ರಾಜಾಹುಲಿ ಕೋಪ ತಣಿಸಲು ಬೊಮ್ಮಾಯಿ ನಾನಾ ಕಸರತ್ತು

Social Share

ಬೆಂಗಳೂರು, ಡಿ.17- ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡು ಬಿಜೆಪಿ ಕೇಂದ್ರ ಸಂಸದೀಯ ಸ್ಥಾನಕ್ಕೆ ಸೀಮಿತವಾಗಿ ಸೈಲೆಂಟಾಗಿರುವ ಬಿ.ಎಸ್.ಯಡಿಯೂರಪ್ಪ ಆಂತರಿಕವಾಗಿ ಸಿಡಿದೆದ್ದಿದ್ದು, ಬಿಜೆಪಿ ರಾಜ್ಯ ಮುಖಂಡರಿಗೆ ತಲೆನೋವು ತಂದೊಡ್ಡಿದೆ.

ರಾಜಾಹುಲಿ ಕೋಪ ಶಮನಕ್ಕೆ ನಾನಾ ಕಸರತ್ತುಗಳನ್ನು ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯ ನಾಯಕರು ಮಾಡುತ್ತಿದ್ದಾರೆ. ಮತ್ತೊಂದು ಕಡೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಬಿಎಸ್‍ವೈ ಅವರನ್ನು ಬಿಜೆಪಿಯ ಪಿತಾಮಹ ಎಂದು ಕರೆಯುವ ಮೂಲಕ ಬಿಕ್ಕಟ್ಟು ಪರಿಹಾರಕ್ಕೆ ಪ್ರಯತ್ನ ನಡೆಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸೈಲೆಂಟಾಗಿರುವ ಯಡಿಯೂರಪ್ಪ ಅವರ ಕೋಪಕ್ಕೆ ಪಕ್ಷದಲ್ಲಿ ಅವರನ್ನು ನಡೆಸಿಕೊಳ್ಳುವ ರೀತಿ ಕಾರಣವಾಗಿದೆ. ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ತೋರಿಸದೆ ಇದ್ದರೂ ಆಂತರಿಕವಾಗಿ ಸಿಟ್ಟಾಗಿದ್ದಾರೆ ಎಂಬುವುದು ಅವರ ಆಪ್ತ ವಲಯದ ಮಾಹಿತಿ. ಪಕ್ಷದಲ್ಲಿ ಅವರನ್ನು ಹಿಂದಿನ ರೀತಿಯಲ್ಲಿ ನೋಡಿಕೊಳ್ಳುತ್ತಿಲ್ಲ.

ಕೊಟ್ಟ ಆಶ್ವಾಸನೆಯನ್ನೂ ಈಡೇರಿಸಿಲ್ಲ ಎಂಬುದು ಅವರ ನೋವಿಗೆ ಕಾರಣ. ಅಷ್ಟೇ ಅಲ್ಲ, ಅವರ ಆಶೀರ್ವಾದದಂತೆ ನಡೆದುಕೊಳ್ಳುತ್ತೇವೆ ಎಂದು ಹೇಳಿದ್ದ ಸಿಎಂ ಬೊಮ್ಮಾಯಿ ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿಲ್ಲ ಎಂಬ ನೋವು ಬಿಎಸ್‍ವೈಗೆ ಇದೆ. ಈ ಕಾರಣದಿಂದಾಗಿ ಅವರು ಜನಸ್ಪಂದನೆ ಯಾತ್ರೆಗೂ ಗೈರಾಗುವ ಮೂಲಕ ಎಚ್ಚರಿಕೆಯ ಸಂದೇಶವನ್ನು ರವಾನೆ ಮಾಡಿದ್ದರು.

ಈ ಎಲ್ಲಾ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ರಾಜ್ಯ ಬಿಜೆಪಿ ಮುಖಂಡರು ಯಡಿಯೂರಪ್ಪ ಕೋಪ ಶಮನ ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ. ಇದರ ಮುಂದುವರಿದ ಭಾಗವಾಗಿಯೇ ರಾಜ್ಯಕ್ಕೆ ಆಗಮಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಯಡಿಯೂರಪ್ಪ ಅವರು ಸಾಕಷ್ಟು ಶ್ರಮಪಟ್ಟು ಪಕ್ಷವನ್ನು ರಾಜ್ಯದಲ್ಲಿ ಕಟ್ಟಿ ಬೆಳೆಸಿದ್ದಾರೆ. ಅವರು ಬಿಜೆಪಿಯ ಪಿತಾಮಹ ಎಂದಿದ್ದರು. ಈ ಮೂಲಕ ಅಸಮಾಧಾನ ಶಮನಕ್ಕೆ ಪ್ರಯತ್ನ ನಡೆಸಿದ್ದರು.

