ಪರೀಕ್ಷೆ ನಡೆಸುವುದು ಒಳ್ಳೆಯದು : ಸಚಿವರಿಗೆ ಸಭಾಪತಿ ಹೊರಟ್ಟಿ ಪತ್ರ

Spread the love

ಬೆಂಗಳೂರು,ಏ.5- ಮಕ್ಕಳಿಗೆ ಓದದಿದ್ದರೂ ಪಾಸಾಗಬಹುದು ಎಂಬ ಮನೋಭಾವನೆ ಬರಬಹುದು. ಈಗಾಗಲೇ ಆನ್‍ಲೈನ್, ಆಫ್‍ಲೈನ್ ಮೂಲಕ ಪಾಠಪ್ರವಚನವನ್ನು ಮಾಡಿ ತರಗತಿಗಳನ್ನು ನಡೆಸಿರುವುದರಿಂದ ಪರೀಕ್ಷೆ ಮಾಡುವುದರಲ್ಲಿ ಏನು ತಪ್ಪಿಲ್ಲ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅಭಿಪ್ರಾಯಪಟ್ಟಿದ್ದಾರೆ.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ಅವರು ಸಭೆ ಕರೆದಿರುವ ಹಿನ್ನೆಲೆಯಲ್ಲಿ ಈ ಸಂಬಂಧ ಅವರಿಗೆ ಬಸವರಾಜ್ ಹೊರಟ್ಟಿ ಅವರು ಪತ್ರ ಬರೆದಿದ್ದು, ನನ್ನ ದೃಷ್ಟಿಯಲ್ಲಿ ಸರ್ಕಾರಕ್ಕೆ ಕೆಲವೊಂದು ಕ್ರಮ ಅನಿವಾರ್ಯವಾಗಿರಬಹುದು. ಮಕ್ಕಳಿಗೆ ಪರೀಕ್ಷೆ ಬರೆಯದಿದ್ದರೂ ಪಾಸಾಗಬಹುದು ಎಂಬ ಮನೋಭಾವ ಮೂಡಬಹುದು ಎಂದಿದ್ದಾರೆ.

ಕಲಿಕೆಯಿಂದ ಹೊರಗುಳಿದ ಮಕ್ಕಳು ಹಾಗೂ ಶ್ರಮವಹಿಸಿ ವರ್ಷಪೂರ್ತಿ ಕಲಿತ ಮಕ್ಕಳ ಮಧ್ಯೆ ಪಕ್ಷಪಾತ ಆಗದಂತೆ ಮತ್ತು ಕಲಿತ ಮಕ್ಕಳಿಗೆ ಮುಂದಿನ ದಿನಗಳಲ್ಲಿ ಆಸಕ್ತಿ ಮೂಡಿಸುವುದು ಸಹ ಶಿಕ್ಷಣ ಇಲಾಖೆಯ ಮೂಲ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಪರೀಕ್ಷೆಯ ಗಂಭೀರತೆ ಇರಲಿ ಎಂಬುದು ನಮ್ಮ ಅಭಿಪ್ರಾಯ ಎಂದಿದ್ದಾರೆ.

ರಾಜ್ಯಾದ್ಯಂತ 6ರಿಂದ 9ನೇ ತರಗತಿಗಳನ್ನು ಸ್ಥಗಿತ ಮಾಡಿ ಎಂಬ ಆದೇಶವನ್ನು ಮುಖ್ಯ ಕಾರ್ಯದರ್ಶಿಗಳು ಹೊರಡಿಸಿದ್ದು, ಪರೀಕ್ಷೆ ಸಂದರ್ಭವಾಗಿರುವುದರಿಂದ ಶಾಲೆಗಳಲ್ಲಿ ಎಲ್ಲ ಸುರಕ್ಷತಾ ನಿಯಮಗಳನ್ನು ಪಾಲಿಸಿ ಮಕ್ಕಳಿಗೆ ಸಂಕಲನಾತ್ಮಕ ಮೌಲ್ಯಮಾಪನ ನಡೆಸಲು ಅವಕಾಶ ಕಲ್ಪಿಸಿಕೊಡುವಂತೆ ಶಾಲಾ ಆಡಳಿತ ಮಂಡಳಿಯವರು ಮನವಿ ಮಾಡಿದ್ದಾರೆ.

ರಾಜ್ಯ ಪಠ್ಯಕ್ರಮದ ಕೆಲವು ಶಾಲೆಗಳಲ್ಲಿ ಈಗಾಗಲೇ ಪರೀಕ್ಷೆಯನ್ನು ಮುಗಿಸಲಾಗಿದೆ. ಇನ್ನು ಕೆಲವು ಶಾಲೆಯಲ್ಲಿ ಪರೀಕ್ಷೆ ನಡೆಯುತ್ತಿದೆ. ಕಳೆದ ವರ್ಷವಿಡೀ ಶಾಲೆ ನಡೆದು ಕೋವಿಡ್ ಲಾಕ್‍ಡೌನ್ ಹಿನ್ನೆಲೆಯಲ್ಲಿ ಆ ವರ್ಷ ನಡೆದಿದ್ದ ರೂಪಣಾತ್ಮಕ ಮತ್ತು ಸಂಕಲನಾತ್ಮಕ ಪರೀಕ್ಷೆಯ ಆಧಾರದ ಮೇಲೆ ಸಾಮೂಹಿಕವಾಗಿ ತೇರ್ಗಡೆ ಮಾಡಲಾಗಿತ್ತು.

