ಬೆಂಗಳೂರು,ಜ.22- ನಿಮ್ಮ ಸ್ವಾರ್ಥ ಸಾಧನೆಗಾಗಿ ಸಮಾಜವನ್ನು ಒಡೆಯುವ ಕೆಲಸ ಮಾಡಿದರೆ ಪ್ರತಿಕೂಲ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕೂಡಲಸಂಗಮ ಪೀಠದ ಶ್ರೀ ಬಸವ ಮೃತ್ಯುಂಜಯ ಸ್ವಾಮೀಜಿ ಅವರು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿಗೆ ನೇರ ಎಚ್ಚರಿಕೆ ನೀಡಿದ್ದಾರೆ.
ನೀವು ಎಂಎಲ್ಸಿ, ಶಾಸಕ, ಸಚಿವ ಅಥವಾ ಸಿಎಂ ಆಗಬೇಕೆಂದು ಜಿಲ್ಲೆ, ತಾಲ್ಲೂಕು, ಗ್ರಾಮಪಂಚಾಯ್ತಿಗೊಂದು ಪೀಠ ಮಾಡಿಕೊಳ್ಳಿ. ನಾನು ಬೇಡ ಎನ್ನುವುದಿಲ್ಲ. ಆದರೆ, ನಿಮ್ಮ ಸ್ವಾರ್ಥಕ್ಕಾಗಿ ಸಮಾಜವನ್ನು ದುರ್ಬಳಕೆ ಮಾಡಿಕೊಂಡರೆ ಸರಿ ಇರುವುದಿಲ್ಲ ಎಂದು ಸ್ವಾಮೀಜಿಗಳು ಬಹಿರಂಗವಾಗಿ ಗುಡುಗಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಮಶಾಲಿ ಸಮುದಾಯವನ್ನು ಒಗ್ಗೂಡಿಸಲು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಸಮಾಜದ ರಾಷ್ಟ್ರೀಯ ಅಧ್ಯಕ್ಷರಾದ ವಿಜಯಾನಂದ ಕಾಶಪ್ಪನವರ್ ಹೋರಾಟ ಮಾಡಿದ್ದೇವೆ. ದಯವಿಟ್ಟು ಸಮಾಜವನ್ನು ಒಡೆಯುವ ಕೆಲಸ ಮಾಡಬೇಡಿ ಎಂದು ನಿರಾಣಿಗೆ ಮನವಿ ಮಾಡಿದರು.
ಪಂಚಮಶಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಿಕ್ಕರೆ ಜಯಮೃತ್ಯುಂಜಯಸ್ವಾಮೀಜಿ, ಯತ್ನಾಳ್ ಮತ್ತು ಕಾಶ್ಯಪ್ಪನವರಿಗೆ ಎಲ್ಲಿ ಒಳ್ಳೆಯ ಹೆಸರು ಬರುತ್ತದೆ ಎಂಬ ಆತಂಕ ನಿರಾಣಿಗೆ ಶುರುವಾಗಿದೆ. ನೀವು ಮೂರನೆ ಪೀಠ ಪ್ರಾರಂಭಿಸಿದರೆ ನಾವು ಹಿಂದೆ ಸರಿಯುವುದಿಲ್ಲ. ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಸ್ಪಷ್ಟಪಡಿಸಿದರು.
ಈ ಹಿಂದೆ ರಾಜ್ಯದಲ್ಲಿ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಸಿಎಂ ಸ್ಥಾನಕ್ಕೆ ನನ್ನ ಹೆಸರು ಸೂಚಿಸಿ ಎಂದು ನಿರಾಣಿ ಮನವಿ ಮಾಡಿದ್ದರು. ಆಗ ನಾನು ಮೂವರಲ್ಲಿ ಯಾರು ಬೇಕಾದರೂ ಆಗಿ ಎಂದು ಹೇಳಿದ್ದೆ. ಆದರೆ, ಅವರಿಗೆ ಆ ಸ್ಥಾನ ಸಿಗದಿದ್ದಕ್ಕೆ ನನ್ನ ಮೇಲೆ ಮುನಿಸಿಕೊಂಡಿದ್ದಾರೆ ಎಂದು ಟೀಕಿಸಿದರು.
ಯಾವಾಗ ಅವರಿಗೆ ಮುಖ್ಯಮಂತ್ರಿ ಸ್ಥಾನ ಕೈ ತಪ್ಪಿತೋ ನನ್ನ ಮೇಲೆ ಮುನಿಸಿಕೊಂಡು ಮೂರನೆ ಪೀಠ ಸ್ಥಾಪಿಸಲು ಹೊರಟಿದ್ದಾರೆ. ಇದಕ್ಕೆ ನನ್ನ ಬೆಂಬಲವಿದೆ ಎಂದು ಸಹ ಹೇಳಿದ್ದಾರೆ. ನಿರಾಣಿ ಅವರನ್ನು ಮುಖ್ಯಮಂತ್ರಿ ಮಾಡಲು ಮೂರನೆ ಪೀಠ ಸ್ಥಾಪನೆಯಾಯಿತೇ ಎಂದು ಸ್ವಾಮೀಜಿ ಪ್ರಶ್ನಿಸಿದರು.