ಇನ್ನು ಬಿಎಸ್‍ವೈ ಸೂಚಿಸಿದ ಕೆಲಸ-ಕಾರ್ಯಗಳು ಸರ್ಕಾರದಲ್ಲಿ ನಡೆಯುತ್ತಿಲ್ಲ ಎಂಬ ಆರೋಪವೂ ಕೇಳಿ ಬರುತ್ತಿದೆ. ಆದರೆ ಇದೀಗ ಬಿಎಸ್‍ವೈ ಒತ್ತಡಕ್ಕೆ ಸಿಎಂ ಬಸವರಾಜ ಬೊಮ್ಮಾಯಿಯೂ ಮಣಿದಿದ್ದಾರೆ. ಶಿಕಾರಿಪುರದ ಮುಖಂಡನಿಗೆ ನಿಗಮದ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಯಡಿಯೂರಪ್ಪ ಸೂಚಿಸಿದ್ದ ಈ ಕೆಲಸ ಆಗಿಲ್ಲ ಎಂಬ ಅಸಮಾಧಾನ ಈ ಬಿಕ್ಕಟ್ಟಿಗೆ ಮೂಲ ಕಾರಣವಾಗಿತ್ತು ಎನ್ನಲಾಗುತ್ತಿತ್ತು.

ಆದರೆ ಇದೀಗ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಅಧ್ಯಕ್ಷರನ್ನಾಗಿ ಹೆಚ್.ಟಿ.ಬಳಿಗಾರ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಈ ಮೂಲಕ ರಾಜಾಹುಲಿ ಕೋಪ ತಣಿಸುವ ಪ್ರಯತ್ನ ನಡೆಸಿದ್ದಾರೆ.

ದಿಢೀರ್ ನಿರ್ಧಾರವಲ್ಲ:
ಮುಖ್ಯಮಂತ್ರಿ ಪಟ್ಟದಿಂದಿಳಿದ ನಂತರ ಕಳೆದ ಜುಲೈನಲ್ಲೇ ಅವರು ಇನ್ನು ಮುಂದೆ ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಶಿಕಾರಿಪುರ ಕ್ಷೇತ್ರದಿಂದ ಪುತ್ರ ವಿಜಯೇಂದ್ರ ಪಕ್ಷದ ಅಭ್ಯರ್ಥಿಯಾಗಿ ವಿಧಾನಸಭೆಗೆ ಸ್ರ್ಪಸುತ್ತಾರೆ, ಇಡೀ ರಾಜ್ಯದಲ್ಲಿ ಪ್ರವಾಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರಲು ನಾನು ಶ್ರಮಿಸುತ್ತೇನೆ, ಮನೆಯಲ್ಲಿ ಕೂರೋ ಮಾತೇ ಇಲ್ಲ ಎಂದೂ ಘೋಷಿಸಿದ್ದರು.

ಇದು ಬಿಜೆಪಿಯಲ್ಲಿ ಎಂಥ ತಳಮಳಕ್ಕೆ ಕಾರಣವಾಯಿತೆಂದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಪ್ರಮುಖ ನಾಯಕರು, ಸಚಿವರು ಯಡಿಯೂರಪ್ಪ ನಿವಾಸಕ್ಕೆ ದೌಡಾಯಿಸಿ ಈ ನಿರ್ಧಾರದಿಂದ ಹಿಂದೆ ಸರಿಯುವಂತೆ ಅವರ ಮನವೊಲಿಸುವ ಮಾತಾಡಿದ್ದರು.

ವಸ್ತುಸ್ಥಿತಿ ಹೀಗಿರುವಾಗ ಚುನಾವಣೆ ಬಂದು ಮನೆ ಬಾಗಿಲು ಬಡಿಯುತ್ತಿರುವ ಹೊತ್ತಲ್ಲಿ ಅವರು ನಿವೃತ್ತಿಯ ಮಾತು ಆಡಿರುವುದು ಸಹಜವಾಗೇ ಕಳವಳ ತಂದಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ನಡೆದ ಉಪ ಚುನಾವಣೆಗಳಲ್ಲಿ ವಿಜಯೇಂದ್ರ ನಡೆಸಿದ ಕಾರ್ಯಾಚರಣೆಗಳು ಅವರನ್ನು ರಾಜಕಾರಣದ ಮುಖ್ಯವಾಹಿನಿಗೆ ತಂದು ನಿಲ್ಲಿಸಿವೆ. ಅಲ್ಲಿಂದಾಚೆ ಅವರು ರಾಜ್ಯ ರಾಜಕಾರಣದಲ್ಲಿ ಹೆಚ್ಚು ಗಮನ ಸೆಳೆದ ಯುವ ನೇತಾರ ಎಂದು ಗುರುತಿಸಲ್ಪಟ್ಟಿದ್ದಾರೆ.

ಬೊಮ್ಮಾಯಿ ಸರ್ಕಾರದ ಮೇಲೆ ಮತ್ತೊಂದು ಬಾಂಬ್ ಸಿಡಿಸಿದ ಸಿದ್ದರಾಮಯ್ಯ..!

