ಬಸವರಾಜ ಹೊರಟ್ಟಿಗೆ ಮತ್ತೆ ಸಭಾಪತಿ ಪಟ್ಟ

Social Share

ಬೆಂಗಳೂರು,ಸೆ.15- ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿರುವ ಆಡಳಿತಾರೂಢ ಬಿಜೆಪಿ ಹಿರಿಯ ಸದಸ್ಯ ಬಸವರಾಜ ಹೊರಟ್ಟಿಯವರನ್ನು ಸಭಾಪತಿ ಚುನಾವಣೆಯ ಕಣಕ್ಕಿಳಿಸಲು ನಿರ್ಧರಿಸಿದೆ. ಮೂಲಗಳ ಪ್ರಕಾರ ಇದೇ 20 ಮತ್ತು 21ರಂದು ವಿಧಾನಪರಿಷತ್‍ನ ಸಭಾಪತಿ ಚುನಾವಣೆ ನಡೆಯಲಿದ್ದು, ಬಸವರಾಜ ಹೊರಟ್ಟಿ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲು ಬಿಜೆಪಿ ತೀರ್ಮಾನಿಸಿದೆ.

ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಗೆ ಹೊರಟ್ಟಿ ಅವರ ಒಂದೇ ಹೆಸರನ್ನು ಶಿಫಾರಸ್ಸು ಮಾಡಬೇಕೆಂಬ ತೀರ್ಮಾನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಪಕ್ಷದ ನಾಯಕರು ಸರ್ವ ಸಮ್ಮತದಿಂದ ತೆಗೆದುಕೊಂಡಿದ್ದಾರೆ.
ಸಭಾಪತಿ ಸ್ಥಾನಕ್ಕೆ ಹಂಗಾಮಿ ಸಭಾಪತಿ ರಘುನಾಥ್ ಮಲ್ಕಾಪುರೆ ಅವರು ಆಕಾಂಕ್ಷಿಯಾಗಿದ್ದರೂ ಅವರನ್ನು ಉಪಸಭಾಪತಿ ಮಾಡುವ ಚಿಂತನೆಯಲ್ಲಿದೆ.

ಸತತ ಏಳು ಬಾರಿ ಗೆದ್ದು ದಾಖಲೆ ನಿರ್ಮಿಸಿರುವ ಹೊರಟ್ಟಿ ಜೆಡಿಎಸ್‍ನಿಂದ ಬಿಜೆಪಿಗೆ ಬರುವಾಗ , ಸಭಾಪತಿ ಸ್ಥಾನ ನೀಡುವುದಾದರೆ ಮಾತ್ರ ಪಕ್ಷಕ್ಕೆ ಬರುವುದಾಗಿ ಹೇಳಿದ್ದರು. ಅಲ್ಲದೆ ಪರಿಷತ್‍ನಲ್ಲಿ ಸದನವನ್ನು ನಿರ್ವಹಿಸುವ ಸಾಮಥ್ರ್ಯ, ಅನುಭವ ಅವರಿಗೆ ಇರುವುದರಿಂದ ಅವರನ್ನೇ ಕಣಕ್ಕಿಳಿಸಬೇಕೆಂದು ಪಕ್ಷ ತೀರ್ಮಾನಿಸಿದೆ.

ಇದನ್ನೂ ಓದಿ : ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (15-09-2022)

ಈಗಿನ ಬಲಾಬಲದಲ್ಲಿ ಆಡಳಿತಾರೂಢ ಬಿಜೆಪಿಗೆ ಸಭಾಪತಿ ಮತ್ತು ಉಪಸಭಾಪತಿ ಸ್ಥಾನ ಎರಡೂ ದಕ್ಕಲಿದೆ. ಒಟ್ಟು 75 ಸದಸ್ಯರ ಬಲದಲ್ಲಿ ಬಿಜೆಪಿ 39 ಸದಸ್ಯರನ್ನು ಹೊಂದಿದೆ. ಪಕ್ಷೇತರ ಶಾಸಕ ಲಖನ್ ಜಾರಕಿಹೊಳಿ ಕೂಡ ಬಿಜೆಪಿಗೆ ಬೆಂಬಲ ಸೂಚಿಸುವುದಾಗಿ ಹೇಳಿದ್ದಾರೆ ಎಂದು ಗೊತ್ತಾಗಿದೆ.

# ಅವಿರೋಧ ಆಯ್ಕೆ ಸಾಧ್ಯತೆ?:
ಸದನದಲ್ಲಿ ಸ್ಪಷ್ಟ ಬಹುಮತ ಹೊಂದಿರುವ ಕಾರಣ ಬಿಜೆಪಿಗೆ ಸಭಾಪತಿ ಮತ್ತು ಉಪಸಭಾಪತಿ ಸ್ಥಾನ ಲಭಿಸುವುದು ಖಚಿತವಾಗಿರುವುದರಿಂದ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಈ ಚುನಾವಣೆಯಲ್ಲಿ ಸ್ರ್ಪಸುವ ಸಾಧ್ಯತೆಗಳು ಕಡಿಮೆ ಎನ್ನಲಾಗುತ್ತಿದೆ.

ಕಾಂಗ್ರೆಸ್ 26 ಸದಸ್ಯರನ್ನು ಹೊಂದಿದ್ದರೆ, ಜೆಡಿಎಸ್ 8 ಸದಸ್ಯರನ್ನು ಹೊಂದಿದೆ. ಸಭಾಪತಿ ಚುನಾವಣೆಯಲ್ಲಿ ಗೆಲ್ಲಬೇಕಾದರೆ 38 ಮತಗಳನ್ನು ಪಡೆಯಬೇಕು. ಬಿಜೆಪಿ 39 ಸದಸ್ಯರನ್ನು ಹೊಂದಿರುವುದರಿಂದ ಸುಲಭವಾಗಿ ಗೆಲ್ಲಲಿದೆ. ಈ ಲೆಕ್ಕಾಚಾರದಲ್ಲಿ ಕಾಂಗ್ರೆಸ್, ಜೆಡಿಎಸ್ ಚುನಾವಣಾ ಕಣದಿಂದ ಹಿಂದೆ ಸರಿದರೆ ಹೊರಟ್ಟಿ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಗಳೇ ಹೆಚ್ಚಾಗಿವೆ.

ಒಂದು ವೇಳೆ ತಮ್ಮ ರಾಜಕೀಯ ವೈಷಮ್ಯ ಮರೆತು ಜೆಡಿಎಸ್‍ಕಾಂಗ್ರೆಸ್ ಒಂದಾಗಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಚುನಾವಣೆ ನಡೆಯುವುದು ಅನಿವಾರ್ಯ.

Articles You Might Like

Share This Article