ನಾಳೆ ಬಿಬಿಎಂಪಿ ಬಜೆಟ್, ಬೆಂಗಳೂರಿಗರಿಗೆ ಕಾದಿದೆಯಾ ಸರ್ಪ್ರೈಸ್..?

Social Share

ಬೆಂಗಳೂರು,ಮಾ.1- ನಗರದ ಪುರಭವನದಲ್ಲಿನಾಳೆ ಬಹುನಿರೀಕ್ಷಿತ ಬಿಬಿಎಂಪಿ ಬಜೆಟ್ ಮಂಡನೆಯಾಗುತ್ತಿದೆ.ಸತತ ಮೂರನೇ ಬಾರಿಗೆ ಅಧಿಕಾರಿಗಳೇ ಬಿಬಿಎಂಪಿ ಬಜೆಟ್ ಮಂಡನೆ ಮಾಡುತ್ತಿರುವುದು ಈ ಬಾರಿಯ ವಿಶೇಷವಾಗಿದೆ.

ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯ್ಪುರ ಅವರು ನಾಳೆ ಬೆಳಿಗ್ಗೆ 11.30ಕ್ಕೆ ಸರಿಯಾಗಿ ಆನ್ಲೈನ್ ಮೂಲಕ ಪ್ರಸಕ್ತ ಸಾಲಿನ ಬಿಬಿಎಂಪಿ ಬಜೆಟ್ ಮಂಡನೆ ಮಾಡಲಿದ್ದು, ಈ ಬಾರಿಯೂ ಸಾರ್ವಜನಿಕ ವೀಕ್ಷಣೆಗೆ ಅವಕಾಶ ನಿರಾಕರಿಸ ಲಾಗಿದೆ. ಕಳೆದ ಬಾರಿ ಮಧ್ಯರಾತ್ರಿ ಬಿಬಿಎಂಪಿ ಬಜೆಟ್ ಮಂಡನೆ ಮಾಡಲಾಗಿತ್ತು.

ಅದಕ್ಕೆ ಸಾರ್ವಜನಿಕರ ವ್ಯಾಪಕ ವಿರೋಧ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಈ ಬಾರಿ ಸಾರ್ವಜನಿಕವಾಗಿ ಬಜೆಟ್ ಮಂಡನೆ ಮಾಡಲಾಗುತ್ತಿದೆ.ರಾಜ್ಯ ಸರ್ಕಾರದ ಬಜೆಟ್ನಲ್ಲಿ ಬೆಂಗಳೂರು ಅಭಿವೃದ್ಧಿಗೆ 6 ಸಾವಿರ ಕೋಟಿ ರೂ.ಗಳ ಅನುದಾನ ನೀಡಿರುವುದರಿಂದ ನಾಳಿನ ಬಜೆಟ್ ಸುಮಾರು 10 ಸಾವಿರ ಕೋಟಿ ರೂ.ಗಳ ಗಾತ್ರ ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ.

ಮುಂಬರುವ ದಿನಗಳಲ್ಲಿ ರಾಜ್ಯ ವಿಧಾನಸಭೆ ಹಾಗೂ ಬಿಬಿಎಂಪಿಗಳಿಗೆ ಚುನಾವಣೆ ನಡೆಯಲಿರುವುದನ್ನು ಗಮನದಲ್ಲಿಟ್ಟುಕೊಂಡು ಈ ಬಾರಿಯ ಬಜೆಟ್ನಲ್ಲಿ ನಗರ ನಿವಾಸಿಗಳ ಮನಗೆಲ್ಲಲು ಬಜೆಟ್ನಲ್ಲಿ ಹಲವಾರು ಮಹತ್ವದ ಯೋಜನೆಗಳನ್ನು ಘೋಷಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಬಾಗಿಲು ಹಾಕುವ ಹಂತಕ್ಕೆ ಬಂದಿರುವ ಇಂದಿರಾ ಕ್ಯಾಂಟೀನ್ಗೆ ಹಣ 50 ಕೋಟಿ ಅನುದಾನ ಮೀಸಲಿಡುವುದು, ವಸತಿ ಯೋಜನೆ ಅಡಿಯಲ್ಲಿ,, ಮಹಿಳೆಯರಿಗೆ ಸಾವಿತ್ರಿಬಾಯಿ ಪುಲೆ ಹೆಸರಿನಲ್ಲಿ ಹಾಸ್ಟೆಲ್ ನಿರ್ಮಾಣ ಹಾಗೂ ಶ್ರವಣ ಕುಮಾರ ಹೆಸರಿನಲ್ಲಿ ನಿರಾಶ್ರೀತ ವೃದ್ಧರಿಗೆ ವಸತಿ ವ್ಯವಸ್ಥೆ ಕಲ್ಪಿಸುವ ಯೋಜನೆಗಳು ಪ್ರಕಟಗೊಳ್ಳುವ ನೀರಿಕ್ಷೆಯಿದೆ.