ಇದೀಗ ಮುಂಬರುವ ವಿಧಾನಸಭೆ ಚುನಾವಣೆಗೆ ಮೈಸೂರಿನ ವರುಣಾ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗಿ ಅವರು ಕಣಕ್ಕಿಳಿಯುತ್ತಾರೆ ಎಂಬ ಗುಲ್ಲೆದ್ದಿದೆ.ಆದರೆ ವಸ್ತು ಸ್ಥಿತಿಯೇ ಬೇರೆ. ಯಡಿಯೂರಪ್ಪನವರ ರಾಜಕೀಯ ಉತ್ತರಾಧಿಕಾರಿ ಎಂದೇ ಗುರುತಿಸಲ್ಪಡುವ ವಿಜಯೇಂದ್ರ ಈಗಾಗಲೇ ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸಂಬಂಸಿದ ಪೂರ್ವ ತಯಾರಿ ಆರಂಭಿಸಿದ್ದಾರೆ. ಪ್ರತಿ ಮತಗಟ್ಟೆ ವ್ಯಾಪ್ತಿಯಲ್ಲಿ ಅವರ ಸಂಘಟನಾ ಕುಶಲತೆ ಹುಬ್ಬೇರುವಂತೆ ಮಾಡಿದೆ.

ಹಾಗಿದ್ದರೆ ವರುಣಾ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಅವರ ಸ್ಪರ್ಧೆ ಕುರಿತಂತೆ ಕೇಳಿ ಬರುತ್ತಿರುವ ಸುದ್ದಿಗಳು ಪ್ರತಿಪಕ್ಷಗಳನ್ನು ದಿಕ್ಕು ತಪ್ಪಿಸುವ ತಂತ್ರ ಎಂಬುದನ್ನು ಬಿಜೆಪಿ ಮೂಲಗಳು ಒಪ್ಪಿಕೊಳ್ಳುತ್ತವೆ.

ಹಾಗಿದ್ದ ಮೇಲೆ ಯಡಿಯೂರಪ್ಪ ಹೇಳಿಕೆ ವಿಚಾರದಲ್ಲಿ ಬಿಜೆಪಿ ನಾಯಕತ್ವ ತಲ್ಲಣಗೊಂಡಿರುವುದು ಏಕೆ ಎಂಬ ಪ್ರಶ್ನೆಗೆ ಉತ್ತರ ಹುಡುಕಿದರೆ ಪಕ್ಷದಲ್ಲಿ ತಮ್ಮ ಬಿಗಿಯಾದ ಹಿಡಿತ ಹೊಂದುವ ಮೂಲಕ ತಾನೊಬ್ಬ ಪ್ರಶ್ನಾತೀತ ನಾಯಕ ಎಂಬ ವರ್ಚಸ್ಸು ಉಳಿಸಿಕೊಳ್ಳುವ ಉದ್ದೇಶ ಇರುವುದು ಗೊತ್ತಾಗುತ್ತದೆ.

ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಬೆಂಬಲಿಗರಿಗೆ ಪಕ್ಷದ ಟಿಕೆಟ್ ಸಿಗುವಂತೆ ನೋಡಿಕೊಳ್ಳುವುದು ಹಾಗೆಯೇ ಪಕ್ಷದೊಳಗಿನ ತಮ್ಮ ವಿರೋಧಿಗಳಿಗೆ ಟಿಕೆಟ್ ತಪ್ಪುವಂತೆ ಮಾಡುವುದೂ ಇದೆಲ್ಲದರ ಹೊರತಾಗಿಯೂ ಚುನಾವಣೆ ನಂತರ ಬಹುಮತ ಬಂದರೆ ಮುಖ್ಯಮಂತ್ರಿ ಮತ್ತು ಸಚಿವ ಸಂಪುಟ ರಚನೆಯ ವಿಚಾರದಲ್ಲಿ ತಮ್ಮ ಮಾತೇ ಅಂತಿಮವಾಗುವಂತೆ ನೋಡಿಕೊಳ್ಳುವ ತಂತ್ರಗಾರಿಕೆಯೂ ಅಡಗಿದೆ.

ಈ ಮೂಲಕ ವಿಜಯೇಂದ್ರನನ್ನು ಅಧಿಕಾರದ ಪಟ್ಟಕ್ಕೆ ಕೂರಿಸುವುದು ಯಡಿಯೂರಪ್ಪನವರ ತಂತ್ರ. ಬಿಜೆಪಿ ಶಾಸಕ ಯತ್ನಾಳ್ ಬಹಿರಂಗವಾಗೇ ಬಿಎಸ್‍ವೈ ವಿರುದ್ಧ ಯುದ್ಧಕ್ಕೆ ಇಳಿದಿದ್ದು ಪಕ್ಷದ ಕೆಲವು ಕೇಂದ್ರ ನಾಯಕರು ಹಾಗೂ ರಾಜ್ಯ ಘಟಕದ ಒಂದು ಗುಂಪು ಮೌನವಾಗಿ ಅವರ ಬೆನ್ನಿಗೆ ನಿಂತಿದೆ.

#BasavarajBommai #BSYadiyurappa

Articles You Might Like

Share This Article