‘ಸದನಗಳು ಗರಡಿ ಮನೆಗಳಾಗಿವೆ’ : ಸಭಾಪತಿ ಹೊರಟ್ಟಿ ವಿಷಾದ

ಬೆಂಗಳೂರು, ಆ.15-ಇತ್ತೀಚಿನ ದಿನಗಳಲ್ಲಿ ಸಂಸದೀಯ ವ್ಯವಸ್ಥೆ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದೆ ಎನ್ನುವ ಅಪಸ್ವರ ಕೇಳಿಬರುತ್ತಿರುವುದು ವಿಷಾದನೀಯ. ಈ ನಿಟ್ಟಿನಲ್ಲಿ ಎಲ್ಲ ರಾಜಕೀಯ ಪ್ರತಿನಿಗಳು ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದು ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

ಬೆಂಗಳೂರಿನಲ್ಲಿ ನಡೆದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಸದನಗಳು ಮಾತಿನ ಮನೆಗಿಂತ ಗರಡಿ ಮನೆಗಳಾಗಿ ಪರಿವರ್ತನೆಯಾಗುತ್ತಿವೆ ಎಂಬುದು ಸಾರ್ವಜನಿಕರ ಅಭಿಪ್ರಾಯ. ಈ ಕುರಿತು ಗಂಭೀರವಾಗಿ ಚಿಂತನೆ ಮಾಡುವ ಅಗತ್ಯತೆಯನ್ನು ಪ್ರತಿಪಾದಿಸಿದರು.

ನೈತಿಕ ತತ್ವ ಸಿದ್ಧಾಂತಗಳು, ಮಾನವೀಯ ಮೌಲ್ಯಗಳು ಮರೆಯಾಗುತ್ತಿವೆ. ಇವುಗಳ ಮರು ಸ್ಥಾಪನೆಯ ಬಗ್ಗೆ ಗಂಭೀರವಾಗಿ ಚಿಂತಿಸುವ ಅವಶ್ಯಕತೆ ಇದೆ ಎಂದು ಹೇಳಿದರು. ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯ ಘನತೆ, ಗೌರವ ಎತ್ತಿಹಿಡಿಯುವ ನಿಟ್ಟಿನಲ್ಲಿ ಎಲ್ಲಾ ಹಂತದ ಜನಪ್ರತಿನಿಗಳು ಸಮಾಜ ಸೇವಕರು ಮುಂದಾಗಿ ಸಂಸದೀಯ ವ್ಯವಸ್ಥೆಯಲ್ಲಿ ಸತ್ಸಂಪ್ರದಾಯ ಪಾಲಿಸಬೇಕಾಗಿದೆ.

ರಾಜಕಾರಣದಲ್ಲಿ ಹೆಚ್ಚಾಗುತ್ತಿರುವ ಅಪರಾಕರಣಕ್ಕೆ ಇತಿಶ್ರೀ ಹಾಡುವ ಮೂಲಕ ಮುಂದಿನ ಪೀಳಿಗೆಯಲ್ಲಿ ರಾಜಕೀಯ ನೈತಿಕತೆ ಹಾಗೂ ಸಾಮಾಜಿಕ ಮೌಲ್ಯಗಳನ್ನು ಬಿತ್ತಬೇಕು. ಭಾರತ ಸ್ವತಂತ್ರ ರಾಷ್ಟ್ರವಾಗಿ 75 ವರ್ಷಗಳನ್ನು ಕಾಣುತ್ತಿದೆ. ಇದು ನಮಗೆಲ್ಲ ಹೆಮ್ಮೆಯ ವಿಷಯ. ಧರಣಿ, ಸತ್ಯಾಗ್ರಹ, ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹ, ಜೈಲ್‍ಭರೋ, ಕ್ವಿಟ್ ಇಂಡಿಯಾ, ಹೀಗೆ ಹತ್ತಾರು ವೈವಿಧ್ಯಮಯ ಸಂಘರ್ಷಗಳ ಮೂಲಕ ಪಡೆದ ಸ್ವಾತಂತ್ರ್ಯದ ಮಹತ್ವವನ್ನು ಮುಂದಿನ ಪೀಳಿಗೆಗೆ ಮನವರಿಕೆ ಮಾಡಿಕೊಡುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.

ದೇಶಕ್ಕಾಗಿ ಇಡೀ ಬದುಕನ್ನೇ ಸಮರ್ಪಿಸಿದ ಮಹಾತ್ಮ ಗಾಂ, ಭಗತ್‍ಸಿಂಗ್, ಚಂದ್ರಶೇಖರ್ ಆಜಾದ್, ಸುಭಾಷ್‍ಚಂದ್ರ ಭೋಸ್ ಸೇರಿದಂತೆ ಸಹಸ್ರಾರು ಸ್ವಾತಂತ್ರ್ಯ ಹೋರಾಟಗಾರರ ಯಶೋಗಾಥೆಯನ್ನು ಪುನರ್ ಮನನ ಮಾಡುವಂತೆ ಹೇಳಿದರು. ಜಾಗತಿಕ ಮಹಾಮಾರಿಯಾಗಿರುವ ಕೊರೋನಾ ವಿರುದ್ಧದ ಸೆಣಸಾಟದಲ್ಲಿ ಭಾರತ ಶ್ಲಾಘನೆಗೆ ಪಾತ್ರವಾಗಿದೆ.

ಕೊರೋನಾ ಮೂರನೇ ಅಲೆ ಬೀತಿಯಲ್ಲಿ ನಾವಿದ್ದು, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಮೂಲಕ ಕೋವಿಡ್ ವಿರುದ್ಧದ ಹೋರಾಟದಲ್ಲಿ ಯಶಸ್ವಿಯಾಗೋಣ ಎಂದು ಅವರು ತಿಳಿಸಿದರು. ರಾಜ್ಯದಲ್ಲಿ ಅತಿವೃಷ್ಟಿ, ಪ್ರವಾಹಾ ಪರಿಸ್ಥಿತಿಯಂತಹ ಸವಾಲುಗಳ ಸಮರ್ಪಕ ನಿರ್ವಹಣೆಯೊಂದಿಗೆ ಜನ ಸಾಮಾನ್ಯರ ಕಲ್ಯಾಣಕ್ಕಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಯೋಜನೆಯ ಲಾಭ ಅರ್ಹರಿಗೆ ತಲುಪಿಸುವಲ್ಲಿ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಸಭಾಪತಿ ಹೇಳಿದರು.

Sri Raghav

Admin