ಏಕಾಏಕಿ ಕಟ್ಟಡ, ಕಾಂಪೌಂಡ್ ಧ್ವಂಸ : ಸ್ಥಳೀಯರ ಆಕ್ರೋಶ

Social Share

ಬೆಂಗಳೂರು,ಸೆ.14- ನಗರದಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಚರಣೆ ಮುಂದುವರೆದಿದೆ. ಮಹದೇವಪುರದಲ್ಲಿ ಮೂರನೇ ದಿನದ ಒತ್ತುವರಿ ತೆರವು ಕಾರ್ಯಾಚರಣೆ ಕೈಗೆತ್ತಿಕೊಳ್ಳಲಾಗಿದೆ. ಮಹಾದೇವ ಪುರದ ಚಲ್ಲಘಟ್ಟ, ಶಾಂತಿನಿಕೇತನ, ಪಾಪಯ್ಯ ರೆಡ್ಡಿ ಲೇಔಟ್ ಹಾಗೂ ಯಲಹಂಕ ವ್ಯಾಪ್ತಿಯಲ್ಲಿ 6 ಕಡೆ ರಾಜಕಾಲುವೆ ಒತ್ತುವರಿ ತೆರವಿಗೆ ಮಾರ್ಕಿಂಗ್ ಮಾಡಲಾಗಿದೆ.

ವಿದ್ಯಾರಣ್ಯಪುರ , ತಿಂಡ್ಲು ವಿಲೇಜ, ಎನ್ ಸಿ ಬಿ ಎಸ್ ಮಂದಾರ ಹೌಸಿಂಗ್ , ಕೋಗಿಲು ಮುಖ್ಯ ರಸ್ತೆ , ದೊಡ್ಡ ಬೊಮ್ಮಸಂದ್ರ, ಸಿಂಗಾಪುರ ಎಲ್ಲ ಕಡೆ ಮಾರ್ಕಿಂಗ್ ಮಾಡಲಾಗಿದ್ದು ಇಂದು ಎಲ್ಲ ಒತ್ತುವರಿಗಳನ್ನು ತೆರವುಗೊಳಿಸಲಾಗುವುದು.

ಶಾಂತಿನಿಕೇತನ ಲೇಔಟ್‍ನಲ್ಲಿ ಒತ್ತುವರಿ ಮಾಡಿ ನಿರ್ಮಿಸಿರುವ ಚೈತನ್ಯ ಸ್ಕೂಲ್ ಕಾಂಪೌಂಡ್ ಡೆಮಾಲೇಷನ್ ಮಾಡಲಾಗಿದೆ. ಮಾಲೀಕರಿಗೆ ಮಾಹಿತಿ ನೀಡದೆ ಒತ್ತುವರಿ ತೆರವು ಮಾಡಿರುವ ಬಿಬಿಎಂಪಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಮಗೆ ಮಾಹಿತಿ ನೀಡದೆ ಗೋಡೆ ಒಡೆದು ಹಾಕಿದ್ರು, ಕೇಳಿದ್ರೆ ರಾಜಕಾಲುವೆ ಇದೆ ಅಂದ್ರು ಇಲ್ಲಿ ನಮ್ಮ ಗದ್ದೆ, ಭೂಮಿ ಇತ್ತು ಅಷ್ಟೆ, ನಮಗೆ ಮಾಹಿತಿ ಕೊಡದೆ ತೆರವು ಮಾಡಿದ್ದಾರೆ ಎಂದು ಜಮೀನು ಮಾಲಿಕ ತಿಲಕ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಅರಬ್ಬಿ ಸಮುದ್ರದಲ್ಲಿ 200 ಕೋಟಿ ರೂ. ಡ್ರಗ್ಸ್ ವಶ, 6 ಪಾಕ್ ಪ್ರಜೆಗಳ ಬಂಧನ

ಸರ್ವೆಯರ್ ನಮಗೆ ಏನು ಮಾಹಿತಿನೇ ನೀಡಿಲ್ಲ 191 ಸರ್ವೆ ನಂಬರ್ ಇದು. 33 ಅಡಿ ರಾಜಕಾಲುವೆ ಅಂತ ಹೇಳ್ತಿದ್ದಾರೆ, ಕಾನೂನಾತ್ಮಕವಾಗಿ ಬಂದ್ರೆ , ಜಾಗ ಬಿಟ್ಟುಕೊಡ್ತಿವಿ ಅದನ್ನು ಬಿಟ್ಟು ಏಕಾಏಕಿ ಕಟ್ಟಡ ಒಡೆಯುವುದ ಏಕೆ ಎಂದು ಅವರು ಪ್ರಶ್ನಿಸಿದ್ದಾರೆ.

