ಕರ್ನಾಟಕದಲ್ಲಿ ಸ್ಲೀಪರ್ ಸೆಲ್..! ಉಗ್ರರ ಬಗ್ಗೆ ಶಾಕಿಂಗ್ ಸಂಗತಿ ಬಿಚ್ಚಿಟ್ಟ ಗೃಹ ಸಚಿವರು..!

ಮೈಸೂರು,ಅ.18- ರಾಜ್ಯಕ್ಕೆ ಸ್ಲೀಪರ್ ಸೆಲ್ ನುಸುಳಿರುವ ಮಾಹಿತಿ ಇದ್ದು ಅವುಗಳ ಮೇಲೆ ನಿಗಾವಹಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಇಂದಿಲ್ಲಿ ತಿಳಿಸಿದ್ದಾರೆ. ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಅಹಿತಕರ ಘಟನೆ ನಡೆಯಲು ಬಿಡುವುದಿಲ್ಲ. ರಾಜ್ಯದ ಪೊಲೀಸರು ಉಗ್ರರ ಹುಟ್ಟಡಗಿಸಲು ಸಜ್ಜಾಗಿದ್ದಾರೆ ಎಂದರು.

ಬಾಂಗ್ಲಾ ಮೂಲದ ಉಗ್ರಗಾಮಿ ಸಂಘಟನೆಗೆ ಸೇರಿದ ಸದಸ್ಯರು ರಾಜ್ಯದೊಳಗೆ ನುಸುಳಿರುವ ಬಗ್ಗೆ ಮಾಹಿತಿ ಇದೆ. ಬೆಂಗಳೂರು, ಮೈಸೂರು, ಕರಾವಳಿ ಭಾಗದಲ್ಲಿ ಉಗ್ರರು ಸಕ್ರಿಯರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು ರಾಜ್ಯ ಪೊಲೀಸರು ಹಗಲಿರುಳೆನ್ನದೆ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಸಚಿವರು ತಿಳಿಸಿದರು.

ಪಾಕ್ ಪಾತಕಿಗಳು ಸಮುದ್ರತೀರದ ಮೂಲಕ ಭಾರತಕ್ಕೆ ನುಸುಳಿ ಕರಾವಳಿ ಪ್ರದೇಶದಲ್ಲಿ ಸಕ್ರಿಯರಾಗಿರುವ ಮಾಹಿತಿ ಲಭ್ಯವಾಗಿದ್ದು, ಈ ನಿಟ್ಟಿನಲ್ಲಿ ರಾಜ್ಯ ಪೊಲೀಸರು ಉಗ್ರರ ಸದೆಬಡೆಯಲು ಸಜ್ಜಾಗಿದ್ದಾರೆ ಎಂದರು. ಜನನಿಬಿಡ ಸ್ಥಳಗಳಲ್ಲಿ ವಾಸಿಸುತ್ತಿರುವ ಬಗ್ಗೆ ಮಾಹಿತಿ ಇದ್ದು ಸಾರ್ವಜನಿಕರಿಂದಲೂ ಪೊಲೀಸರು ಮಾಹಿತಿ ನಿರೀಕ್ಷಿಸುತ್ತಿದ್ದಾರೆ. ಯಾವುದೇ ವ್ಯಕ್ತಿಯ ಬಗ್ಗೆ ಅನುಮಾನ ಬಂದಲ್ಲಿ ಕೂಡಲೇ ಪೊಲೀಸರಿಗೆ ತಿಳಿಸಬೇಕೆಂದು ಸಚಿವರು ಸೂಚಿಸಿದರು.

ರಾಜ್ಯಾದ್ಯಂತ ಯಾವುದೇ ಸಣ್ಣ ಘಟನೆಯೂ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಜನತೆ ಆತಂಕಕ್ಕೊಳಗಾಬಾರದು. ಅಲ್ಲದೆ ಗಾಳಿ ಸುದ್ದಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದ್ದಾರೆ. ಕರ್ನಾಟಕದೊಳಗೆ ನುಗ್ಗಿರುವ ಉಗ್ರರ ಎಡೆಮುರಿ ಕಟ್ಟಲು ರಾಜ್ಯ ಪೊಲೀಸರು ಅಲರ್ಟ್ ಆಗಿದ್ದಾರೆ. ಜನನಿಬಿಡ ಪ್ರದೇಶ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಪೊಲೀಸರು ನಿಗಾವಹಿಸಿದ್ದಾರೆ ಎಂದು ಅವರು ತಿಳಿಸಿದರು.

ವಿಶೇಷ ತಂಡ ರಚನೆ: ಉಗ್ರರ ನಿಗ್ರಹಕ್ಕೆ ವಿಶೇಷ ತಂಡ ರಚಿಸಲಾಗಿದೆ. ಈ ತಂಡ ಈಗಾಗಲೇ ಕಾರ್ಯೋನ್ಮುಖವಾಗಿದ್ದು ಹದ್ದಿನಕಣ್ಣಿಟ್ಟು ಕಾರ್ಯಾಚರಣೆಗಿಳಿದಿದೆ. ಬೆಂಗಳೂರಿನಲ್ಲಿಯೂ ತೀವ್ರ ನಿಗಾವಹಿಸಲಾಗಿದೆ ಎಂದು ಅವರು ಹೇಳಿದರು.