ಬೆಂಗಳೂರು,ಮಾ.3-ಕಾಂಗ್ರೆಸ್ ಪ್ರತಿಭಟನೆಗೆ ಜಾಹೀರಾತು ಮಾಫಿಯಾ ಸಾಥ್ ನೀಡಿದೆ ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಆರ್.ರಮೇಶ್ ಅವರು ಗಂಭೀರ ಆರೋಪ ಮಾಡಿದ್ದಾರೆ. ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ಕಾಂಗ್ರೆಸ್ ಪಕ್ಷದ ಮೆರವಣಿಗೆಯಲ್ಲಿ ಕಾನೂನಿನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಲಾಗಿದೆ.
ಹೀಗಾಗಿ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಜಾಹೀರಾತು ಮಾಫಿಯಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಹಾಗೂ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರಿಗೆ ದೂರು ನೀಡಿದ್ದಾರೆ. ಪ್ರಸ್ತುತ ನಗರದಲ್ಲಿ ಜಾಹೀರಾತು ಮಾಫಿಯಾಗೆ ಕಡಿವಾಣ ಹಾಕಲಾಗಿದೆ. ಇದರಿಂದ ಕಂಗೆಟ್ಟಿರುವ ಜಾಹೀರಾತು ಮಾಫಿಯಾದವರು ಕಾಂಗ್ರೆಸ್ ಪಕ್ಷದೊಂದಿಗೆ ಕೈ ಜೋಡಿಸಿದ್ಧಾರೆ ಎಂದು ರಮೇಶ್ ದೂರಿದ್ದಾರೆ.
ಭವಿಷ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮೊದಲಿನಂತೆ ಕಾನೂನುಬಾಹಿರ ಜಾಹೀರಾತು ಫಲಕಗಳನ್ನು ಆಳವಡಿಸಿಕೊಂಡು ಕೋಟ್ಯಂತರ ರೂ.ಗಳನ್ನು ಕೊಳ್ಳೆ ಹೊಡೆಯಬಹುದು ಎಂಬ ಲೆಕ್ಕಾಚಾರದಿಂದ ಕಾಂಗ್ರೆಸ್ ಪಾದಯಾತ್ರೆಗೆ ಜಾಹೀರಾತು ಮಾಫಿಯಾ ಸಹಕರಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಮೆರವಣಿಗೆ ಹೋಗುವ ಎಲ್ಲಾ ಬಡಾವಣೆಗಳ ರಸ್ತೆಗಳಲ್ಲಿ ಆ ಪಕ್ಷದ ಜಾಹೀರಾತು ಫಲಕಗಳನ್ನು ಮತ್ತು ಫ್ಲೆಕ್ಸ್‍ಗಳನ್ನು ಸಹಸ್ರಾರು ಸಂಖ್ಯೆಯಲ್ಲಿ ಅಳವಡಿಸುವ ಮೂಲಕ ಉಚ್ಛ ನ್ಯಾಯಾಲಯದ ಆದೇಶವನ್ನು ಸ್ಪಷ್ಟವಾಗಿ ಉಲ್ಲಂಘಿಸಿರುವ ಬಗ್ಗೆ ಚಿತ್ರಗಳ ಸಮೇತ ನಾನು ಆಡಳಿತಾಧಿಕಾರಿಗಳು ಹಾಗೂ ಆಯುಕ್ತರಿಗೆ ದೂರು ನೀಡುತ್ತಿದ್ದೇನೆ ಎಂದು ರಮೇಶ್ ತಿಳಿಸಿದ್ದಾರೆ.
ನಾನು ಈಗಾಗಲೇ ದೂರು ನೀಡಿದ್ದರೂ ಇದುವರೆಗೂ ಕಾಂಗ್ರೆಸ್ ಪಕ್ಷದ ಮುಖಂಡರಾಗಲಿ, ಜಾಹೀರಾತು ಮಾಫಿಯಾ ವಿರುದ್ಧ ಬಿಬಿಎಂಪಿ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲದಿರುವುದು ವಿಪರ್ಯಾಸ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈಗಲೂ ಕಾಲ ಮಿಂಚಿಲ್ಲ ಉಚ್ಛ ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿ ಪಾದಯಾತ್ರೆ ಸಂದರ್ಭದಲ್ಲಿ ಅಕ್ರಮ ಜಾಹೀರಾತು ಅಳವಡಿಸಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಮೇಶ್ ಒತ್ತಾಯಿಸಿದ್ದಾರೆ.