ಬಿ ಖಾತೆಯ ಆಸ್ತಿಗಳಿಗೆ ಎ ಖಾತೆ ನೀಡುವುದು, ಪ್ರವಾಹ ತಡೆಗೆ ಚರಂಡಿ ಅಭಿವೃದ್ಧಿಗಾಗಿ 1800 ಕೋಟಿ ಅನುದಾನ , ಕೆರೆಗಳಿಗೆ ತಡೆ ಗೇಟï. ಹೈ ಡೆನ್ಸಿಟಿ ಕಾರಿಡಾರ್ ಅಭಿವೃದ್ಧಿಗೆ 273 ಕೋಟಿ, ಪ್ರಮುಖ 74 ಜಂಕ್ಷನ್ಗಳ ಅಭಿವೃದ್ಧಿಗೆ 150 ಕೋಟಿ ರು ಮೀಸಲೀಡುವ ಸಾಧ್ಯತೆಗಳಿವೆ.

ಟಿನ್ ಫ್ಯಾಕ್ಟರಿಯಿಂದ ಮೇಡಹಳ್ಳಿವರೆಗೆ 350 ಕೋಟಿ ರು. ವೆಚ್ಚದಲ್ಲಿ 5 ಕಿಮೀ ಎಲಿವೇಟೆಡ್ ರಸ್ತೆ, 110 ಗ್ರಾಮಗಳಲ್ಲಿ ದುಸ್ಥಿತಿಯಲ್ಲಿರುವ ರಸ್ತೆಗಳ ಪುನರ್ ನಿರ್ಮಾಣಕ್ಕೆ 300 ಕೋಟಿ ರೂ. ಪ್ರತಿ ವಾರ್ಡಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆ, ಬೆಂಗಳೂರಿಗೆ ಪ್ರತ್ಯೇಕ ಆರೋಗ್ಯ ವ್ಯವಸ್ಥೆ ಜಾರಿ ಹಾಗೂ ಬಿಬಿಎಂಪಿ ಆಸ್ತಿ ರಕ್ಷಣೆಗೆ 35 ಕೋಟಿ ರೂ ನಿಗದಿಪಡಿಸಲಾಗುತ್ತಿದೆ. ಕೆಂಪೇಗೌಡ ಜಯಂತಿ, ಕರಗ ಮಹೋತ್ಸವ, ಅಂಬೇಡ್ಕರ್ ಜಯಂತಿ ಆಚರಣೆಗೆ ಕೋಟಿ ಕೋಟಿ ಅನುದಾನ ನೀಡುವುದು ನಿಚ್ಚಳವಾಗಿದ್ದು, ಬೇಸಿಗೆಯಲ್ಲಿ ಕಾಡಲಿರುವ ಕುಡಿಯುವ ನೀರಿಗೆ ಈ ಬಾರಿ ಆಧ್ಯತೆ ನೀಡಲಾಗುತ್ತಿದೆ.

