ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ :  ಗುತ್ತಿಗೆದಾರರ ಹಣದಲ್ಲಿ ಶೇ.20ರಷ್ಟು ಕಡಿತ

Spread the love

ಬೆಂಗಳೂರು :  ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಂಬ ಗಾದೆಯಂತೆ ಬಿಬಿಎಂಪಿಯ ಕಾರ್ಯವೈಖರಿ ಹಲವಾರು ಗುತ್ತಿಗೆದಾರರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಕಾಮಗಾರಿ, ವೈದ್ಯಕೀಯ ಉಪಕರಣ ಸರಬರಾಜು ಸೇರಿದಂತೆ ಇನ್ನಿತರ ಗುತ್ತಿಗೆದಾರರಿಗೆ ನೀಡಬೇಕಾದ ಬಿಲ್ ಮೊತ್ತದಲ್ಲಿ ಶೇ.20 ಕಡಿತಗೊಳಿಸುತ್ತಿರುವುದು ಗುತ್ತಿಗೆದಾರರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ಕಾಮಗಾರಿ ಅಥವಾ ಅಗತ್ಯವಸ್ತು ಪೂರೈಸಿದ ಎರಡು ವರ್ಷಗಳ ನಂತರ ಬಿಲ್‍ಗಳು ಬಿಡುಗಡೆಗೊಳ್ಳುತ್ತವೆ. ಇಷ್ಟು ಸಮಯ ಕಾಯ್ದ ನಂತರವೂ ಬಿಬಿಎಂಪಿ ಶೇ.20 ಪ್ರತಿಶತ ಕಡಿತಗೊಳಿಸುವುದು ಯಾವ ನ್ಯಾಯ? ಹೀಗೆ ಬಿಲ್ ಮೊತ್ತದಲ್ಲಿ ಕಡಿತಗೊಳಿಸುವುದಾದರೆ ನಾವು ಇನ್ನು ಮುಂದೆ ಯಾವುದೇ ರೀತಿಯ ಸಾಮಗ್ರಿಗಳನ್ನು ಸರಬರಾಜು ಮಾಡುವುದಿಲ್ಲ ಎಂದು ಗುತ್ತಿಗೆದಾರರೊಬ್ಬರು ತಮ್ಮ ನೋವು ತೋಡಿಕೊಂಡರು.

ಪಾಲಿಕೆಗೆ ತನ್ನ ಸಂಪನ್ಮೂಲಗಳನ್ನು ಕ್ರೋಢಿಕರಿಸಲು ಹಲವಾರು ಮಾರ್ಗಗಳಿವೆ. ಆಸ್ತಿ ತೆರಿಗೆ, ಲೀಸ್ ನೀಡಿರುವ ಆಸ್ತಿಗಳಿಂದ ಸಂಪನ್ಮೂಲಗಳನ್ನು ವೃದ್ಧಿಸಬಹುದು. ಆದರೆ, ಬಿಬಿಎಂಪಿ ಇದರ ಗೊಡವೆಗೆ ಹೋಗದೆ ಗುತ್ತಿಗೆದಾರರ ಜೇಬಿಗೆ ನೇರವಾಗಿ ಕತ್ತರಿ ಪ್ರಯೋಗ ಮಾಡಲು ಮುಂದಾಗಿರುವುದು ಹಾಸ್ಯಾಸ್ಪದ ಎಂದು ಗುತ್ತಿಗೆದಾರರು ಜರಿಯುತ್ತಿದ್ದಾರೆ.

ಗುತ್ತಿಗೆದಾರರು ಲಾಭಕ್ಕಾಗಿ ಮತ್ತು ವೃತ್ತಿಗಾಗಿ ಪಾಲಿಕೆ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಪಾಲಿಕೆಯೇ ನಿಗದಿಪಡಿಸಿದ ದರಕ್ಕೆ ಕಾಮಗಾರಿಗಳನ್ನು ಮಾಡಿರುತ್ತಾರೆ ಅಥವಾ ಅಗತ್ಯ ವಸ್ತುಗಳನ್ನು ಪೂರೈಸಿರುತ್ತಾರೆ. ಅವರಿಗೆ ನಿಗದಿಪಡಿಸಿದಷ್ಟು ಹಣ ನೀಡುವುದು ರೂಢಿಯಲ್ಲಿರುವ ಕಾನೂನು. ಆದರೆ, ಗುತ್ತಿಗೆದಾರರಿಗೆ ನೀಡಬೇಕಾದ ಬಿಲ್ ಮೊತ್ತದಲ್ಲಿ ಕಡಿತಗೊಳಿಸುವುದು ಎಷ್ಟು ಸಮಂಜಸ ಎಂದು ಗುತ್ತಿಗೆದಾರರು ಪ್ರಶ್ನಿಸುತ್ತಿದ್ದಾರೆ.

