ಬೆಂಗಳೂರು, ಫೆ.14- ಸರ್ಕಾರದ ಬೊಕ್ಕಸಕ್ಕೆ ಅವಗೂ ಮೊದಲೇ ನಿರೀಕ್ಷೆಗೂ ಮೀರಿದ ತೆರಿಗೆ ಸಂಗ್ರಹಣೆಯಾಗಿರುವ ಹಿನ್ನೆಲೆಯಲ್ಲಿ ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರು ದಾಖಲೆಯ ಮೂರು ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡಿಸಲಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಬೊಮ್ಮಯಿ ಅವರು ಬಿಜೆಪಿ ಸರ್ಕಾರದ ಕೊನೆಯ ಹಾಗೂ (ವೈಯಕ್ತಿಕವಾಗಿ 2ನೆ ) ಬಜೆಟ್ ಮಂಡಿಸಲಿದ್ದು, ಅಂದಾಜು 3 ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡನೆ ಮಾಡಲಿದ್ದಾರೆ ಎಂದು ಗೊತ್ತಾಗಿದೆ. ದೇಶದಲ್ಲೇ ಅತಿ ಹೆಚ್ಚು ತೆರಿಗೆ ಸಂದಾಯ ಮಾಡುವ ಮೂರನೇ ಸ್ಥಾನದಲ್ಲಿರುವ ಕರ್ನಾಟಕವು ಹೆಚ್ಚಿನ ಗಾತ್ರದ ಬಜೆಟ್ ಮಂಡನೆಯಲ್ಲಿ ನೆರೆಯ ಮಹಾರಾಷ್ಟ್ರ ಹೊರತುಪಡಿಸಿದರೆ ಕರ್ನಾಟಕ ಎರಡನೆ ರಾಜ್ಯ ಎಂಬ ಹೆಗ್ಗಳಿಕೆ ಪಾತ್ರವಾಗಲಿದೆ.
ಸರ್ಕಾರದ ಬೊಕ್ಕಸ ತುಂಬಿಸುವ ಸಾರಿಗೆ (ಮೋಟಾರು ವಾಹನ ತೆರಿಗೆ), ಅಬಕಾರಿ ಮತ್ತು ವಾಣಿಜ್ಯ ತೆರಿಗೆಗಳು ಮತ್ತು ಅಂಚೆಚೀಟಿಗಳು ಮತ್ತು ನೋಂದಣಿ ಇಲಾಖೆಗಳು ಆದಾಯದ ಎಲ್ಲಾ ಪ್ರಮುಖ ಮೂಲಗಳಿಂದ ನಿರೀಕ್ಷೆಗೂ ಮೀರಿದ ತೆರಿಗೆ ಸಂಗ್ರಹವಾಗಿದೆ.
ಕಳೆದ ಬಾರಿ 2,65,720 ಕೋಟಿ ರೂ. ಬಜೆಟ್ ಮಂಡನೆ ಮಾಡಿದ್ದ ಬೊಮ್ಮಯಿ ಅವರು, ಮೊದಲ ಬಾರಿಗೆ 3 ಲಕ್ಷ ಕೋಟಿ ಬಜೆಟ್ ಮಂಡನೆ ಮಾಡಲಿದ್ದಾರೆ.
ರಾಜ್ಯ ಸರ್ಕಾರ ತನ್ನ ಪ್ರಮುಖ ತೆರಿಗೆ ಮೂಲವಾದ ವಾಣಿಜ್ಯ ತೆರಿಗೆ ಮೂಲಕ ಭರ್ಜರಿ ಆದಾಯ ಸಂಗ್ರಹ ಮಾಡಿದೆ. ಕಳೆದ 9 ತಿಂಗಳಲ್ಲಿ 60,000 ಸಾವಿರ ಕೋಟಿಗೂ ಅಧಿಕ ವಾಣಿಜ್ಯ ತೆರಿಗೆ ಸಂಗ್ರಹವಾಗಿದ್ದು, ಮಾರ್ಚ್ ತಿಂಗಳ ಅಂತ್ಯಕ್ಕೆ 70 ಸಾವಿರ ಕೋಟಿ. ವಾಣಿಜ್ಯ ತೆರಿಗೆ ಸಂಗ್ರಹದ ನಿರೀಕ್ಷೆ ಇದೆ. 2022-23 ಸಾಲಿನಲ್ಲಿ 77,010 ಕೋಟಿ ರೂ. ವಾಣಿಜ್ಯ ತೆರಿಗೆ ಸಂಗ್ರಹಿಸುವ ಅಂದಾಜು ಮಾಡಲಾಗಿದೆ.