ಚುನಾವಣ ವರ್ಷವಾಗಿರುವುದರಿಂದ ಈ ಬಾರಿಯ ಬಜೆಟ್ನಲ್ಲಿ ನಗರದ ನಾಗರೀಕರಿಗೆ ಆಸ್ತಿ ತೆರಿಗೆ ಭಾರ ಹೊರಿಸದಿರಲು ತೀರ್ಮಾನಿಸಿರುವುದರಿಂದ ಸಾರ್ವಜನಿಕರು ನೆಮ್ಮದಿಯ ನಿಟ್ಟುಸಿರುಬಿಡುವಂತಾಗಿದೆ.
ಈಗಾಗಲೇ ಬಿಬಿಎಂಪಿ ಆಯುಕ್ತರು ಹಾಗೂ ಹಣಕಾಸು ವಿಭಾಗದ ವಿಶೇಷ ಆಯುಕ್ತರ ನೇತೃತ್ವದಲ್ಲಿ ಹಲವು ಸಭೆಗಳನ್ನು ನಡೆಸಿ ಸಿದ್ಧಪಡಿಸಿದ ಬಜೆಟ್ ಕರಡುಗೆ ನಗರಾಭಿವೃದ್ಧಿ ಇಲಾಖೆಗೆಯ ಅನುಮೋದನೆ ಸಿಕ್ಕಿದೆ.

ಬಿಬಿಎಂಪಿಯಲ್ಲಿ ಆದಾಯಕ್ಕೆ ತಕ್ಕಂತೆ ಬಜೆಟ್ ರೂಪಿಸುವುದರೊಂದಿಗೆ ಅನಾಗತ್ಯ ಯೋಜನೆಗಳ ಘೋಷಣೆಗೆ ಮೂಗುದಾರ ಹಾಕುವ ಹಾಗೂ ಸ್ವಾಲಂಬನೆ ಹೊಂದುವ ಉದ್ದೇಶದಿಂದ ಕಳೆದ ಮಾರ್ಚ್ನಲ್ಲಿ ಜಾರಿಗೊಳಿಸಿದ ಬಿಬಿಎಂಪಿ ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್ ನಿರ್ವಹಣೆ ನಿಯಮವನ್ನು ಈ ಬಾರಿಯೂ ಅನುಷ್ಠಾನಗೊಳಿಸುವುದು ಅನುಮಾನವಾಗಿದೆ.

ಬಜೆಟ್ ರೂಪಿಸುವಾಗ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ಬಿಬಿಎಂಪಿ ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್ ನಿರ್ವಹಣೆ ನಿಯಮ-2021′ ರೂಪಿಸಿ ಕಳೆದ ವರ್ಷ ಜಾರಿಗೊಳಿಸುವಂತೆ ರಾಜ್ಯ ಸರ್ಕಾರವು ಬಿಬಿಎಂಪಿ ಆಯುಕ್ತರಿಗೆ ನಿರ್ದೇಶಿಸಿತ್ತು. ಆದರೆ, ಶಾಸಕರು ಮತ್ತು ಜನಪ್ರತಿನಿಗಳ ಒತ್ತಡದಿಂದ ಕಳೆದ 2022-23ನೇ ಸಾಲಿನ ಆಯವ್ಯಯದಲ್ಲಿ ಜಾರಿಗೊಳಿಸುವುದಕ್ಕೆ ಸಾಧ್ಯವಾಗಿರಲಿಲ್ಲ.

ಬಿಎಂಪಿ ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್ ನಿರ್ವಹಣೆ ನಿಯಮ ಪ್ರಕಾರ ಬಜೆಟ್ ರೂಪಿಸಬೇಕಾದರೆ, ಕಳೆದ ಐದು ವರ್ಷದ ಬಿಬಿಎಂಪಿಯ ವರಮಾನದ ಸರಾಸರಿ ಅವಲೋಕಿಸಿ ಹೆಚ್ಚಿಸಬೇಕು. ಆದರೆ, ಕೊರೋನಾ ಸಂದರ್ಭದಲ್ಲಿ ಎರಡು ವರ್ಷ ಬಿಬಿಎಂಪಿಗೆ ನಿರೀಕ್ಷಿತ ಆದಾಯ ಬಂದಿಲ್ಲ, ಹೀಗಾಗಿ, ಪ್ರಸಕ್ತ ವರ್ಷದ ಬಿಬಿಎಂಪಿಯಲ್ಲಿ ಈ ನಿಯಮ ಪಾಲನೆ ಮಾಡುವುದಕ್ಕೆ ಸಾಧ್ಯವಾಗಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ.

Articles You Might Like

Share This Article