ಸದನದ ಘನತೆ ಹೆಚ್ಚಿಸಲು ಮೇಲ್ಮನೆ ಸದಸ್ಯರಿಗೆ ಪತ್ರ ಬರೆದ ಸಭಾಪತಿ

ಬೆಂಗಳೂರು,ಫೆ.23-ಸದನದ ಘನತೆ ಮತ್ತು ಗೌರವವನ್ನು ಹೆಚ್ಚಿಸಿಕೊಂಡು ಹೋಗುವ ನಿಟ್ಟಿನಲ್ಲಿ ಈ ಬಾರಿ ಕೆಲವು ಅಮೂಲಾಗ್ರ ಬದಲಾವಣೆ ಮಾಡುವ ಕುರಿತಾಗಿ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ಮುಕ್ತ ಮನಸ್ಸಿನಿಂದ ಹಂಚಿಕೊಳ್ಳಬೇಕೆಂದು ಸಭಾಪತಿ ಬಸವರಾಜ್ ಹೊರಟ್ಟಿ ಅವರು ಮೇಲ್ಮನೆ ಸದಸ್ಯರಿಗೆ ಪತ್ರ ಬರೆದಿದ್ದಾರೆ. ಎರಡು ಪುಟಗಳ ಪತ್ರ ಬರೆದಿರುವ ಅವರು ಇತ್ತೀಚಿನ ದಿನಗಳಲ್ಲಿ ಪ್ರಶ್ನೋತ್ತರ ಅವಧಿಯು ಒಂದು ಗಂಟೆಯೊಳಗೆ ಮುಕ್ತಾಯಗೊಳ್ಳದೆ ಎರಡುಮೂರು ಗಂಟೆಗಳಾಗುತ್ತಿದೆ. ಇದರಿಂದ ಬೇರೆ ಕಲಾಪಗಳನ್ನು ಕೈಗೆತ್ತಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಸದಸ್ಯರು ತಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ನೀಡಬೇಕೆಂದು ಕೋರಿದ್ದಾರೆ.

ಸದನದಲ್ಲಿ ಸದಸ್ಯರು ಮಾತನಾಡುವಾಗ, ಬೇರೆ ಸದಸ್ಯರು ಅನುಸರಿಸಬೇಕಾದ ನಿಯಮಗಳನ್ನು ಚಾಚೂತಪ್ಪದೆ ಎಲ್ಲರೂ ಪಾಲಿಸಬೇಕು. ಸದನದ ಒಳಗೆ ಮೊಬೈಲ್ ನಿಷೇಧಿಸಲಾಗಿದ್ದರೂ ಕೆಲವರು ಅನಗತ್ಯವಾಗಿ ಮೊಬೈಲ್ ತಂದು ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವುದು ನೋವಿನ ಸಂಗತಿ ಎಂದು ವಿಷಾದಿಸಿದ್ದಾರೆ.

ಶಾಸನಸಭೆಯ ಕಾರ್ಯಕಲಾಪಗಳಲ್ಲಿ ಸದಸ್ಯರು ಹೆಚ್ಚು ಹೆಚ್ಚು ಚರ್ಚೆಯಲ್ಲಿ ಪಾಲ್ಗೊಳ್ಳಬೇಕೆಂಬುದು ನನ್ನ ಅನಿಸಿಕೆ. ಇತ್ತೀಚೆಗೆ ವಿಧೇಯಕಗಳ ಪರ್ಯಾಲೋಚನೆ ಹಾಗೂ ಅಂಗೀಕಾರಕ್ಕಾಗಿ ಚರ್ಚೆ ನಡೆಯುವ ಸಂದರ್ಭದಲ್ಲಿ ಸಾಕಷ್ಟು ಗೊಂದಲು ಉಂಟಾಗಿರುವ ಪ್ರಸಂಗಗಳಿವೆ. ಜನಹಿತಕ್ಕಾಗಿ ರೂಪಿಸಲ್ಪಡುವ ಕಾನೂನುಗಳ ಆಳವಾದ ಅಧ್ಯಯನ ಮತ್ತು ಅದರ ಸಾಧಕಬಾಧಕಗಳ ಬಗ್ಗೆ ಎಲ್ಲ ಸದಸ್ಯರು ಪಕ್ಷಾತೀತವಾಗಿ ಬೆಳಕು ಚೆಲ್ಲುವಂತಹ ಚರ್ಚೆಗಳಾಗಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.

ಸದನದ ನಿಯಮಗಳು ಮತ್ತು ಸತ್‍ಸಂಪ್ರದಾಯಗಳಿಗೆ ಚ್ಯುತಿ ಬಾರದಂತೆ ಮುನ್ನೆಡೆಸಿಕೊಂಡು ಹೋಗಲು ಸದನದ ನಿಯಂತ್ರಣ, ಸದಸ್ಯರ ಪಾತ್ರ, ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಮ್ಮ ಅಮೂಲ್ಯವಾದ ಅಭಿಪ್ರಾಯಗಳನ್ನು ಮುಕ್ತವಾಗಿ ತಿಳಿಸಬೇಕು ಎಂದು ಹೇಳಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಎಲ್ಲ ಸದಸ್ಯರ ಹಕ್ಕು. ಆದರೆ ಅದನ್ನೇ ಅಸ್ತ್ರ ಮಾಡಿಕೊಂಡು ಕಲಾಪಗಳಿಗೆ ಅಡ್ಡಿಪಡಿಸುವುದು, ಧಿಕ್ಕಾರಗಳನ್ನು ಕೂಗುವುದು, ಘೋಷಣೆ ಮಾಡುವುದು, ಪ್ಲೇಕಾರ್ಡ್‍ಗಳನ್ನು ಬಳಸುವುದು ಸದನದ ಗೌರವವಕ್ಕೆ ತಕ್ಕದ್ದಲ್ಲ ಎಂದಿರುವ ಅವರು, ಸದನದ ಗೌರವ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಎಲ್ಲಾ ಸದಸ್ಯರು ಮುಕ್ತ ಅಭಿಪ್ರಾಯಗಳನ್ನು ಹಂಚಿಕೊಳ್ಳಬೇಕೆಂದು ಪತ್ರದಲ್ಲಿ ಸುದೀರ್ಘವಾಗಿ ವಿವರಿಸಿದ್ದಾರೆ.