ಬಿಬಿಎಂಪಿ 8 ವಲಯದಿಂದ 1 ಲಕ್ಷ ಮಂದಿಗೆ ಬೂಸ್ಟರ್ ಡೋಸ್

Social Share

ಬೆಂಗಳೂರು, ಜ.10- ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಮೂರನೆ ಅಲೆ ತೀವ್ರತೆ ಹೆಚ್ಚಾಗುತ್ತಿದ್ದು, ಇದರ ಬೆನ್ನಲ್ಲೇ ಮುಂಜಾಗ್ರತಾ ಕ್ರಮವಾಗಿ ತಜ್ಞರ ಸೂಚನೆ ಮೇರೆಗೆ ಆರೋಗ್ಯ ಸಿಬ್ಬಂದಿ, ಕೋವಿಡ್ ನಿಯಂತ್ರಣದ ಮುಂಚೂಣಿ ಕಾರ್ಯಕರ್ತರು, 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಬೂಸ್ಟರ್ ಡೋಸ್ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.
ನಗರದ ಬೊಮ್ಮನಹಳ್ಳಿ, ದಾಸರಹಳ್ಳಿ, ಪೂರ್ವವಲಯ, ಮಹದೇವಪುರ, ರಾಜರಾಜೇಶ್ವರಿನಗರ, ದಕ್ಷಿಣ ವಲಯ, ಪಶ್ಚಿಮ ವಲಯ, ಯಲಹಂಕ ಸೇರಿದಂತೆ ಎಂಟು ವಲಯಗಳಿಂದ 1,00,254 ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡಬೇಕಾಗಿರುವ ಕಾರ್ಯಕ್ರಮ ಪ್ರಾರಂಭಿಸಲಾಗಿದೆ. ಬೊಮ್ಮನಹಳ್ಳಿಯಲ್ಲಿ 5438 ಆರೋಗ್ಯ ಕಾರ್ಯಕರ್ತರು, 2056 ಮುಂಚೂಣಿ ಕಾರ್ಯಕರ್ತರು ಸೇರಿದಂತೆ 7494 ಮಂದಿಗೆ ಬೂಸ್ಟರ್ ಡೋಸ್ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಅದೇ ರೀತಿ ದಾಸರಹಳ್ಳಿಯಲ್ಲಿ ಒಟ್ಟು 2520, ಪೂರ್ವ ವಲಯದಲ್ಲಿ 21,034, ಮಹದೇವಪುರದಲ್ಲಿ 5779, ರಾಜರಾಜೇಶ್ವರಿನಗರ 6393, ದಕ್ಷಿಣ ವಿಭಾಗದಲ್ಲಿ 29,046, ಪಶ್ಚಿಮ ವಿಭಾಗದಲ್ಲಿ 20,696, ಯಲಹಂಕದಲ್ಲಿ 7292 ಮಂದಿ ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಇಂದಿನಿಂದ ಇವರು ನಿಯಮಾನುಸಾರ ಬೂಸ್ಟರ್ ಡೋಸ್ ಪಡೆಯಬಹುದಾಗಿದೆ.
ಮುನ್ನೆಚ್ಚರಿಕೆಯ ಈ ಲಸಿಕೆ ಡೋಸ್‍ಗಳಿಗೆ ನೊಂದಾಯಿಸಿಕೊಳ್ಳುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಅರ್ಹರು ನೇರವಾಗಿ ಅಪಾಯಿಂಟ್‍ಮೆಂಟ್ ತೆಗೆದುಕೊಳ್ಳಬಹುದು ಅಥವಾ ಯಾವುದೇ ಲಸಿಕಾ ಕೇಂದ್ರಕ್ಕೆ ಹೋಗಿ ಲಸಿಕೆ ಪಡೆಯಬಹುದು. ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರು ಮಾತ್ರವಲ್ಲದೆ, ಮಧುಮೇಹ, ಅಕ ರಕ್ತದೊತ್ತಡ ಮತ್ತು ಇತರೆ ದೀರ್ಘಕಾಲದ ಕಾಯಿಲೆಗಳಂತಹ ಅಸ್ವಸ್ಥತೆ ಹೊಂದಿರುವ 60 ವರ್ಷಕ್ಕಿಂತ ಮೇಲ್ಪಟ್ಟವರು ವೈದ್ಯರ ಸಲಹೆ ಮೇರೆಗೆ ಈ ಬೂಸ್ಟರ್ ಡೋಸ್ ಪಡೆಯಲು ಅರ್ಹತೆ ಹೊಂದಿರುತ್ತಾರೆ.
ಕೋವಿಡ್ ಲಸಿಕೆಯ ಎರಡನೆ ಡೋಸ್ ಪಡೆದ 9 ತಿಂಗಳ ನಂತರ ಈ ಡೋಸ್ ಪಡೆಯಬಹುದಾಗಿದೆ. ಮುನ್ನೆಚ್ಚರಿಕೆ ಡೋಸ್ ನೀಡುವ ಮೊದಲ ದಿನ ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳಲ್ಲಿ 1,00,254 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಎರಡನೆ ಡೋಸ್ ಪಡೆದ 39 ವಾರ ಪೂರೈಸಿರುವ 60 ವರ್ಷಕ್ಕಿಂತ ಮೇಲ್ಪಟ್ಟ 39,622 ಮಂದಿ ಫಲಾನುಭವಿಗಳು, ವೈದ್ಯರ ಸಲಹೆ ಮೇರೆಗೆ ಈ ಬೂಸ್ಟರ್ ಡೋಸ್ ಪಡೆಯಬಹುದಾಗಿದೆ.
ಕೋವಿನ್ ಪೋರ್ಟಲ್ ಆಧಾರದ ಮೇಲೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಮುನ್ನೆಚ್ಚರಿಕೆ ಲಸಿಕಾಕರಣದ ಮೊದಲ ತಿಂಗಳಲ್ಲಿ ಅಂದರೆ ಜನವರಿ 10 ರಿಂದ ಫೆಬ್ರವರಿ 10ರ ವರೆಗೆ ಆರೋಗ್ಯ ಕಾರ್ಯಕರ್ತರು 1,03,163, ಮುಂಚೂಣಿ ಕಾರ್ಯಕರ್ತರು 40,000, 60 ವರ್ಷ ಮೇಲ್ಪಟ್ಟವರು 2,87,807. ಒಟ್ಟು 4,30,996 ಫಲಾನುಭವಿಗಳು ಈ ಅವಯಲ್ಲಿ ಬೂಸ್ಟರ್ ಡೋಸ್ ಪಡೆಯಲಿದ್ದಾರೆ.

Articles You Might Like

Share This Article