ಯಾವುದೇ ಒತ್ತಡ, ಪ್ರಭಾವಕ್ಕೆ ಒಳಗಾಗದೆ ತನಿಖೆ : ಗೃಹ ಸಚಿವ ಬೊಮ್ಮಾಯಿ

ಬೆಂಗಳೂರು, ಮಾ.27- ಯಾವುದೇ ಒತ್ತಡ, ಪ್ರಭಾವಕ್ಕೆ ಒಳಗಾಗದೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಸತ್ಯಾಸತ್ಯತೆ ಹೊರಗೆಳೆಯುವಂತೆ ವಿಶೇಷ ತನಿಖಾ ತಂಡ (ಎಸ್‍ಐಟಿ)ಕ್ಕೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‍ಐಟಿಗೆ ನಾವು ಮುಕ್ತ ಸ್ವತಂತ್ರ ನೀಡಿದ್ದು, ನ್ಯಾಯಸಮ್ಮತ ತನಿಖೆ ನಡೆಸಬೇಕೆಂದು ನಿರ್ದೇಶನ ನೀಡಿದ್ದೇನೆ.

ಯಾರೊಬ್ಬರ ಪ್ರಭಾವ, ಒತ್ತಡ ಇಲ್ಲದಂತೆ ತನಿಖೆ ನಡೆಸಿ ಸತ್ಯಾಂಶವನ್ನು ಬಯಲು ಮಾಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಕೂಲಂಕಶವಾಗಿ ತನಿಖೆ ನಡೆಸಿ ರಾಜ್ಯದ ಜನತೆಗೆ ಸತ್ಯಾಸತ್ಯತೆ ಗೊತ್ತಾಗಬೇಕು. ಹೀಗಾಗಿ ನಮ್ಮ ಸರ್ಕಾರ ಎಸ್‍ಐಟಿಗೆ ಈ ಪ್ರಕರಣ ವಹಿಸಿದೆ. ಯಾರನ್ನು ಕೂಡ ನಾವು ರಕ್ಷಣೆ ಮಾಡುವುದಿಲ್ಲ. ಯಾವುದೇ ಪ್ರಭಾವಕ್ಕೂ ಒಳಗಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಆಡಿಯೋ ಮತ್ತು ವಿಡಿಯೋಗಳು ಈಗ ಧಾರಾವಾಹಿಯಂತೆ ಪ್ರತಿದಿನ ಹೊರಬರುತ್ತಿವೆ. ನಾನು ಈ ಸಂದರ್ಭದಲ್ಲಿ ಯಾವುದೇ ಪ್ರತಿಕ್ರಿಯೆ ಕೊಡುವುದು ಅಷ್ಟು ಸರಿಯಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವ ನಾನು ಮಾತನಾಡುವುದು ಕೂಡ ಸಮಂಜಸವಲ್ಲ. ತನಿಖೆ ಮುಗಿಯುವವರೆಗೂ ಯಾವುದೇ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಹೇಳಿದರು.

ಎಸ್‍ಐಟಿಯವರು ಸಿಡಿ, ಆಡಿಯೋ ಮತ್ತು ವಿಡಿಯೋ ಈ ಮೂರೂ ಕೋನಗಳಲ್ಲೂ ತನಿಖೆ ನಡೆಸುತ್ತಾರೆ. ತಪ್ಪಿತಸ್ಥರು ಯಾರೇ ಇರಲಿ ಅವರಿಗೆ ಕಾನೂನು ಪ್ರಕಾರ ಏನು ಶಿಕ್ಷೆಯಾಗಬೇಕೋ ಅದೇ ಆಗುತ್ತದೆ. ದೇಶದಲ್ಲಿ ಯಾರೊಬ್ಬರೂ ಕೂಡ ಕಾನೂನಿಗಿಂತ ದೊಡ್ಡವರಲ್ಲ ಎಂದು ತಿಳಿಸಿದರು.

ಯುವತಿ ಮುಂದೆ ಬಂದು ಪೊಲೀಸರಿಗೆ ಮಾಹಿತಿ ನೀಡಬೇಕು. ಇಲ್ಲವೆ ಅವರೇ ಹೇಳಿದ ಸ್ಥಳಕ್ಕೆ ನಾವು ನಮ್ಮ ಮಹಿಳಾ ಸಿಬ್ಬಂದಿಯನ್ನು ಕಳುಹಿಸಿಕೊಡಲು ಸಿದ್ಧರಿದ್ದೇವೆ. ಅವರಿಗೆ ಎಲ್ಲ ರೀತಿಯ ರಕ್ಷಣೆಯನ್ನೂ ಕೊಡುತ್ತೇವೆ. ವಿಚಾರಣೆಗೆ ಹಾಜರಾಗದಿದ್ದರೆ ಏನು ಮಾಡಲು ಸಾಧ್ಯ ಎಂದು ಬೊಮ್ಮಾಯಿ ಪ್ರಶ್ನಿಸಿದರು.

ಎಲ್ಲರನ್ನೂ ರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ಅವರಿಗೆ ಯಾವ ರೀತಿ ಭದ್ರತೆ ಬೇಕೋ ಅಷ್ಟನ್ನೂ ಕೊಡುತ್ತೇವೆ. ನೀವು ಸ್ವಯಂಪ್ರೇರಿತರಾಗಿ ಬಂದು ಹೇಳಿಕೆ ನೀಡಿ ಎಂದು ಬೊಮ್ಮಾಯಿ ಮನವಿ ಮಾಡಿದರು.