ಕೋವಿಡ್ ಲಾಕ್‍ಡೌನ್ ಬಳಿಕ ಆರ್ಥಿಕತೆ ಚೇತರಿಸಿಕೊಂಡಿದ್ದು, ತೆರಿಗೆ ಸಂಗ್ರಹದಲ್ಲಿ ಉತ್ತಮ ಪ್ರಗತಿ ಕಂಡಿದೆ. ಅದರಲ್ಲೂ ಪ್ರಮುಖ ಆದಾಯ ಮೂಲವಾದ ವಾಣಿಜ್ಯ ತೆರಿಗೆ ನಿರೀಕ್ಷೆಗಿಂತ ಭರಪೂರ ಪ್ರಮಾಣದಲ್ಲಿ ಸಂಗ್ರಹವಾಗುತ್ತಿದೆ. ಕಳೆದ ವರ್ಷಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಬಂದಿದೆ.
ಜಿಎಸ್‍ಟಿ ಹಾಗೂ ತೈಲ ಮೇಲಿನ ಮಾರಾಟ ತೆರಿಗೆ ಮೂಲಕ ರಾಜ್ಯ ಭರ್ಜರಿ ಆದಾಯ ಸಂಗ್ರಹ ಮಾಡಿದೆ. ಮೊದಲಾರ್ಧ ವರ್ಷದಲ್ಲಿ ರಾಜ್ಯ ಸರ್ಕಾರ ಉತ್ತಮ ಆದಾಯ ಸಂಗ್ರಹಿಸಿದೆ. ಕಳೆದ ಬಾರಿಗಿಂತ ಈ ಬಾರಿ ಆರು ತಿಂಗಳಲ್ಲಿ 70 ಸಾವಿರಕ್ಕೂ ಹೆಚ್ಚಿನ ವಾಣಿಜ್ಯ ತೆರಿಗೆ ಸಂಗ್ರಹ ಮಾಡಲಾಗಿದೆ.
ರಾಜ್ಯ ಸರ್ಕಾರ ಈ ಬಾರಿ ನಿರೀಕ್ಷೆಗಿಂತಲೂ ಹೆಚ್ಚಿಗೆ ಜಿಎಸ್‍ಟಿ ಸಂಗ್ರಹ ಮಾಡುತ್ತಿದೆ.
ಈ ಆರ್ಥಿಕ ವರ್ಷದಲ್ಲಿ 53,220 ಕೋಟಿ ರೂ. ಜಿಎಸ್‍ಟಿ ಸಂಗ್ರಹ ನಿರೀಕ್ಷೆ ಮಾಡಲಾಗಿದೆ. ಮೊದಲಾರ್ಧ ವರ್ಷದಲ್ಲಿ 37,211.53 ಕೋಟಿ ರೂ. ಜಿಎಸ್‍ಟಿ ಸಂಗ್ರಹವಾಗಿದೆ. 2021-22ನೇ ಸಾಲಿನಲ್ಲಿ ಈ ಅವಧಿಯಲ್ಲಿ 34,457.71 ಕೋಟಿ ಜಿಎಸ್‍ಟಿ ಸಂಗ್ರಹ ಮಾಡಲಾಗಿತ್ತು. ಈ ವರ್ಷ 2,759.82 ಕೋಟಿ ರೂ. ಹೆಚ್ಚುವರಿ ಜಿಎಸ್‍ಟಿ ಸಂಗ್ರಹ ಮಾಡಲಾಗಿದೆ.
