ಮೇಲ್ಮನೆಗೆ ಆಯ್ಕೆ ಪ್ರಕ್ರಿಯೆಗೆ ಸಭಾಪತಿ ಹೊರಟ್ಟಿ ಬೇಸರ

Social Share

ಬೆಂಗಳೂರು,ಫೆ.12- ಬುದ್ದಿವಂತರ ಸದನವೆಂದೇ ಕರೆಯುವ ಕರ್ನಾಟಕದ ವಿಧಾನಪರಿಷತ್‍ಗೆ ಇತ್ತೀಚಿನ ದಿನಗಳಲ್ಲಿ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಬಗ್ಗೆ ಸಭಾಪತಿ ಬಸವರಾಜ ಹೊರಟ್ಟಿ ಬೇಸರ ವ್ಯಕ್ತಪಡಿಸಿದರು. ಒಂದು ಕಾಲದಲ್ಲಿ ದೇಶಕ್ಕೆ ಮಾದರಿಯಾದ ಕರ್ನಾಟಕ ವಿಧಾನಪರಿಷತ್‍ಗೆ ಅತ್ಯಂತ ಗೌರವಾನ್ವಿತ ಸದಸ್ಯರು ಆಯ್ಕೆಯಾಗಿ ಬರುತ್ತಿದ್ದರು. ಆದರೆ ಈಗ ಆಯ್ಕೆ
ಪ್ರಕ್ರಿಯೆಯನ್ನು ನೋಡಿದರೆ ನಮಗೆ ಅತ್ಯಂತ ಬೇಸರವಾಗುತ್ತದೆ ಎಂದು ಅಸಮಾಧಾನ ಹೊರಹಾಕಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿಧಾನಪರಿಷತ್‍ಗೆ ಈ ಹಿಂದೆ ಡಿವಿಜಿ, ಸಿದ್ದಲಿಂಗಯ್ಯ, ಖಾದ್ರಿ ಶಾಮಣ್ಣ, ಎ.ಕೆ.ಸುಬ್ಬಯ್ಯ ಅವರಂತಹ ಮೇಧಾವಿಗಳು ಆಯ್ಕೆಯಾಗಿ ಬರುತ್ತಿದ್ದರು. ಅವರ ಚರ್ಚೆ, ವಿಷಯ ಗಾಂಭೀರ್ಯತೆ ನಮಗೆಲ್ಲ ಮಾದರಿಯಾಗಿರುತ್ತಿತ್ತು ಎಂದು ಹೇಳಿದರು. ಮೇಲ್ಮನೆಯ ಬಗ್ಗೆ ಟೀಕೆಟಿಪ್ಪಣಿಗಳು ಎದುರಾದವು. ಯಾವುದೇ ಟೀಕೆಗಳನ್ನು ನಾನು ವಿರೋಧಿಸುವುದಿಲ್ಲ. ಚುನಾವಣೆಯಲ್ಲಿ ಸೋತವರನ್ನು ಮೇಲ್ಮನೆಗೆ ಹಾಕಲಾಗುತ್ತದೆ. ಸಾಹಿತಿ ಎಂದು ಪುಸ್ತಕ ಬರೆದ ರಾಜಕಾರಣಿಯನ್ನು ಹಾಕಲಾಗುತ್ತದೆ. ಇದು ನಮ್ಮ ಈಗಿನ ವ್ಯವಸ್ಥೆ ಎಂದು ವ್ಯಂಗ್ಯಭರಿತವಾಗಿ ಪ್ರತಿಕ್ರಿಯಿಸಿದರು.
