ಕಾಂಗ್ರೆಸ್ ಶಾಸಕರ ಅನುದಾನ ಬಿಜೆಪಿ ಸದಸ್ಯರ ಸದಸ್ಯರಿಗೆ ಹಂಚಿಕೆ : ರಾಮಲಿಂಗಾರೆಡ್ಡಿ ಆರೋಪ

ಬೆಂಗಳೂರು, ಸೆ.10-ನವ ಬೆಂಗಳೂರು ನಿರ್ಮಾಣಕ್ಕಾಗಿ ಹಿಂದಿನ ಕಾಂಗ್ರೆಸ್ ಮತ್ತು ಸಮ್ಮಿಶ್ರ ಸರ್ಕಾರಗಳು ನೀಡಿದ್ದ ಅನುದಾನವನ್ನು ಕಾಂಗ್ರೆಸ್ ಶಾಸಕರು ಹಾಗೂ ಬಿಬಿಎಂಪಿ ಸದಸ್ಯರಿಂದ ಹಿಂಪಡೆದುಕೊಂಡು ಬಿಜೆಪಿ ಶಾಸಕರು ಹಾಗೂ ಸದಸ್ಯರಿಗೆ ಹಂಚಿಕೆ ಮಾಡಲಾಗಿದೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಆರೋಪಿಸಿದರು.

ಸಮ್ಮಿಶ್ರ ಸರ್ಕಾರ 2 ಸಾವಿರ ಕೋಟಿ ರೂ.ಗಳನ್ನು ನಿರ್ಮಾಣ ಕ್ಕಾಗಿ ಬಿಡುಗಡೆ ಮಾಡಿದ್ದವು. ಅದರಲ್ಲಿ ಹಂಚಿಕೆಯಾದ ಅನುದಾನವನ್ನು ಯಡಿಯೂರಪ್ಪ ಸರ್ಕಾರ ಕಾಂಗ್ರೆಸ್‍ನವರಿಂದ ಹಿಂಪಡೆದುಕೊಂಡಿದೆ.  ಬೆಂಗಳೂರು ಅಭಿವೃದ್ಧಿಯ ಬಗ್ಗೆ ಕಾಳಜಿ ಇದ್ದರೆ, ಯಡಿಯೂರಪ್ಪ ಸರ್ಕಾರ ಪ್ರತ್ಯೇಕವಾಗಿ ಎರಡು-ಮೂರು ಸಾವಿರ ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಿ.

ಅದರಲ್ಲಿ ಬಿಜೆಪಿ ಶಾಸಕರು, ಬಿಬಿಎಂಪಿ ಸದಸ್ಯರು ಒಂದೊಂದು ಕ್ಷೇತ್ರಕ್ಕೆ 100 ಕೋಟಿ ತೆಗೆದುಕೊಳ್ಳಲಿ. ನಮ್ಮ ಆಕ್ಷೇಪ ಇಲ್ಲ. ಆದರೆ ನಮ್ಮ ಸರ್ಕಾರ ಬಿಡುಗಡೆ ಮಾಡಿದ್ದ ಅನುದಾನವನ್ನು ಅವರ ಪಕ್ಷದವರ ಕ್ಷೇತ್ರಗಳಿಗೆ ಹಂಚಿಕೆ ಮಾಡಿಕೊಳ್ಳುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಬೆಂಗಳೂರಿನಲ್ಲಿ ಸಿಮೆಂಟ್ ಕಾಂಕ್ರೀಟ್ ರಸ್ತೆ ಕಾಮಗಾರಿಗಳನ್ನು ನಿಲ್ಲಿಸಲಾಗಿದೆ. ಒಂದು ಕಿಲೋಮೀಟರ್ ರಸ್ತೆ ನಿರ್ಮಾಣಕ್ಕೆ 3 ಕೋಟಿ ರೂ. ಸಾಕು ಎಂದು ಯಡಿಯೂರಪ್ಪ ಹೇಳುತ್ತಿದ್ದಾರೆ. ಅವರು ಹೇಳುವ ವೆಚ್ಚದಲ್ಲೇ ರಸ್ತೆ ನಿರ್ಮಾಣ ಮಾಡಿ ತೋರಿಸಲಿ ಎಂದರು. ಬೆಂಗಳೂರಿನ ಎಲ್ಲಾ ರಸ್ತೆಗಳನ್ನು ಕಾಂಕ್ರೀಟ್ ರಸ್ತೆ ಮಾಡಿ, ಆದರೆ ಯಾವುದೇ ಕೆಲಸಗಳನ್ನು ನಿಲ್ಲಿಸಬೇಡಿ. ಹಗರಣ ನಡೆದಿದ್ದರೆ ತನಿಖೆ ಮಾಡಿಸಿ. ನಮ್ಮ ವಿರೋಧ ಇಲ್ಲ ಎಂದು ಹೇಳಿದರು.

ಕೇಂದ್ರ ಸರ್ಕಾರ ವಾಹನ ಸವಾರರಿಗೆ ವಿಧಿಸುತ್ತಿರುವ ದಂಡ ದುಬಾರಿಯಾಗಿದೆ. ಆದರೆ ದಂಡ ಕಟ್ಟುವ ಪರಿಸ್ಥಿತಿ ತಂದುಕೊಳ್ಳದೆ ಸಾರ್ವಜನಿಕರು ನಿಯಮಗಳನ್ನು ಸರಿಯಾಗಿ ಅನುಸರಿಸಬೇಕು ಎಂದು ಸಲಹೆ ನೀಡಿದರು.  ದೇಶದ ಆರ್ಥಿಕ ಸ್ಥಿತಿ ಪಾಕಿಸ್ತಾನ ಕ್ಕಿಂತಲೂ ಕುಸಿದಿದೆ. ನೋಟು ಅಮಾನ್ಯ ಮತ್ತು ಜಿಎಸ್‍ಟಿಯಿಂದ ಆರ್ಥಿಕ ಅಧೋಗತಿಯಾಗಿದೆ ಎಂದು ಆರ್‍ಬಿಐ ಒಪ್ಪಿಕೊಂಡಿದೆ. ಈ ಹಿಂದೆ ಮನಮೋಹನ್ ಸಿಂಗ್ ಅವರು ಮುಂದಿನ ಆರ್ಥಿಕ ಪರಿಣಾಮಗಳ ಬಗ್ಗೆ ಹೇಳಿಕೆ ನೀಡಿದಾಗ ಲೇವಡಿ ಮಾಡಿದ್ದರು.

ಈಗ ಅವರು ಹೇಳಿದಂತೆ ಆಗಿದೆ. ಆರ್ಥಿಕ ಹಿಂಜರಿತದಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.