16 ಸಾವಿರ ಪೊಲೀಸ್ ಕಾನ್ಸ್ಟೇಬಲ್‍ಗಳ ನೇಮಕ

ಕಲಬುರಗಿ, ಸೆ.23- ಪೊಲೀಸ್ ಇಲಾಖೆ ಸದೃಢಗೊಳಿಸುವ ನಿಟ್ಟಿನಲ್ಲಿ ಮುಂದಿನ ಎರಡು ವರ್ಷದೊಳಗೆ 16 ಸಾವಿರ ಪೊಲೀಸ್ ಕಾನ್ಸ್‍ಸ್ಟೆಬಲ್ ಹಾಗೂ 630 ಪಿಎಸ್‍ಐಗಳ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಈ ಸಂಬಂಧ 6 ಸಾವಿರ ಕಾನ್ಸ್‍ಸ್ಟೆಬಲ್‍ಗಳ ನೇಮಕಾತಿ ಪ್ರಕ್ರಿಯೆ ಚಾಲನೆಯಲ್ಲಿದೆ. ಹಣಕಾಸು ಇಲಾಖೆ ಕೂಡ ಒಪ್ಪಿಗೆ ಸೂಚಿಸಿದೆ ಎಂದು ತಿಳಿಸಿದರು.

ಕಾನೂನು ಸುವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯನ್ನು ಮತ್ತಷ್ಟು ಸದೃಢಗೊಳಿಸಲು ನಿರ್ಧರಿಸಲಾಗಿದ್ದು, ಸರ್ಕಾರ ಸಿಬ್ಬಂದಿಗಳ ನೇಮಕಕ್ಕೆ ಮುಂದಾಗಿದೆ. ಇಲಾಖೆಯನ್ನು ತಾಂತ್ರಿಕವಾಗಿ ಅಭಿವೃದ್ಧಿ ಪಡಿಸಲು ದಿಟ್ಟ ಹೆಜ್ಜೆ ಇಟ್ಟಿದೆ. ಪ್ರಮುಖವಾಗಿ ಸೈಬರ್ ಕ್ರೈಂ ಪಡೆಯನ್ನು ಮತ್ತಷ್ಟು ಬಲಪಡಿಸಬೇಕಾಗಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.

ಔರಾದ್ಕರ್ ವರದಿ ಜಾರಿಗೆ ಸರ್ಕಾರ ಬದ್ಧವಿದ್ದು, ಈ ಸಂಬಂಧ ಶೀಘ್ರ ಅಧಿಸೂಚನೆ ಹೊರಡಿಸಲಾಗುವುದು. ವರದಿಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಜೈಲ್ ಸಿಬ್ಬಂದಿಗಳನ್ನು ಹೊರಗಿಡಲಾಗಿತ್ತು. ಆದರೆ ಈಗ ಸುದೀರ್ಘ ಚರ್ಚೆ ನಡೆಸಿ ಇವರನ್ನೂ ಸೇರಿಸಲಾಗಿದೆ. ಪೊಲೀಸ್ ಸಿಬ್ಬಂದಿಗೆ ಮುಂದಿನ ಎರಡು-ಮೂರು ವರ್ಷದೊಳಗೆ ಶೇ.60ರಷ್ಟು ವಸತಿ ಗೃಹಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.ಅನರ್ಹ ಶಾಸಕರಿಗೆ ರಾಜಕೀಯ ಗೊಂದಲ ಮೂಡಿರುವುದು ಸಹಜ. ಇದು ಯಾವ ನಿಟ್ಟಿನಲ್ಲಿ ಬಗೆಹರಿಯುತ್ತದೆ ಎಂಬುದು ನೋಡೋಣ ಎಂದರು.

ಸಂಸದ ಡಾ. ಉಮೇಶ್ ಜಾಧವ್, ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ, ಬಸವರಾಜ ಮತ್ತಿಮಡು, ಬಿ.ಜಿ.ಪಾಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಮುಖಂಡರಾದ ಬಸವರಾಜ ಇಂಗಿನ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.