ಡಿಸೆಂಬರ್ 4ರೊಳಗೆ ಬಿಬಿಎಂಪಿ ಸ್ಥಾಯಿ ಸಮಿತಿ ಚುನಾವಣೆ

ಬೆಂಗಳೂರು, ನ.4- ಅವಧಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಚುನಾವಣೆ ನಡೆಸದಂತೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದ ಬಿಬಿಎಂಪಿಯ ಒಂಬತ್ತು ಸ್ಥಾಯಿ ಸಮಿತಿಗಳು ಸೇರಿದಂತೆ ಒಟ್ಟು 12 ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆಗೆ ಡಿಸೆಂಬರ್ ನಾಲ್ಕರೊಳಗಾಗಿ ಚುನಾವಣೆ ನಡೆಸುವುದಾಗಿ ಪ್ರಾದೇಶಿಕ ಆಯುಕ್ತರಾದ ಹರ್ಷಗುಪ್ತ ತಿಳಿಸಿದ್ದಾರೆ.

ಮೇಯರ್ ಆಯ್ಕೆ ಸಂದರ್ಭದಲ್ಲೇ ಬಿಬಿಎಂಪಿ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಗೆ ನಡೆಸಬೇಕಾಗಿದ್ದ ಚುನಾವಣೆ ಗೊಂದಲದ ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿತ್ತು. ಡಿಸೆಂಬರ್‌ವರೆಗೆ ನಮ್ಮ ಕಾಲಾವಧಿ ಇದೆ. ಸೆಪ್ಟೆಂಬರ್‌ನಲ್ಲೇ ಸ್ಥಾಯಿ ಸಮಿತಿಗೆ ಚುನಾವಣೆ ನಡೆಸುವುದರಿಂದ ನಮ್ಮ ಹಕ್ಕು ಮೊಟಕಾಗುತ್ತದೆ ಎಂದು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾದ ಇಮ್ರಾನ್ ಪಾಷಾ ಸೇರಿದಂತೆ ಒಂಬತ್ತು ಸ್ಥಾಯಿ ಸಮಿತಿಯವರು ಹೈಕೋರ್ಟ್‌ನ ಮೊರೆ ಹೋಗಿದ್ದರು.

ಮೇಯರ್ ಚುನಾವಣೆ ಸಂದರ್ಭದಲ್ಲಿ ಒಂಬತ್ತು ಸ್ಥಾಯಿ ಸಮಿತಿಗಳಿಗೆ ನಡೆಸಬೇಕಾಗಿದ್ದ ಚುನಾವಣೆಗೆ ಹೈಕೋರ್ಟ್ ತಡೆ ನೀಡಿತ್ತು. ಹಾಗಾಗಿ ಪ್ರಾದೇಶಿಕ ಆಯುಕ್ತರು ಕೇವಲ ಮೂರು ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆಸುವಂತೆ ಸೂಚಿಸಿದ್ದರಾದರೂ ಅಧಿಸೂಚನೆ ಹೊರಡಿಸಿರಲಿಲ್ಲ. ಕೇವಲ ನಾಮಪತ್ರ ಪಡೆಯುವಂತೆ ಆದೇಶಿಸಿದ್ದರು. ಅ.೨೫ರಿಂದ ೩೧ರವರೆಗೆ ಮೂರು ಸ್ಥಾಯಿ ಸಮಿತಿಗಳಿಗೆ ಯಾರೂ ನಾಮಪತ್ರ ಸಲ್ಲಿಸುತ್ತಾರೆ. ಅವರಿಂದ ನಾಮಪತ್ರ ಸ್ವೀಕರಿಸುವಂತೆ ಪ್ರಾದೇಶಿಕ ಆಯುಕ್ತರು ಸೂಚಿಸಿದ್ದರು.

ಪ್ರತಿ ಸ್ಥಾಯಿ ಸಮಿತಿಗೆ ಕನಿಷ್ಠ 11 ಸದಸ್ಯರು ನಾಮಪತ್ರ ಸಲ್ಲಿಸಬೇಕಾಗಿತ್ತು. ಆದರೆ, ಶ್ರೀಕಾಂತ್‌ಪುಟ್ಟ, ಮಮತಾ ಶರವಣ ಇಬ್ಬರನ್ನು ಹೊರತು ಪಡಿಸಿ ಈ ಮೂರು ಸ್ಥಾಯಿ ಸಮಿತಿಗೆ ಯಾರೂ ನಾಮಪತ್ರ ಸಲ್ಲಿಸಿಲ್ಲ. ಹಾಗಾಗಿ ಮೂರು ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆಸಿರಲಿಲ್ಲ. ಒಟ್ಟಾಗಿಯೇ ಅಂದರೆ ಡಿ.೪ರೊಳಗಾಗಿ ಬಿಬಿಎಂಪಿಯ ೧೨ ಸ್ಥಾಯಿ ಸಮಿತಿಗಳಿಗೂ ಚುನಾವಣೆ ನಡೆಸಲು ಪ್ರಾದೇಶಿಕ ಆಯುಕ್ತರು ನಿರ್ಧರಿಸಿದ್ದಾರೆ.

