ತನ್ವೀರ್ ಸೇಠ್ ಹತ್ಯೆಗೆ ಯತ್ನಸಿದವನು ಪಿಎಫ್‍ಐ-ಎಸ್‍ಡಿಪಿಐ ಕಾರ್ಯಕರ್ತ : ಗೃಹ ಸಚಿವ ಬೊಮ್ಮಾಯಿ

ಮೈಸೂರು, ನ.20- ಶಾಸಕ ತನ್ವೀರ್ ಸೇಠ್ ಅವರ ಹತ್ಯೆ ಯತ್ನ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಪಿಎಫ್‍ಐ ಹಾಗೂ ಎಸ್‍ಡಿಪಿಐ ಸಂಘಟನೆಯಲ್ಲಿ ಸಕ್ರಿಯ ಕಾರ್ಯಕರ್ತನಾಗಿದ್ದ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ನಗರದಲ್ಲಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಭೇಟಿ ನೀಡಿದ ಗೃಹ ಸಚಿವರು, ತನ್ವೀರ್ ಸೇಠ್ ಅವರ ಆರೋಗ್ಯ ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನ್ವೀರ್ ಸೇಠ್ ಅವರು ಈಗ ಆರೋಗ್ಯವಾಗಿದ್ದಾರೆ. ಇಂದು ಬೆಳಗ್ಗೆ ವಾರ್ಡ್‍ನಲ್ಲಿ ವಾಕಿಂಗ್ ಮಾಡಿದ್ದಾರೆ. ಎದ್ದು ಕುಳಿತು ಆಹಾರ ಸೇವಿಸಿದ್ದಾರೆ. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಯಾವುದೇ ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಅವರ ಮೇಲಿನ ಹಲ್ಲೆ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಬಂಧಿತ ಆರೋಪಿ ಪಿಎಫ್‍ಐ ಹಾಗೂ ಎಸ್‍ಡಿಪಿಐ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಎಂಬುದು ಪೊಲೀಸರ ತನಿಖೆಯಿಂದ ಸ್ಪಷ್ಟವಾಗಿದೆ ಎಂದು ತಿಳಿಸಿದರು. ರಾಜಕೀಯ ಪೈಪೋಟಿ, ರಾಜಕೀಯ ಅಸ್ತಿತ್ವಕ್ಕಾಗಿ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಂದ ಈ ಕೃತ್ಯ ನಡೆದಿದೆ ಎಂಬುವುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಸ್ಪಷ್ಟವಾಗಿದ್ದು, ಇನ್ನೆರಡು ದಿನಗಳಲ್ಲಿ ತನಿಖೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.

ಮೈಸೂರಿನ ರಾಜು ಹತ್ಯೆ, ಬೆಂಗಳೂರಿನಲ್ಲಿ ನಡೆದಿರುವ ಕೆಲವು ಹತ್ಯೆ ಪ್ರಕರಣಗಳಿಗೂ ಹಾಗೂ ತನ್ವೀರ್‍ಸೇಠ್ ಪ್ರಕರಣಕ್ಕೂ ಸಂಬಂಧವಿದ್ದಂತೆ ಕಂಡುಬರುತ್ತಿದೆ. ಹಾಗಾಗಿ ಪೊಲೀಸರು ಈ ನಿಟ್ಟಿನಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ. ತನಿಖೆಯಲ್ಲಿ ಈ ಅಂಶ ಸ್ಪಷ್ಟವಾದರೆ ಅಂತಹ ಸಂಘಟನೆಯನ್ನು ರದ್ದುಪಡಿಸುವುದರ ಬಗ್ಗೆ ಚಿಂತನೆ ನಡೆಸುವುದಾಗಿ ತಿಳಿಸಿದರು.