100 ಕಟ್ಟಡಗಳಿಗೆ ನೋಟೀಸ್: ರಾಜಕಾಲುವೆ ಒತ್ತುವರಿ ಕಾರ್ಯಚರಣೆ ನಿಲ್ಲಿಸುವುದಿಲ್ಲ ಎಂದು ಸರ್ಕಾರ ಖಡಕ್ ಎಚ್ಚರಿಕೆ ನೀಡಿರುವ ಬೆನ್ನಲ್ಲೆ ಕಂದಾಯ ಇಲಾಖೆ ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವ 100ಕ್ಕೂ ಹೆಚ್ಚು ಕಟ್ಟಡಗಳ ಮಾಲೀಕರಿಗೆ ನೋಟೀಸ್ ಜಾರಿ ಮಾಡಿದೆ.ನೀವು ವಾಸಿಸುತ್ತಿರುವ ಕಟ್ಟಡ ರಾಜಕಾಲುವೆ ಒತ್ತುವರಿ ಮಾಡಿ ನಿರ್ಮಿಸಿರುವುದರಿಂದ ಈ ಕೂಡಲೇ ಮನೆ ಖಾಲಿ ಮಾಡುವಂತೆ ಮಾಲೀಕರುಗಳಿಗೆ ಸರ್ವೇಯರ್‍ಗಳು ಮೌಖಿಕ ಎಚ್ಚರಿಕೆ ನೀಡುತ್ತಿದ್ದಾರೆ.

ಸಿಗದ ಅನುಮತಿ: ಸರ್ಜಾಪುರ ರಸ್ತೆಯಲ್ಲಿ 35 ಎಕರೆ ಪ್ರದೇಶದಲ್ಲಿರುವ ರೈನ್ ಬೋ ಬಡಾವಣೆ ಎರಡು ರಾಜಕಾಲುವೆ ಒತ್ತುವರಿ ಮಾಡಿಕೊಂಡು ನಿರ್ಮಿಸಿರುವುದರಿಂದ ಈಗಾಗಲೇ ಈ ಬಡಾವಣೆ ನಾಲ್ಕು ಬಾರಿ ಪ್ರವಾಹಕ್ಕೆ ಸಿಲುಕಿದೆ. ಹೀಗಾಗಿ ಒತ್ತುವರಿಯಾಗಿರುವ 13 ವಿಲ್ಲಾಗಳನ್ನು ನೆಲಸಮಗೊಳಿಸಬೇಕಿದೆ. ಈ ಕಾರ್ಯಚರಣೆಗೆ ತಹಶೀಲ್ದಾರ್ ಆದೇಶಕ್ಕಾಗಿ ಕಾಯುತ್ತಿದ್ದರೂ ಇದುವರೆಗೂ ಅನುಮತಿ ಸಿಗದಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

13 ವಿಲ್ಲಾಗಳನ್ನು ಕೆಡವಲು ಕೆಆರ್ ಪುರಂ ತಹಶೀಲ್ದಾರ್ ಅವರ ಅಕೃತ ಆದೇಶಕ್ಕಾಗಿ ಕಾದು ಕುಳಿತಿದ್ದ ರೂ ಇದುವರೆಗೂ ಅನುಮತಿ ದೊರೆತಿಲ್ಲ. ತಹಶೀಲ್ದಾರ್ ಅಜಿತ್ ಕುಮಾರ್ ರೈ ಅವರು ಈ ಕುರಿತಂತೆ ಯಾವುದೇ ಹೇಳಿಕೆ ನೀಡಲು ನಿರಾಕರಿಸುತ್ತಿದ್ದಾರೆ.

ಸರ್ವೇಯರ್‍ಗಳ ಕೊರತೆ: ರಾಜಕಾಲುವೆ ಒತ್ತುವರಿ ತೆರವು ಕಾರ್ಯಚರಣೆಗೆ ಬಿಬಿಎಂಪಿ ಸಿದ್ದವಾಗಿದ್ದರೂ ಒತ್ತುವರಿ ಗುರುತು ಮಾಡುವ ಸರ್ವೇಯರ್‍ಗಳ ಕೊರತೆ ಕಾಡತೊಡಗಿದೆ. ಇಂದು ಮಹದೇವಪುರದ ಮುನೇನಕೊಳಲ, ಶಾಂತಿನಿಕೇತನ ಲೇಔಟ್ ಹಾಗೂ ಚಲ್ಲಘಟ್ಟದಲ್ಲಿ ಒತ್ತುವರಿ ತೆರವು ಕಾರ್ಯಚರಣೆ ನಡೆಸಬೇಕಿದೆ. ಆದರೆ, ಸರ್ವೇಯರ್‍ಗಳ ಕಡಿಮೆ ಇರೋ ದ್ರಿಂದ ಡೆಮಾಲಿಷನ್ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ.ಹೀಗಾಗಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಚರಣೆ ನಿಧಾನವಾಗಿ ನಡೆಯುತ್ತಿದೆ.

