ಬಿಬಿಎಂಪಿ ಮುಖ್ಯ ಆಯುಕ್ತರ ತಡರಾತ್ರಿ ಕಾರ್ಯಾಚರಣೆ; ಅಭಿವೃದ್ಧಿ ಕಾಮಗಾರಿ ಪೂರ್ಣಕ್ಕೆ ಗಡುವು

ಬೆಂಗಳೂರು, ಏ.30- ಬಿಬಿಎಂಪಿ ವ್ಯಾಪ್ತಿಯ ಪಶ್ಚಿಮ ಹಾಗೂ ಪೂರ್ವ ವಲಯ ವ್ಯಾಪ್ತಿಯಲ್ಲಿ ಕೈಗೆತ್ತಿಕೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಿನ್ನೆ ತಡರಾತ್ರಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು ತಪಾಸಣೆ ನಡೆಸಿದರು. ಶೇಷಾದ್ರಿ ರಸ್ತೆಯಲ್ಲಿ ಮೌರ್ಯ ಹೊಟೇಲ್ ಜಂಕ್ಷನ್‍ನಿಂದ ಕೆಆರ್ ವೃತ್ತದವರೆಗೆ 1.2ಕಿ.ಮೀ. ಉದ್ದದ ರಸ್ತೆಯಲ್ಲಿ 6 ಪಥದ ವೈಟ್ ಟಾಂಪಿಗ್ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ 60 ದಿನಗಳೊಳಗೆ ಕಾಮಗಾರಿ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಮುಖ್ಯ ಅಭಿಯಂತರ ಲೋಕೇಶ್ ಅವರಿಗೆ ಸೂಚಿಸಿದರು.

ಅವಿನ್ಯೂ ರಸ್ತೆ, ಬಿವಿಕೆ ಅಯ್ಯಂಗಾರ್ ರಸ್ತೆ, ಸುಲ್ತಾನ್ ಪೇಟೆ, ಚಿಕ್ಕಪೇಟೆ ಮೆಟ್ರೋ ರೈಲು ನಿಲ್ದಾಣ, ಕೆಂಪೇಗೌಡ ರಸ್ತೆಯಲ್ಲಿ ಹಮ್ಮಿಕೊಂಡಿರುವ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿ, ರಾತ್ರಿ ವೇಳೆ ವಾಹನಗಳ ಸಂಚಾರ ವಿಳರವಾಗಿರಲಿದ್ದು, ಆ ಸಂದರ್ಭದಲ್ಲೇ ಕಾಮಗಾರಿ ಪೂರ್ಣಗೊಳಿಸಲು ತ್ವರಿತ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು. ಸದಾಶಿವನಗರದ ಭಾಷ್ಯಂ ವೃತ್ತದ ಬಳಿ ಸ್ಯಾಂಕಿ ಟ್ಯಾಂಕ್ ಸಮೀಪದ ರಸ್ತೆಯಲ್ಲಿ ನಡೆಯುತ್ತಿರುವ ಡಾಂಬರೀಕರಣ ಕಾಮಗಾರಿ ಪರಿಶೀಲನೆ ನಡೆಸಿ ತ್ವರಿತವಾಗಿ ಪೂರ್ಣಗೊಳಿಸಲು ಆದೇಶಿಸಿದರು.

ಮಂತ್ರಿಮಾಲ್ ಬಳಿಯಿಂದ ಯಶವಂತಪುರ ಜಂಕ್ಷನ್‍ವರೆಗೆ ಕೈಗೆತ್ತಿಕೊಂಡಿರುವ ವೈಟ್ ಟಾಂಪಿಂಗ್ ಕಾಮಗಾರಿಯನ್ನು ಪರಿಶೀಲನೆ ನಡೆಸಿ, ಪಾದಚಾರಿ ಮಾರ್ಗ, ಜಲಮಂಡಳಿ, ಬೆಸ್ಕಾಂ, ಓಎಫ್‍ಸಿ ಕೇಬಲ್ ಅಳವಡಿಕೆಗೆ ಡP್ಟï ಅಳವಡಿಕೆ ಸೇರಿದಂತೆ ಇನ್ನಿತರೆ ಮೂಲ ಸೌಲಭ್ಯಗಳ ಅಳವಡಿಕೆಯ ಕಾಮಗಾರಿಗಳನ್ನು ಪೂರ್ಣಗೊಳಿಸಿ 15 ದಿನಗಳೊಳಗಾಗಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟು ಸ್ಥಳೀಯರಿಗೆ ಯಾವುದೇ ಸಮಸ್ಯೆಯಾಗದಂತೆ ಬಾಕಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅದೇ ರೀತಿ ಜಯಮಹಲ್ ರಸ್ತೆಯ ದೂರದರ್ಶನ ಕೇಂದ್ರದ ಬಳಿ ನಡೆಯುತ್ತಿರುವ ಕಾಮಗಾರಿ, ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಹಿಂಭಾಗದ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಆಯುಕ್ತರು ಪರಿಶೀಲಿಸಿದರು. ರಸ್ತೆ ಮೂಲಭೂತ ಸೌಕರ್ಯ ವಿಭಾಗದ ಮುಖ್ಯ ಇಂಜಿನಿಯರ್ ಪ್ರಹ್ಲಾದ್, ಯೋಜನಾ ವಿಭಾಗದ ಮುಖ್ಯ ಇಂಜಿನಿಯರ್ ಲೋಕೇಶ್, ಪಶ್ಚಿಮ ವಲಯ ಮುಖ್ಯ ಇಂಜಿನಿ ಯರ್ ವಿಶ್ವನಾಥ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.