ಇನ್ನುಳಿದ ಆರು ತಿಂಗಳಲ್ಲಿ ಜಿಎಸ್‍ಟಿ ಸಂಗ್ರಹದಲ್ಲಿ ಗಣನೀಯ ಏರಿಕೆ ಕಾಣಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಬಜೆಟ್ ಅಂದಾಜನ್ನು ಮೀರಿ ಈ ಬಾರಿ ಜಿಎಸ್‍ಟಿ ಸಂಗ್ರಹವಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈವರೆಗೆ ತೈಲ ಮೇಲಿನ ಮಾರಾಟ ತೆರಿಗೆ ರೂಪದಲ್ಲಿ ರಾಜ್ಯ ಸರ್ಕಾರ ಆರು ತಿಂಗಳಲ್ಲಿ ಬರೋಬ್ಬರಿ 9,540.40 ಕೋಟಿ ರೂ. ಆದಾಯ ಸಂಗ್ರಹಿಸಿದೆ. ಕಳೆದ ವರ್ಷ ಇದೇ ಅಧಿವಯಲ್ಲಿ 9,723.37 ಕೋಟಿ ರೂ., ಮಾರಾಟ ತೆರಿಗೆ ಸಂಗ್ರಹ ಮಾಡಲಾಗಿತ್ತು. ಈ ಆರ್ಥಿಕ ವರ್ಷದಲ್ಲಿ 17,640 ಕೋಟಿ ರೂ. ಮಾರಾಟ ತೆರಿಗೆ ಸಂಗ್ರಹ ಅಂದಾಜಿಸಲಾಗಿದೆ. ಕಳೆದ ಆರು ತಿಂಗಳಲ್ಲಿ ರಾಜ್ಯ ಸರ್ಕಾರ ಮಾರಾಟ ತೆರಿಗೆ ರೂಪದಲ್ಲಿ ಭರ್ಜರಿ ತೆರಿಗೆ ಸಂಗ್ರಹ ಮಾಡಿದೆ.
ಇನ್ನು ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ಮಧ್ಯದ ಬಳಕೆಯಲ್ಲಿ ಶೇ.20 ರಿಂದ 30ರಷ್ಟು ಹೆಚ್ಚಳ ಮತ್ತು ಫುಡ್ ಅಂಡ್ ಬಿವರೇಜ್ ಹೆಚ್ಚಳದಿಂದ ಸರ್ಕಾರದ ಬೊಕ್ಕಸಕ್ಕೆ ಹೆಚ್ಚುವರಿ 3 ಸಾವಿರ ಕೋಟಿ ರೂ.ಗಳ ಗುರಿ ಹೊಂದಲಾಗಿದ್ದು, ಅಬಕಾರಿ ಆದಾಯದ ಗುರಿಯಲ್ಲಿ ಮಧ್ಯಂತರ ಹೆಚ್ಚಳದ ಹಿಂದಿನ ಪ್ರಮುಖ ಕಾರಣಗಳು ಎಂದು ಹೇಳಲಾಗುತ್ತದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚುನಾವಣಾ ವರ್ಷದಲ್ಲಿ ಮದ್ಯದ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು (ಎಇಡಿ) ಹೆಚ್ಚಿಸದಿದ್ದರೂ, ರಾಜ್ಯ ಅಬಕಾರಿ ಆದಾಯದ ಗುರಿಯನ್ನು ಇನ್ನೂ 2000 ಕೋಟಿ ರೂ.ಗಳಿಂದ 3000 ಕೋಟಿ ರೂ.ಗೆ ಹೆಚ್ಚಿಸಬಹುದು ಎಂಬ ಊಹಾಪೋಹವಿದೆ.
ಬೆಂಗಳೂರಿನಂತಹ ಮಹಾನಗರಗಳಲ್ಲಿ ಅದ್ಧೂರಿ ಮತ್ತು ವಿಸ್ತಾರವಾದ ಹೊಸ ಮದ್ಯದ ಅಂಗಡಿಗಳ ಸಂಖ್ಯೆಯು ಉದ್ಯಮದ ಬೆಳವಣಿಗೆಯನ್ನು ಸೂಚಿಸುತ್ತಿದೆ. ಆದರೆ, ಮಾರ್ಚ್ ಅಂತ್ಯದ ವೇಳೆಗೆ 3 ಸಾವಿರ ಕೋಟಿ ರೂ.ಗಳ ಆದಾಯದ ಗುರಿ ಸಾಸಲು ಕಷ್ಟವಾಗಬಹುದು ಎಂದು ಹೇಳುತ್ತಾರೆ.