ಮೇಯರ್ ಚುನಾವಣೆ ನಡೆದ ಸಂದರ್ಭದಲ್ಲೇ ಸ್ಥಾಯಿ ಸಮಿತಿಗಳಿಗೂ ಚುನಾವಣೆ ನಡೆಸಬೇಕೆಂದು ೧೯೯೯ ಹಾಗೂ ೨೦೦೫ರ ನಿಯಮಾವಳಿಗಳನ್ನು ಉಲ್ಲೇಖಿಸಿ ಬಿಜೆಪಿ ಮುಖಂಡರಾದ ಪದ್ಮನಾಭರೆಡ್ಡಿ ದೂರು ನೀಡಿದ್ದರು. ಕಾಂಗ್ರೆಸ್ ಮುಖಂಡರಾದ ವಾಜಿದ್ ಅವರು ನಮ್ಮ ಅವಧಿ ಡಿಸೆಂಬರ್ ವರೆಗೆ ಇದೆ. ಸೆಪ್ಟೆಂಬರ್‌ನಲ್ಲೇ ಚುನಾವಣೆ ನಡೆಸಿದರೆ ಮೂರು ತಿಂಗಳ ಅಧಿಕಾರಾವಧಿ ಮೊಟಕುಗೊಳ್ಳುತ್ತದೆ ಎಂದು ಪ್ರತಿ ದೂರು ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ಆಯುಕ್ತರು ಕಾನೂನು ಸಲಹೆ ಪಡೆದಿದ್ದು, ಮೇಯರ್ ಚುನಾವಣಾ ಸಂದರ್ಭದಲ್ಲೇ ಸ್ಥಾಯಿ ಸಮಿತಿಗೂ ಚುನಾವಣೆ ನಡೆಸಬಹುದೆಂದು ಕಾನೂನು ತಜ್ಞರು ಅಭಿಪ್ರಾಯ ಸೂಚಿಸಿದ್ದರು. ಇದನ್ನು ಅರಿತ ಒಂಬತ್ತು ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಲಯ ತಡೆಯಾಜ್ಞೆ ನೀಡಿ ಡಿಸೆಂಬರ್‌ನಲ್ಲೇ ಚುನಾವಣೆ ನಡೆಸುವಂತೆ ಆದೇಶಿಸಿತ್ತು.

ಬಾಕಿ ಉಳಿದಿರುವ ಮೂರು ಸ್ಥಾಯಿ ಸಮಿತಿ ಹಾಗೂ ತಡೆಯಾಜ್ಞೆ ಪಡೆದಿದ್ದ ಒಂಬತ್ತು ಸ್ಥಾಯಿ ಸಮಿತಿಗಳು ಸೇರಿದಂತೆ ೧೨ ಸ್ಥಾಯಿ ಸಮಿತಿಗಳಿಗೆ ಡಿಸೆಂಬರ್ ೪ರೊಳಗಾಗಿ ಚುನಾವಣೆ ನಡೆಯಲಿದೆ. ಪ್ರಸ್ತುತ ಸ್ಥಾಯಿ ಸಮಿತಿಗೆ ಆಯ್ಕೆಯಾಗುವವರ ಅವಧಿ ಎಂಟು ತಿಂಗಳಿಗೆ ಸೀಮಿತವಾದರೂ ಅಧಿಕಾರಾವಧಿ ಐದರಿಂದ ಆರು ತಿಂಗಳು ಸಿಗುವ ಸಾಧ್ಯತೆ ಇದೆ.
ಚುನಾವಣಾ ವರ್ಷವಾಗಿರುವುದರಿಂದ ನೀತಿ ಸಂಹಿತೆ ಜಾರಿಯಗಿ ಇವರ ಅಧಿಕಾರ ಮೊಟುಕಾಗುತ್ತದೆ. 12 ತಿಂಗಳ ಅಧಿಕಾರಾವಧಿ ಇವರಿಗೆ ಕಾನೂನು ಪ್ರಕಾರ ಸಿಗಬೇಕಾದರೂ ಮೇಯರ್ ಅವಧಿ ಇರುವುದು ಸೆಪ್ಟೆಂಬರ್‌ವರೆಗೆ.

ಸ್ಥಾಯಿ ಸಮಿತಿ ಅಧ್ಯಕ್ಷರ ಅವಧಿ ಸೆಪ್ಟೆಂಬರ್‌ಗೆ ಅಂತ್ಯವಾಗಲಿದೆ. ಅದಕ್ಕೂ ಮುನ್ನ ಬಿಬಿಎಂಪಿ ಚುನಾವಣೆ ಘೋಷಣೆಯಾಗುವುದರಿಂದ ಇವರ ಅಧಿಕಾರಾವಧಿ ಮತ್ತಷ್ಟು ಕಡಿತಗೊಳ್ಳಲಿದೆ.

12 ಸ್ಥಾಯಿ ಸಮಿತಿಗಳು: 1. ನಗರ ಯೋಜನೆ ಸ್ಥಾಯಿ ಸಮಿತಿ, 2. ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ, 3. ಬೃಹತ್ ಕಾಮಗಾರಿ ಸ್ಥಾಯಿ ಸಮಿತಿ, 4. ವಾರ್ಡ್ ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿ, 5. ಶಿಕ್ಷಣ ಸ್ಥಾಯಿ ಸಮಿತಿ, 6. ಅಪೀಲು ಸ್ಥಾಯಿ ಸಮಿತಿ, 7. ತೋಟಗಾರಿಕೆ ಸ್ಥಾಯಿ ಸಮಿತಿ, 8. ಲೆಕ್ಕಪತ್ರ ಸ್ಥಾಯಿ ಸಮಿತಿ, 9. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ, 10. ಆಡಳಿತ ಸುಧಾರಣಾ ಸ್ಥಾಯಿ ಸಮಿತಿ, 11. ಮಾರುಕಟ್ಟೆ ಸ್ಥಾಯಿ ಸಮಿತಿ, 12. ಆರೋಗ್ಯ ಸ್ಥಾಯಿ ಸಮಿತಿ.