ಕಲೆ, ಸಾಹಿತ್ಯ, ರಂಗಭೂಮಿ, ಸಿನಿಮಾ, ಪತ್ರಿಕೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಮೀಸಲು ಇದ್ದ ಸ್ಥಾನಗಳಲ್ಲಿ ಸೋತವರನ್ನು ರಾಜಕೀಯ ವ್ಯಕ್ತಿಗಳನ್ನು ತಂದು ಕೂರಿಸುತ್ತಾರೆ. ಇದಕ್ಕೆ ನಾವು ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು. ಸಾಹಿತಿ ಎಂದು ಹೇಳಿ ಯಾರೋ ಪುಸ್ತಕ ಬರೆದ ರಾಜಕಾರಣಿಯನ್ನು ತಂದು ಕೂರಿಸುತ್ತಾರೆ. ಇದು ಯಾವ ಪಕ್ಷಕ್ಕೂ ಸರಿಯಾದ ಕ್ರಮವಲ್ಲ. ಈ ನಿಟ್ಟಿನಲ್ಲಿ ಎಲ್ಲ ಪಕ್ಷಗಳು ಆಯ್ಕೆ ಮಾಡುವಾಗ ಆಯಾ ಕ್ಷೇತ್ರದವರನ್ನು ಆಯ್ಕೆ ಮಾಡುವುದು ಸೂಕ್ತ ಎಂದು ಸಲಹೆ ನೀಡಿದರು.
ಚುನಾವಣಾ ಸುಧಾರಣೆಗಳ ಬಗ್ಗೆ ಚರ್ಚೆಗೆ ಚಿಂತನೆ ನಡೆಸಲಾಗಿದೆ. ಈ ಕುರಿತಾಗಿ ಸಿಎಂ ಬಸವರಾಜ ಬೊಮ್ಮಾಯಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಜೊತೆ ಚರ್ಚಿಸಿ ನಿರ್ಧಾರ ಕೈಗೊ್ಳ್ಳುತ್ತೇವೆ. ಸಮಯ ಸಿಕ್ಕಲ್ಲಿ ಈ ಬಾರಿ ಅವೇಶನದಲ್ಲಿ ಈ ಬಗ್ಗೆ ಅರ್ಧ ದಿನ ಚರ್ಚೆ ಕೈಗೊಳ್ಳುತ್ತೇವೆ ಎಂದರು.
ಈ ಹಿಂದೆಲ್ಲ ಬೆಳಗ್ಗೆ 9.30ಕ್ಕೆ ಸದನ ಆರಂಭವಾದರೆ ರಾತ್ರಿವರೆಗೂ ನಡೆಯುತ್ತಿತ್ತು. ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ನಡೆಸಿ ಮೇಲ್ಮನೆ ಗೌರವವನ್ನು ಮತ್ತೆ ಹೆಚ್ಚಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ವರ್ಷಕ್ಕೆ ಒಟ್ಟು 60 ದಿನ ಸದನ ನಡೆಯಬೇಕು ಎಂಬುದು ನಮ್ಮ ನಿಲುವು. ಆದರೆ 2017ರಲ್ಲಿ 40 ದಿನಗಳ ಕಾಲ ಸದನದ ನಡೆದಿದೆ. 2018 – 29 ದಿನ, 2019- 20,2020- 33, 2021- 42 ದಿನ ಸದನ ನಡೆದಿದೆ. ಮೇಲ್ಮನೆಯ ಮಟ್ಟವನ್ನು ಹೆಚ್ಚಿಸಲು ಪ್ರಾಮಾಣಿಕ ಪ್ರಯತ್ನ ಮಾಡಲು ತೀರ್ಮಾನ ಮಾಡಿದ್ದೇವೆ. ಮೊನ್ನೆ ನಡೆದ ತರಬೇತಿ ಶಿಬಿರದಲ್ಲಿ 48 ಪರಿಷತ್ ಸದಸ್ಯರು ಪಾಲ್ಗೊಂಡಿದ್ದರು ಎಂದು ತಿಳಿಸಿದರು.