ಪ್ರಸಕ್ತ ಸಾಲಿನಲ್ಲೂ ಜೂನ್‍ನಿಂದ ಆನ್‍ಲೈನ್ ತರಗತಿ ನಡೆಸಿದರೂ ಶಾಲೆ ಪ್ರಾರಂಭವಾದ ನಂತರ ಆಫ್‍ಲೈನ್ ತರಗತಿಗಳನ್ನು ನಡೆಸಲಾಗಿದೆ. ಹಾಗಾಗಿ ಪರೀಕ್ಷೆ ನಡೆಸಲು ಸಹ ಸಿದ್ದತೆಗಳನ್ನು ಮಾಡಲಾಗಿದೆ. ಪಾಲಕ-ಪೆÇೀಷಕರು ತಮ್ಮ ಮಕ್ಕಳ ನಿರಂತರ ಆನ್‍ಲೈನ್ ಅಥವಾ ಆಫ್‍ಲೈನ್ ಕಲಿಕೆಗೆ ಅವಕಾಶ ಕಲ್ಪಿಸಿಲ್ಲ. ತಮ್ಮ ಮಕ್ಕಳ ದಾಖಲಾತಿ ಹಾಗೂ ಶುಲ್ಕವೂ ಕಟ್ಟದೆ ಶಾಲೆಯಿಂದ ಹೊರಗುಳಿದಿರುವುದು ಹೊರತುಪಡಿಸಿ ಬಹಳಷ್ಟು ವಿದ್ಯಾರ್ಥಿಗಳು ಶುಲ್ಕ ಕಟ್ಟದೆ ಇರುವವರು ಕೂಡ ಆನ್‍ಲೈನ್‍ನಲ್ಲಿ ಹಾಗೂ ಶಾಲೆಗಳಲ್ಲಿ ಪಾಠ ಕಲಿತಿದ್ದಾರೆ.

ಈಗ ಸರ್ಕಾರದ ಲಾಕ್‍ಡೌನ್‍ನಂತಹ ನಿರ್ಧಾರದಿಂದ ವರ್ಷವಿಡೀ ಕಲಿತ ಮಕ್ಕಳು ಮೌಲ್ಯಮಾಪನದಿಂದ ವಂಚಿತರಾಗುತ್ತಾರೆ ಎಂಬುದು ನನ್ನ ಅನಿಸಿಕೆ ಎಂದು ವಿವರಿಸಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮ ಪರಿಣಾಮಕಾರಿ ಯಾಗದೆ ದೂರದರ್ಶನ ಇತರ ಯಾವುದೇ ಕನಿಷ್ಠ ಕಲಿಕೆಯಿಂದ ಮಕ್ಕಳು ವಂಚಿತರಾಗಿರುವ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷವನ್ನು ಪರೀಕ್ಷೆ ಇಲ್ಲದೆ ತೇರ್ಗಡೆ ಮಾಡಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ.

ಆದರೆ ಆನ್‍ಲೈನ್ ಅಥವಾ ಆಫ್‍ಲೈನ್‍ನಿಂದ ಕಲಿತ ಮಕ್ಕಳ ಮೇಲೆ ಇದು ವ್ಯತಿರಿಕ್ತ ಪರಿಣಾಮ ಆಗಬಹುದು. ಹಾಗಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ 1ರಿಂದ 8ನೇ ತರಗತಿಗಳಿಗೆ ಸಂಕಲನಾತ್ಮಕ ಮೌಲ್ಯಮಾಪನ 9ನೇ ತರಗತಿಗೆ ಸಾಮಾನ್ಯ ಪರೀಕ್ಷೆಗೆ ಹಾಗೂ 10ನೇ ತರಗತಿಗೆ ಸಿದ್ದತಾ ಪರೀಕ್ಷೆ ಮಾಡಲು ಖಾಸಗಿ ಶಿಕ್ಷಣ ಸಂಸ್ಥೆಗಳೊಂದಿಗೆ ಪ್ರತ್ಯೇಕ ಸಭೆ ನಡೆಸಿ ಮುಂದಿನ ದಿನಗಳಲ್ಲಿ ಸೂಕ್ತ ಅವಕಾಶ ಕಲ್ಪಿಸುವುದು ಒಳ್ಳೆಯದು ಎಂದು ಸಲಹೆ ಮಾಡಿದ್ದಾರೆ.

Facebook Comments