ಪಂಚಮಶಾಲಿ ಪೀಠವನ್ನು ಈ ಸಮುದಾಯದ ಅನೇಕ ಹಿರಿಯರು ತ್ಯಾಗ, ಬಲಿದಾನ ಮಾಡಿ ಕಟ್ಟಿದ್ದಾರೆ. ಸಮುದಾಯ ಒಗ್ಗಟ್ಟಾಗಿರಲಿ ಎಂದು ಅನೇಕರು ಶ್ರಮಿಸಿದ್ದಾರೆ. ಅನೇಕ ಶಾಸಕರು ನಮ್ಮ ಮೀಸಲಾತಿ ಹೋರಾಟಕ್ಕೆ ಬೆಂಬಲ ಕೊಟ್ಟಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಮಗೆ ನ್ಯಾಯ ಕೊಡುವ ಭರವಸೆ ಇದೆ. ಆದರೆ, ನಿರಾಣಿ ಅವರು ಸ್ವಾರ್ಥಕ್ಕಾಗಿ ಸಮುದಾಯವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.
ಪೀಠಗಳು ಸಮಾಜದ ಅಭಿವೃದ್ಧಿಗೆ ಸ್ಥಾಪನೆಯಾಗಬೇಕು. ಯಾರನ್ನು ಸಚಿವರು ಇಲ್ಲವೇ ಮುಖ್ಯಮಂತ್ರಿ ಮಾಡಲು ಅಲ್ಲ. ಮೂರನೆ ಪೀಠದ ಸ್ಥಾಪನೆ ಉದ್ದೇಶವೇ ನಿರಾಣಿ ಸಿಎಂ ಆಗಲು ಎಂಬ ತಪ್ಪು ಸಂದೇಶ ಸಮುದಾಯದಲ್ಲಿ ಹರಡಿದೆ. ನಮಗೆ ಸಿಎಂ ಮಂತ್ರಿ ಸ್ಥಾನಕ್ಕಿಂತ ಸಮುದಾಯದ ಹಿತ ಮುಖ್ಯ ಎಂದರು.
ನಾವು 712 ಕಿ.ಮೀ. ಪಾದಯಾತ್ರೆಯನ್ನು ಸಮುದಾಯದ ಹಿತಕ್ಕಾಗಿ ಮಾಡಿದೆವು. ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನವನ್ನೂ ಸಹ ನಡೆಸಿದೆವು. ಇಡೀ ಸಮುದಾಯ ಒಗ್ಗಟ್ಟಿರುವಾಗ ನಿರಾಣಿಯವರು ತಮಗೆ ಸ್ಥಾನಮಾನ ತಪ್ಪಿದ್ದಕ್ಕಾಗಿ ಒಡಕು ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ನೀವು ಗ್ರಾಮ, ಮನೆಗೊಂದು ಪೀಠ ಮಾಡಿಕೊಳ್ಳಿ. ಸಮಾಜ ಒಗ್ಗೂಡಿಸುವ ಕೆಲಸ ಯಾರು ಮಾಡುತ್ತಿದ್ದಾರೆ? ಒಡೆಯುವ ಕೆಲಸ ಯಾರು ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದರು.
ನೀವು ಮುಖ್ಯಮಂತ್ರಿಯಾಗಲು ನಮ್ಮ ಅಭ್ಯಂತರವಿಲ್ಲ. ನಿಮ್ಮ ಹಣೆಬರಹದಲ್ಲಿ ಬರೆದಿದ್ದರೆ ಆಗಲಿ. ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಆದರೆ, ನಿಮ್ಮ ಮೂಲ ಉದ್ದೇಶವೇ ಸ್ವಾಹಿತಾಸಕ್ತಿಯಿಂದ ಕೂಡಿದೆ. ಕಷ್ಟಪಟ್ಟು ಕಟ್ಟಿರುವ ಸಮುದಾಯವನ್ನು ಒಡೆಯಬೇಡಿ ಎಂದು ಶ್ರೀಗಳು ಮನವಿ ಮಾಡಿದರು.
ಪಂಚಮಶಾಲಿ ಸಮುದಾಯದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಮಾತನಾಡಿ, ಮುರುಗೇಶ್ ನಿರಾಣಿ ಮುಖ್ಯಮಂತ್ರಿ ಆಗಲು ಹೊರಟಿದ್ದಾರೆ. ಅದಕ್ಕಾಗಿ ಮೂರನೆ ಪೀಠ ಸ್ಥಾಪಿಸಿದ್ದಾರೆ. ನೀವು ಸಿಎಂ ಆಗುವುದಿರಲಿ ಮೊದಲು ಮಂತ್ರಿ ಸ್ಥಾನ ಉಳಿಸಿಕೊಳ್ಳಿ ಎಂದು ವ್ಯಂಗ್ಯವಾಡಿದರು.
ಸಂಪುಟದಿಂದ ಅವರನ್ನು ಕೈ ಬಿಡಬಹುದೆಂಬ ಕಾರಣಕ್ಕಾಗಿ ಮೂರನೆ ಪೀಠ ಸ್ಥಾಪಿಸಿದ್ದಾರೆ. ಮೊದಲು ಮಂತ್ರಿಯಾಗಲು ಕೂಡಲಸಂಗಮ ಪೀಠ, ಹರಿಹರ ಪೀಠ ಬೇಕಾಯಿತು. ಈಗ ಎರಡೂ ಪೀಠಗಳು ಕೈಕೊಟ್ಟಿದ್ದರಿಂದ ಮೂರನೆ ಪೀಠ ರಚನೆಯಾಗಿದೆ. ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಈ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
