್ಡ್ ಇರುವುದರಿಲ್ಲ ಎಂಬುದನ್ನು ನೋಡಿಕೊಂಡಿದ್ದಾನೆ. ನಂತರ ದರೋಡೆಗೆ ಮಡಿವಾಳ ಠಾಣೆ ವ್ಯಾಪ್ತಿಯಲ್ಲಿರುವ ಎಸ್‍ಬಿಐ ಬ್ಯಾಂಕ್ ಆರಿಸಿಕೊಳ್ಳುತ್ತಾನೆ.
ಜ.14ರಂದು ಸಂಜೆ 5.40ರಿಂದ 6 ಗಂಟೆ ಮಧ್ಯೆ ಎಸ್‍ಬಿಐ ಬ್ಯಾಂಕಿನ ಅಕಾರಿ ಮತ್ತು ಸಿಬ್ಬಂದಿ ಕೆಲಸ ಮುಗಿಸಿ ಹೊರಡುವ ಸಮಯದಲ್ಲಿ ಆರೋಪಿಯು ಮುಖಕ್ಕೆ ಮಾಸ್ಕ್ ಧರಿಸಿ ಬಂದಿದ್ದಾನೆ.ಬ್ಯಾಂಕಿನ ಮುಖ್ಯದ್ವಾರದ ಬಾಗಿಲು ಹಾಕುತ್ತಿದ್ದ ಸಿಬ್ಬಂದಿ ಕತ್ತಿನ ಬಳಿ ಚಾಕು ಹಿಡಿದು ಹೆದರಿಸಿ ಬ್ಯಾಂಕಿನ ಬಾಗಿಲು ಕೀ ತೆಗೆದು ಹಣ ಕೊಡುವಂತೆ ಕೇಳಿದ್ದಾನೆ.
ಸ್ಟ್ರಾಂಗ್‍ರೂಂ ಬಳಿ ಕರೆದೊಯ್ದು, ಅಲ್ಲಿನ ಕೀ ತೆಗೆಸಿ ಲಾಕರ್ ಓಪನ್ ಮಾಡಿ ಅದರಲ್ಲಿದ್ದ 3,76,960ರೂ. ಹಣ ಹಾಗೂ 16ಪ್ಯಾಕೆಟ್‍ಗಳಲ್ಲಿಟ್ಟಿದ್ದ 1 ಕೆಜಿ 805 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ತೆಗೆದುಕೊಂಡು ದರೋಡೆಕೋರ ಪರಾರಿಯಾಗಿ ಕೆಲವು ಸಾಲಗಾರರಿಗೆ ಹಣ ವಾಪಸ್ ನೀಡಿದ್ದಾನೆ.
ಆರೋಪಿಯು ದರೋಡೆನಂತರ ಚಿಕ್ಕಬಳ್ಳಾಪುರ, ಅನಂತಪುರ, ಬಳ್ಳಾರಿ ಸೇರಿದಂತೆ ವಿವಿಧಕಡೆ ಸುತ್ತಾಡಿಕೊಂಡಿದ್ದನು. ಬ್ಯಾಂಕ್ ದರೋಡೆ ಬಗ್ಗೆ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಡಿಸಿಪಿ ಶ್ರೀನಾಥ್ ಎಂ. ಜೋಶಿ, ಎಸಿಪಿಗಳಾದ ಕರಿಬಸವನಗೌಡ, ಸುೀರ್ ಎಂ.ಹೆಗಡೆ ಅವರ ನೇತೃತ್ವದಲ್ಲಿ ಎರಡು ತಂಡಗಳನ್ನು ರಚಿಸಲಾಗಿತ್ತು.
ಈ ತಂಡಗಳು ಕಾರ್ಯಾಚರಣೆ ನಡೆಸಿ ಬ್ಯಾಂಕ್ ಹಾಗೂ ಸುತ್ತಮುತ್ತಲಿನ ಸಿಸಿ ಟಿವಿಗಳ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಯ ಬಗ್ಗೆ ಮಾಹಿತಿ ಕಲೆಹಾಕಿ ಕೊನೆಗೂ ಬಲೆಗೆ ಬೀಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯಿಂದ ಒಟ್ಟು 85.38 ಲಕ್ಷ ರೂ. ಮೌಲ್ಯದ 1 ಕೆಜಿ 805 ಗ್ರಾಂ ಚಿನ್ನದ ಆಭರಣ, 6.50ಲಕ್ಷ ರೂ. ಹಣ, ಕಾಲೇಜ್ ಬ್ಯಾಗ್, ಮೊಬೈಲ್, ಚಾಕು ವಶಪಡಿಸಿಕೊಂಡಿದ್ದಾರೆ.
ಯಶಸ್ವಿ ಕಾರ್ಯಾಚರಣೆ ನಡೆಸಿದ ಅಕಾರಿ ಮತ್ತು ಸಿಬ್ಬಂದಿಯನ್ನು ನಗರ ಪೊಲೀಸ್ ಆಯುಕ್ತ ಕಮಲ್‍ಪಂಥ್ ಹಾಗೂ ಹೆಚ್ಚುವರಿ ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.