ಅಬಕಾರಿ ಇಲಾಖೆಯು ಅಂಕಿ-ಅಂಶಗಳ ಪ್ರಕಾರ, ಏಪ್ರಿಲ್ 2022 ರಿಂದ ಜನವರಿ 2023ರ ವರೆಗೆ 24,724.27 ಕೋಟಿ ರೂ. ಸಂಗ್ರಹವಾಗಿದೆ, ಇದು 29,000 ಕೋಟಿ ರೂ.ಗಳ ಆದಾಯದ ಗುರಿಯ ಶೇ.85.26 ರಷ್ಟಿದೆ. ಕಳೆದ 2021-22ರ ಆರ್ಥಿಕ ವರ್ಷಕ್ಕೆ ಹೋಲಿಸಿದರೆ, ರಾಜ್ಯ ಅಬಕಾರಿಯು 21,549.94 ಕೋಟಿ ರೂ.ಗಳನ್ನು ಸಂಗ್ರಹಿಸಿದೆ. ಇದು ಆ ವರ್ಷದ 24,580 ಕೋಟಿ ರೂ.ಗಳ ಗುರಿಯ 87.67% ಆಗಿತ್ತು.
ಕಳೆದ ಕೆಲವು ವರ್ಷಗಳಲ್ಲಿ ಇಲಾಖೆಯ ಆದಾಯದ ಗುರಿಗಳನ್ನು ಗಮನಿಸಿದರೆ, ಪ್ರತಿ ವರ್ಷ 1,000 ಕೋಟಿಯಿಂದ 1,500 ಕೋಟಿಗಳವರೆಗೆ ಕ್ರಮೇಣ ಹೆಚ್ಚಳವನ್ನು ತೋರಿಸುತ್ತದೆ. 2020-21ರ ವಾರ್ಷಿಕ ಹಣಕಾಸು ಗುರಿ 22,700 ಕೋಟಿ ರೂ, ಮತ್ತು 2021-22ಕ್ಕೆ 24,580 ಕೋಟಿ ರೂ, 2019-2020 ಕ್ಕೆ 20,950 ಕೋಟಿ ರೂ ಮತ್ತು 2018-19 ರ ಆರ್ಥಿಕ ವರ್ಷದಲ್ಲಿ 19,750 ಕೋಟಿ ರೂ.ಗಳ ಆರ್ಥಿಕ ಗುರಿಯನ್ನು ಹೊಂದಿದ್ದವು.
ವಿವಿಧ ವಲಯಗಳಿಗೆ ಮೀಸಲಿಡುವ ಹಣದ ವಿವರ:
ಕೃಷಿ ಮತ್ತು ಪೂರಕ ಚಟುವಟಿಕೆಗಳು- 40000 ಕೋಟಿ ರೂ.
ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ- 75000 ಕೋಟಿ ರೂ.
ಆರ್ಥಿಕ ಅಭಿವೃದ್ಧಿಗೆ ಉತ್ತೇಜನ- 60000 ಕೋಟಿ ರೂ.
ಬೆಂಗಳೂರು ಸಮಗ್ರ ಅಭಿವೃದ್ಧಿ- 10000 ಕೋಟಿ ರೂ.
ಸಂಸ್ಕøತಿ, ಪರಂಪರೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಗೆ: 400 ಕೋಟಿ ರೂ.
ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವೆ-65,000 ಕೋಟಿ ರೂ.
ಮಹಿಳೆಯರ ಸಬಲೀಕರಣ ಹಾಗೂ ಕ್ಷೇಮಾಭಿವೃದ್ಧಿಗೆ 50,000 ಕೋಟಿ ರೂ.
ಮಕ್ಕಳ ಆಯವ್ಯಯಕ್ಕೆ ಅನುದಾನ 50,000 ಕೋಟಿ ರೂ.
ಎಸ್‍ಸಿ-ಎಸ್‍ಟಿ/ಟಿಎಸ್‍ಪಿಗೆ 35,000 ಕೋಟಿ ರೂ.
ಆರೋಗ್ಯ, ಶಿಕ್ಷಣ, ಕೌಶಲಾಭಿವೃದ್ಧಿ ಮತ್ತು ಇತರ ಜನಕಲ್ಯಾಣ ಕಾರ್ಯಕ್ರಮಗಳಿಗೆ 10000 ಕೋಟಿ ರೂ. ಹೆಚ್ಚುವರಿ ಅನುದಾನ.
#BasavarajBommai #Budget2023, #StateBudget2023, #BommaiBudget, #ಬಜೆಟ್ #ಬಜೆಟ್2023,