ನಾಳೆ ದೆಹಲಿಗೆ ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು,ಏ.28- ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಎಲ್ಲಾ ಹೈಕೋರ್ಟ್‍ಗಳ ಮುಖ್ಯ ನ್ಯಾಯಮೂರ್ತಿಗಳು ಹಾಗೂ ಮುಖ್ಯಮಂತ್ರಿಗಳ ಸಭೆ ಶನಿವಾರ ನಡೆಯಲಿದ್ದು, ನಾಳೆ ದೆಹಲಿಗೆ ತೆರಳುವು ದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶನಿವಾರ ಎಲ್ಲ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಹಾಗೂ ಮುಖ್ಯಮಂತ್ರಿಗಳ ಸಭೆ ನಡೆಯಲಿದೆ. ತಮಗೂ ಕೂಡ ಆಹ್ವಾನ ಬಂದಿರುವುದರಿಂದ ಈ ಸಭೆಯಲ್ಲಿ ಪಾಲ್ಗೊಳ್ಳಲು ತೆರಳುವುದಾಗಿ ತಿಳಿಸಿದರು.

ದೆಹಲಿಗೆ ತೆರಳಿದ ಪಕ್ಷದ ವರಿಷ್ಠರನ್ನು ಭೇಟಿಯಾಗಿ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಗ್ಗೆ ಮಾತುಕತೆ ನಡೆಸುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ಈ ಕ್ಷಣದವರೆಗೂ ನಾನು ವರಿಷ್ಠರನ್ನು ಭೇಟಿಯಾಗುವ ಸಮಯ ಅವಕಾಶ ನಿಗದಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ದೆಹಲಿಗೆ ತೆರಳಿದ ನಂತರ ಅಲ್ಲಿನ ಬೆಳವಣಿಗೆಗಳನ್ನು ನೋಡಿಕೊಂಡು ನಂತರ ತೀರ್ಮಾನಿಸುತ್ತೇನೆ. ವರಿಷ್ಠರನ್ನು ಭೇಟಿಯಾಗುವ ಬಗ್ಗೆ ಸಮಯ ನಿಗದಿಯಾಗಿಲ್ಲ. ಅಲ್ಲಿಗೆ ಹೋದ ಮೇಲೆ ಏನಾಗುತ್ತದೆಯೋ ನೋಡೋಣ ಎಂದು ಮಾರ್ಮಿಕವಾಗಿ ಹೇಳಿದರು.

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮೌಲ್ಯ ರ್ವತ ತೆರಿಗೆಯನ್ನು ಇಳಿಕೆ ಮಾಡಬೇಕೆಂಬ ಪ್ರಧಾನಿ ಹೇಳಿಕೆಗೆ ಕಾಂಗ್ರೆಸ್ ಏನೇ ಮಾಡಿದರೂ ವಿರೋಧಿಸುತ್ತದೆ. ವಿರೋಧ ಪಕ್ಷದಲ್ಲಿದ್ದುಕೊಂಡು ಪ್ರತಿಯೊಂದನ್ನೂ ವಿರೋಧಿಸಬೇಕು ಎಂಬುದು ಆ ಪಕ್ಷದ ನಿಲುವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಎಡಿಜಿಪಿ ಅಮೃತ್ ಪಾಲ್ ಅವರನ್ನು ವರ್ಗಾವಣೆ ಮಾಡಿರುವುದು ಎಸ್‍ಐ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬುದಕ್ಕೆ ಸಾಕ್ಷಿ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ತಿರುಗೇಟು ಕೊಟ್ಟ ಬೊಮ್ಮಾಯಿ, ಅಧಿಕಾರಿಗಳ ವರ್ಗಾವಣೆ ಒಂದು ಸಹಜ ಪ್ರಕ್ರಿಯೆ. ಅನೇಕ ಎಡಿಜಿಪಿಗಳ ವರ್ಗಾವಣೆಯಾಗಿದೆ. ಅದರಂತೆ ಇದು ಕೂಡ. ಇದರಲ್ಲಿ ಯಾವುದೇ ವಿಶೇಷತೆ ಇಲ್ಲ ಎಂದು ಸ್ಪಷ್ಟಪಡಿಸಿದರು.