550 ಒತ್ತುವರಿ ತೆರವು ಬಾಕಿ: ಒತ್ತುವರಿ ತೆರವು ಕಾರ್ಯಚರಣೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ. ನಾವು ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ. ಇನ್ನು 550 ಒತ್ತುವರಿ ತೆರವು ಬಾಕಿ ಇದ್ದು ಆ ಕಾರ್ಯಚರಣೆಯನ್ನು ನಾವು ಪೂರ್ಣಗೊಳಿಸುತ್ತೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

ಬಾಗ್ಮನೆ ಪಾರ್ಕ್ ಹಿಂದೆ ಪೂರ್ವಂಕರ ಇದೆ ನಾಲೆಗೆ ಗೋಡೆ ಕಟ್ಟಿದ್ದಾರೆ .ಗೋಡೆ ಒಡೆದರೆ ಆ ಏರಿಯಾದಲ್ಲಿ ಪ್ರವಾಹ ಉಂಟಾಗುತ್ತದೆ. ಹೀಗಾಗಿ ನಮಗೆ ಸಮಯ ಕೊಡಿ ನಾವೇ ತೆರವು ಮಾಡುತ್ತೇವೆ ಎಂದು ಸಂಸ್ಥೆಯವರು ಮನವಿ ಮಾಡಿಕೊಂಡಿರುವುದರಿಂದ ಅವರಿಗೆ ಕಾಲಾವಕಾಶ ನೀಡಿದ್ದೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬರೀ ಮಹಾದೇವಪುರ ಅಥವಾ ಬೊಮ್ಮನಹಳ್ಳಿ ವಲಯ ಅಲ್ಲ ಉಳಿದ ವಲಯಗಳಲ್ಲೂ ಶೀಘ್ರದಲ್ಲೇ ಒತ್ತುವರಿ ತೆರವು ಕಾರ್ಯಚರಣೆ ಆರಂಭಿಸುತ್ತೇವೆ ಎಂದು ಅವರು ಹೇಳಿದರು.

ಯಾವ ಯಾವ ವಲಯಗಳಲ್ಲಿ ಎಷ್ಟೇಷ್ಟು ಒತ್ತುವರಿ ಆಗಿದೆ ಎಂದು ಸರ್ವೇಯರ್‍ಗಳು ಮಾರ್ಕಿಂಗ್ ಮಾಡ್ತಿದ್ದಾರೆ. ಎಲ್ಲಾ ಕಾರ್ಯ ಪೂರ್ಣಗೊಂಡ ಕೂಡಲೇ ಎಲ್ಲ ಕಡೆ ಒತ್ತುವರಿ ತೆರುವ ಕಾರ್ಯ ಆರಂಭಿಸುತ್ತೇವೆ ಎಂದು ಅವರು ತಿಳಿಸಿದರು.

ಕಡೆಗಣಿಸಿಲ್ಲ: ಬಿಬಿಎಂಪಿಯವರು ಸಮರ್ಪಕ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ವಿಪಲರಾಗಿದ್ದಾರೆ ಎಂದು ಐಟಿ ದಿಗ್ಗಜರ ಆರೋಪದಲ್ಲಿ ಯಾವುದೇ ಹುರುಳಿಲ್ಲ. ನಾವು ಯಾರನ್ನು ಕಡೆಗಣಿಸಿಲ್ಲ ಎಂದು ತುಷಾರ್ ಗಿರಿನಾಥ್ ಸ್ಪಷ್ಟಪಡಿಸಿದ್ದಾರೆ.

ನಮ್ಮದು ಪ್ರಜಾಪ್ರಭುತ್ವ ದೇಶ ಯಾರು ಬೇಕಾದರೂ ದೂರು ನೀಡಬಹುದು. ಐಟಿ ಕಾರಿಡಾರ್ ಪ್ರದೇಶಗಳಿಗೆ ಪ್ರತ್ಯೆಕ ಮುನ್ಸಿಪಲ್ ಕಲ್ಪಿಸುವಂತೆ ಐಟಿ ಕಂಪನಿಗಳಿಂದ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಆ ಕುರಿತಂತೆ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದರು.

Articles You Might Like

Share This Article