ಹೆಚ್ವಿನ ದಿನಗಳ ಕಾಲ ಸದನ ನಡೆದರೆ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಅನುಕೂಲ. ಈ ನಿಟ್ಟಿನಲ್ಲಿ ಸದನದ ಸದುಪಯೋಗ ಮಾಡುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುವುದು ಎಂದು ತಿಳಿಸಿದರು. ಚುನಾವಣಾ ಸುಧಾರಣೆ ಬಗ್ಗೆ ಚರ್ಚೆ ಹಮ್ಮಿಕೊಳ್ಳುವ ಚಿಂತನೆಯಿದೆ. ಸರ್ಕಾರ ಒಪ್ಪಿಕೊಂಡರೆ ಮಾಡುತ್ತೇವೆ. ಮೊದಲೇ ವಿಧೇಯಕ ಕೊಡಬೇಕು ಎಂದು ಸರ್ಕಾರಕ್ಕೆ ಹಲವು ಬಾರಿ ಪತ್ರ ಬರೆಯಲಾಗಿದೆ. ಸರಳ ಪ್ರಶ್ನೆಗಳಿಗೆ ಉತ್ತರಿಸಲು ಕೆಲವು ಬಾರಿ ಸಚಿವರು ತಿಂಗಳ ಕಾಲ ಸಮಯ ಕೇಳುತ್ತಾರೆ ಎಂದರು.
# ಸೋಮವಾರದಿಂದ ಕಲಾಪ:
ಸೋಮವಾರದಿಂದ ವಿಧಾನಮಂಡಲದ ಜಂಟಿ ಅಧಿವೇಶನದ ಕಲಾಪ ಆರಂಭವಾಗಲಿದೆ. ರಾಜ್ಯಪಾಲರ ಭಾಷಣದ ಬಳಿಕ ಪರಿಷತ್ ಕಲಾಪ ಆರಂಭವಾಗಲಿದೆ. ನಿಯಮ 72ರಡಿ ಚರ್ಚೆ ವೇಳೆ ನಿಯಮ ಉಲ್ಲಂಘನೆ ಮಾಡುವಂತಿಲ್ಲ. ಸದನದ ಬಾವಿಯಲ್ಲಿ ಭಿತ್ತಿಪತ್ರ ಪ್ರದರ್ಶಿಸುವಂತಿಲ್ಲ. ನಿಯಮಗಳ ಪಾಲನೆಗೆ ಎಲ್ಲಾ ಸದಸ್ಯರಿಗೂ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ನಿಯಮ ಮೀರಿ ಪ್ರತಿಭಟನೆ ನಡೆಸಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದಿಲ್ಲ. ಆದರೆ ಪ್ಲೇ ಕಾರ್ಡ್ ಸದನದ ಒಳಗಡೆ ತರದಂತೆ ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು.
ಹಿಜಬ್ ವಿವಾದದ ಬಗ್ಗೆ ಮಾತನಾಡಿದ ಹೊರಟ್ಟಿ ಅವರು, ಮಕ್ಕಳನ್ನು ಅಡ್ಡದಾರಿ ಹಿಡಿಸುವ ಕೆಲಸವನ್ನು ಪೋಷಕರು ಮತ್ತು ರಾಜಕಾರಣಿಗಳು ಮಾಡುತ್ತಿದ್ದಾರೆ. ಇಂತಹ ಕೆಟ್ಟ ಸಂಪ್ರದಾಯಗಳನ್ನು ಶಾಲೆಗಳಲ್ಲಿ ತರಬಾರದು ಎಂದು ಮನವಿ ಮಾಡಿದರು. ಇಂತಹ ಕೆಲಸಗಳಲ್ಲಿ ಪೋಷಕರು , ರಾಜಕೀಯ ನಾಯಕರು ಇದ್ದಾರೆ. ಮಕ್ಕಳಿಗೆ ಪರಿಪೂರ್ಣ ವಿದ್ಯಾಭ್ಯಾಸ ನೀಡಬೇಕು ಎಂದು ಸಲಹೆ ಮಾಡಿದರು.

Articles You Might Like

Share This Article