ಬೆಂಗಳೂರು, ಫೆ. 16- ಸಂಗೀತಗಾರರಿಗೆ ಭಾಷೆಯ ಬೇಲಿಯನ್ನು ಹಾಕಿಕೊಳ್ಳಬಾರದು ಎಂಬ ಮಾತಿದೆ, ಈ ಮಾತನ್ನು ಬಪ್ಪಿ ಲಹಿರಿ ತಮ್ಮ ಚಿತ್ರ ಜೀವನದಲ್ಲಿ ತಮ್ಮ ಜೀವಿತದವರೆಗೂ ಅಳವಡಿಸಿಕೊಂಡು ಬಂದಿದ್ದರು. ಬಂಗಾಳಿ ಚಿತ್ರರಂಗದಿಂದ ಚಿತ್ರರಂಗದಲ್ಲಿ ವೃತ್ತಿ ಆರಂಭಿಸಿದರೂ ಕೂಡ ನಂತರ ತಮಿಳು, ಗುಜರಾತಿ, ತೆಲುಗು, ಹಿಂದಿ ಸಿನಿಮಾಗಳಲ್ಲೂ ತಮ್ಮ ಮಧುರವಾದ ಕಂಠ ಸಿರಿಯಿಂದ ಗಮನ ಸೆಳೆದಿದ್ದರು, ಎಷ್ಟೋ ಚಿತ್ರಗಳು ಲಹಿರಿ ಅವರ ಗೀತೆಯಿಂದಲೇ ಸಕ್ಸಸ್ ಆಗಿರುವ ನಿದರ್ಶನಗಳು ಇವೆ.
ಬಪ್ಪಿ ಲಹಿರಿ ಅವರು ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಬಂದಿದ್ದು ದ್ವಾರಕೀಶ್ ನಿರ್ಮಾಣದ ಹಾಗೂ ನಿರ್ದೇಶನದ ಆಫ್ರಿಕಾದಲ್ಲಿ ಶೀಲಾ ಂಬ ಮಹೋನ್ನತ ಸಿನಿಮಾದ ಮೂಲಕ. 1986ರಲ್ಲಿ ತೆರೆಕಂಡ ಈ ಚಿತ್ರದ ಟೈಟಲ್ ಗೀತೆಯಾದ ಶೀಲಾ ಓ ಮೈ ಶೀಲಾ ಹಾಡು ಇಂದಿಗೂ ಗುನುಗುವಂತಾಗಿರುವುದು ಬಪ್ಪಿ ಲಹಿರಿಯ ಗಾನ ಲಹರಿಯಿಂದಲೇ.
ಈ ಸಿನಿಮಾದಲ್ಲಿರುವ ತಕ್ಕದಿಮಿ ತಾನಾ ಹಾಗೂ ಹೇ ಹೆಣ್ಣು ಇಲ್ಲಿದೆ ಎಂಬ ಗೀತೆಗಳನ್ನು ಕೂಡ ಬಪ್ಪಿ ಲಹಿರಿ ಹಾಡಿದ್ದರು. ಮಂಜುಳಾ ಗುರುರಾಜ್, ಯೇಸುದಾಸ್ ಅವರು ಕೂಡ ಬಪ್ಪಿಯೊಂದಿಗೆ ತಮ್ಮ ಸ್ವರವನ್ನು ಜೋಡಿಸಿದ್ದರು. ಚರಣ್‍ರಾಜ್ ಹಾಗೂ ಶೀಲಾ ಛಡ್ಡಾ ಅವರು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು.
1986ರಲ್ಲಿ ತೆರೆಕಂಡ ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ಭವ್ಯ ನಟಿಸಿದ್ದ ಕೃಷ್ಣ ನೀ ಬೇಗನೆ ಬಾರೋ ಚಿತ್ರಕ್ಕೆ ಸಂಗೀತ ನೀಡಿದ್ದ ಬಪ್ಪಿ ಲಹಿರಿ ಸಂಗೀತ ಸಂಯೋಜಿಸಿದ್ದ ಮಮ್ಮಿ ಮಮ್ಮಿ ಮಮ್ಮಿ, ಅಲರೆ ಅಲಾರೆ ಮುಕುಂದ ಮುರಾರೆ ಸೇರಿದಂತೆ ಎಲ್ಲಾ ಹಾಡುಗಳು ಇಂದಿಗೂ ಸಂಗೀತ ಪ್ರೇಮಿಗಳ ಮೆಚ್ಚಿನ ಗೀತೆಗಳಾಗಿವೆ.
ಸಾಹಸಸಿಂಹ ವಿಷ್ಣುವರ್ಧನ್, ರೂಪಾಗಂಗೂಲಿ (ಮಹಾಭಾರತದ ದ್ರೌಪದಿ ಖ್ಯಾತಿ) ನಟಿಸಿದ್ದ ಪೊಲೀಸ್ ಮತ್ತು ದಾದಾ (1991)ಚಿತ್ರಕ್ಕೂ ಬಪ್ಪಿ ಲಹಿರಿ ಸಂಗೀತ ಸಂಯೋಜಿಸಿದ್ದರು. ಈ ಸಿನಿಮಾದ ಹಿಂದಿ ರೇಮೇಕ್ ಚಿತ್ರಕ್ಕೂ ಇವರೇ ಸಂಗೀತ ನೀಡಿದ್ದರು.
1989ರಲ್ಲಿ ತೆರೆಕಂಡ ರೆಬೆಲ್ ಸ್ಟಾರ್ ಅಂಬರೀಶ್, ಪ್ರಣಯರಾಜ ಶ್ರೀನಾಥ್ ಅಭಿನಯದ ಗುರು ಚಿತ್ರಕ್ಕೂ ಸಂಗೀತ ನೀಡಿದ್ದ ಬಪ್ಪಿ ಲಹಿರಿ 2014ರಲ್ಲಿ ತೆರೆಕಂಡಿದ್ದ ನೀನಾಸಂ ಸತೀಶ್ ಹಾಗೂ ಶೃತಿ ಹರಿಹರನ್ ಅಭಿನಯದ ಮಂಡ್ಯ ಇನ್ ಲವ್ ಸಿನಿಮಾದ ಕರೆಂಟು ಹೋದ ಟೈಮಲ್ಲಿ ಗೀತೆಗೆ ತಮ್ಮ ಸುಮಧುರ ಕಂಠವನ್ನು ನೀಡಿದ್ದ ಬಪ್ಪಿ ಲಹಿರಿ ಈಗ ತಮ್ಮ ಗಾಯನವನ್ನು ನಿಲ್ಲಿಸಿದ್ದರೂ ಕೂಡ ಅವರು ಹಾಡಿರುವ ಸಹಸ್ರಾರು ಗೀತೆಗಳು ಅವರನ್ನು ಶಾಶ್ವತವಾಗಿ ಇರುವಂತೆ ಮಾಡಲಿವೆ.