ಹಲವರು ವಿಶೇಷ ಆಯುಕ್ತರಾದ ತುಳಸಿ ಮದ್ದಿನೆನಿ ಅವರನ್ನು ಗಂಟೆಗಟ್ಟಲೆ ಬಾಗಿಲಲ್ಲಿ ಕಾಯ್ದು ಪ್ರಶ್ನಿಸಿದರೆ ಸರಿಯಾದ ಉತ್ತರ ನೀಡದೆ ಪಾಲಿಕೆ ಹಣಕಾಸಿನ ಪರಿಸ್ಥಿತಿಯ ಶೋಚನೀಯ ಸ್ಥಿತಿಯನ್ನು ಬಿಚ್ಚಿಡುತ್ತಾರೆ. ತುಳಸಿ ಮೇಡಂ ಅವರಿಗೆ ಹಣಕಾಸಿನ ಜವಾಬ್ದಾರಿ ನೀಡಿರುವುದು ಗುತ್ತಿಗೆದಾರರಿಗೆ ಸೇರಬೇಕಾದ ಹಣವನ್ನು ಕಡಿತಗೊಳಿಸುವುದಕ್ಕೋ ಅಥವಾ ಸಂಪನ್ಮೂಲಗಳನ್ನು ಹುಡುಕಿ ಆರ್ಥಿಕ ಪರಿಸ್ಥಿತಿಯನ್ನು ಉದ್ಧರಿಸುವುದಕ್ಕೋ ಎಂಬ ಅನುಮಾನ ಕಾಡುತ್ತಿದೆ.

ಏಪ್ರಿಲ್ 2020ರ ನಂತರ ಬಿಬಿಎಂಪಿ ವ್ಯಾಪ್ತಿಯಲ್ಲಿ ನೋವೆಲ್ ಕೊರೊನಾ ವೈರಸ್ ಸೋಂಕನ್ನು ತಡೆಯಲು ಪಾಲಿಕೆ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಹರಡುತ್ತಿದ್ದ ಸೋಂಕನ್ನು ಹತೋಟಿಗೆ ತರಲು ಬಿಬಿಎಂಪಿ ಅವಶ್ಯಕ ಔಷಧಿ ಮಾತ್ತು ವೈದ್ಯಕೀಯ ಉಪಕರಣಗಳ ಖರೀದಿಗೆ ಕ್ರಮವಹಿಸಿ ಮುಖಗವಸು, ಸ್ಯಾನಿಟೈಜರ್, ಆಕ್ಸಿಮೀಟರ್ ಮತ್ತು ಇನ್ನಿತರ ಉಪಕರಣಗಳನ್ನು ಏಕರೂಪದ ಬೆಲೆಗೆ ಖರೀದಿಸಲು ಕ್ರಮವಹಿಸುವ ಬಗ್ಗೆ ಬಿಬಿಎಂಪಿ ವಿಶೇಷ ಆಯುಕ್ತರು (ಹಣಕಾಸು) ಸಭೆ ನಡೆಸಿ ಎಲ್ಲಾ ಉಪಕರಣಗಳ ಖರೀದಿಗೆ ಶೇ.20ರಷ್ಟು ಕಡಿತಗೊಳಿಸಲು ಸೂಚಿಸಿದರು.

ಮಾರ್ಚ್ 2020ರಲ್ಲಿ ಮುಖಗವಸು, ಸ್ಯಾನಿಟೈಜರ್, ಆಕ್ಸಿಮೀಟರ್ ಮತ್ತು ಇನ್ನಿತರ ಉಪಕರಣಗಳಿಗೆ ಹೆಚ್ಚಿನ ಬೇಡಿಕೆ ಇದ್ದುದರಿಂದ ಬೆಲೆಯೂ ಸಹ ಹೆಚ್ಚಾಗಿತ್ತು. ಕ್ರಮೇಣ ಇವುಗಳ ಬೆಲೆಯಲ್ಲಿ ಗಣನೀಯವಾಗಿ ಕಡಿಮೆಯಾಗಿತ್ತು. ಬೆಲೆಗೆ ಅನುಗುಣವಾಗಿ ವೈದ್ಯಕೀಯ ಪರಿಕರಗಳನ್ನು ಸರಬರಾಜು ಮಾಡಲಾಗಿತ್ತು. ಆದರೆ, ವಿಶೇಷ ಆಯುಕ್ತರಾದ ತುಳಸಿ ಅವರು ಕೈಗೊಂಡ ನಿರ್ಧಾರ ಗುತ್ತಿಗೆದಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು.

Facebook Comments