ಓಕಳಿಪುರ ಅಷ್ಟಪಥ ಕಾರಿಡಾರ್ ರಸ್ತೆ ಶೀಘ್ರ ಮುಕ್ತಗೊಳಿಸಲು ತುಷಾರ್ ಗಿರಿನಾಥ್ ಸೂಚನೆ
ಬೆಂಗಳೂರು,ಮೇ 17- ಓಕಳಿಪುರ ಅಷ್ಟಪಥ ಕಾರಿಡಾರ್ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಬಳಕೆಯಾಗದಿರುವ ರಸ್ತೆಯನ್ನು ಕೂಡಲೇ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಇಂದಿಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಪಶ್ಚಿಮ ವಲಯದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರದೇಶಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಅಷ್ಟಪಥ ಕಾರಿಡಾರ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಅವರು ಅಧಿಕಾರಿಗಳಿಗೆ ಈ ಸೂಚನೆ ನೀಡಿದರು. ಅಷ್ಟಪಥ ರಸ್ತೆಯಲ್ಲಿ ತುಮಕೂರು ಕಡೆಗೆ ಹೋಗುವ ರೈಲ್ವೆ ಟ್ರಾಕ್ ಅಡಿ ರೈಲ್ವೆ ಇಲಾಖೆಯಿಂದ ಬಾಕ್ಸ್ ಪುಶಿಂಗ್ ಕಾಮಗಾರಿ ಪ್ರಗತಿಯಲ್ಲಿದ್ದು, ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲು ರೈಲ್ವೆ ಅಧಿಕಾರಿಗಳಿಗೆ ಸೂಚಿಸುವಂತೆಯೂ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಖೋಡೇಸ್ ವೃತ್ತದಲ್ಲಿರುವ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಪ್ರತಿಮೆ ಪರಿಶೀಲನೆ ಮಾಡಿ ಪೈಪ್ ಲೀಕ್ ಆಗುತ್ತಿರುವುದನ್ನು ದುರಸ್ತಿಪಡಿಸಿ ವೃತ್ತದಲ್ಲಿರುವ ಕಿರು ಉದ್ಯಾನವನದ ಸುತ್ತ ಅಳವಡಿಸಿದ್ದ ಕಲ್ಲಿನ ಕಂಬಗಳು ಹಾಳಾಗಿದ್ದು ಅವುಗಳನ್ನು ಬದಲಿಸಿ ಟ್ರಾಫಿಕ್ ಕಿಯೋಸ್ಕ್ಗೆ ದೀಪ ಅಳವಡಿಸಲು ಆಯುಕ್ತರು ಹೇಳಿದರು.
ಮಾಗಡಿ ರಸ್ತೆ ಹಾಗೂ ವಾಟಾಳ್ ನಾಗರಾಜ್ ರಸ್ತೆಗೆ ಸಂಪರ್ಕ ಕಲ್ಪಿಸುವ ವೈ ಜಂಕ್ಷನ್ ಗ್ರೇಡ್ ಸೆಪರೇಟರ್ ಕಾಮಗಾರಿಯನ್ನು ಜುಲೈ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಅವರು ಅದೇಶಿಸಿದರು.
ಸುಭಾಷ್ನಗರ ವಾರ್ಡ್ ವ್ಯಾಪ್ತಿಯ ರಸ್ತೆಯಲ್ಲಿ ನೀರು ನಿಂತಿರುವುದನ್ನು ಗಮನಿಸಿದ ತುಷಾರ್ ಗಿರಿನಾಥ್ ಅವರು ಯಾವ ರಸ್ತೆಗಳಲ್ಲಿ ನೀರು ನಿಲ್ಲುವುದೋ ಅಂತಹ ರಸ್ತೆಗಳನ್ನು ಪರಿಶೀಲಿಸಿ ಪೈಪ್ ಅಳವಡಿಕೆ ಮಾಡಿ ರಾಜಕಾಲುವೆಗಳಿಗೆ ನೀರು ಹರಿದುಹೋಗುವಂತೆ ಕ್ರಮಕೈಗೊಳ್ಳಬೇಕು ಹಾಗೂ ರಸ್ತೆ ಬದಿ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಡಬೇಡಿ ಎಂದು ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಮಂತ್ರಿ ಮಾಲ್ ಮುಂಭಾಗದ ರಸ್ತೆ ಜಲಾವೃತವಾಗುವುದನ್ನು ತಪ್ಪಿಸುವ ಉದ್ದೇಶದಿಂದ ಕೈಗೆತ್ತಿಕೊಳ್ಳಲಾಗಿರುವ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು ಹಾಗೂ ಮುಂದಿನ ದಿನಗಳಲ್ಲಿ ರಸ್ತೆಗಳಲ್ಲಿ ನೀರು ನಿಂತರೆ ಸಂಬಂಧಪಟ್ಟ ಅಧಿಕಾರಿಗಳನ್ನೇ ನೇರ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಗಿರಿನಾಥ್ ಎಚ್ಚರಿಸಿದರು.
ನಂತರ ಆಯುಕ್ತರು ಸ್ಯಾಂಕಿ ಕೆರೆ, ಯಶವಂತಪುರ ಮಾರುಕಟ್ಟೆ ಕಟ್ಟಡ, ಶಕ್ತಿಗಣಪತಿ ನಗರದಲ್ಲಿ 8.70 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸುತ್ತಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, 9.70 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಅತ್ಯಾಧುನಿಕ ಫ್ರೌಢಶಾಲೆ ಮತ್ತು ಪದವಿ ಕಾಲೇಜು ನಿರ್ಮಾಣ ಪ್ರದೇಶ, ಕಾಡುಮಲ್ಲೇಶ್ವರದ ರಾಜಕಾಲುವೆ ಕಾಮಗಾರಿ, ಗಾಂಧಿನಗರ ವಾರ್ಡ್ನ ಮಸ್ಟರಿಂಗ್ ಪಾಯಿಂಟ್, ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ ಮತ್ತಿತರ ಕಾಮಗಾರಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಲಯ ಆಯುಕ್ತ ಡಾ.ದೀಪಕ್, ಜಂಟಿ ಆಯುಕ್ತ ಶ್ರೀನಿವಾಸ್, ಮುಖ್ಯ ಎಂಜಿನಿಯರ್ಗಳಾದ ವಿಶ್ವನಾಥ್, ಪ್ರಹ್ಲಾದ್ ಮತ್ತಿತರರು ಹಾಜರಿದ್ದರು.