ತಡರಾತ್ರಿ ಬಿಬಿಎಂಪಿ ಆಯುಕ್ತರಿಂದ ರಾಜಧಾನಿ ರೌಂಡ್ಸ್

Social Share

ಬೆಂಗಳೂರು, ಸೆ.4- ಮಳೆಯಿಂದಾಗಿ ರಾಜಧಾನಿಯಲ್ಲಿ ಉಂಟಾಗಿರುವ ವಾಹನ ದಟ್ಟಣೆ ತಪ್ಪಿಸುವ ಉದ್ದೇಶದಿಂದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ತಡರಾತ್ರಿ ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹೆಬ್ಬಾಳ ಜಂಕ್ಷನ್‍ಗೆ ಭೇಟಿ ನೀಡಿದ ಆಯುಕ್ತರು, ಎಸ್ಟೀಮ್ ಮಾಲ್ ಕಡೆಯಿಂದ ಕೆಆರ್ ಪುರ ಕಡೆಗೆ ಹೋಗುವ ರಸ್ತೆ ಹಾಗೂ ಬಳ್ಳಾರಿ ಮಾರ್ಗದ ರಸ್ತೆಯನ್ನು ಈ ಕೂಡಲೇ ಅಗಲೀಕರಣ ಮಾಡುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಸ್ತೆ ಇಕ್ಕೆಲಗಳಲ್ಲಿ ಬೀದಿದೀಪಗಳನ್ನು ಅಳವಡಿಸಿ ಪಾದಚಾರಿ ಮಾರ್ಗಗಳನ್ನು ಸರಿಪಡಿಸುವಂತೆ ಆದೇಶಿಸಿದರು.

ಹೆಬ್ಬಾಳ ಜಂಕ್ಷನ್‍ನ ಪಾದಚಾರಿ ಮಾರ್ಗಗಳಿಗೆ ಗ್ರಿಲ್ ಅಳವಡಿಸಿ ಮಳೆ ನೀರು ರಸ್ತೆ ಮೇಲೆ ನಿಲ್ಲದೆ ಸರಾಗವಾಗಿ ನೀರುಗಾಲುವೆಗೆ ಹರಿದು ಹೋಗುವ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಿದರು. ನಂತರ ಕೆಆರ್ ಪುರದ ಟಿನ್ ಫ್ಯಾಕ್ಟರಿ ಜಂಕ್ಷನ್‍ಗೆ ತೆರಳಿದ ಗಿರಿನಾಥ್ ಅವರು ಮೆಟ್ರೋ ಸ್ಟೇಷನ್ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಿ ಸಾವಜನಿಕರ ಓಡಾಟಕ್ಕೆ ಅವಕಾಶ ಕಲ್ಪಿಸಿಕೊಡುವಂತೆ ಮೆಟ್ರೊ ಅಕಾರಿಗಳಿಗೆ ಸೂಚಿಸಿದರು.

ಬಸ್ ಬೇ ಕಾಮಗಾರಿಯನ್ನು ಪೂರ್ಣಗೊಳಿಸಿ ಪಾದಚಾರಿಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು ಹಾಗೂ ಬಸ್‍ಗಳು ನಿಲ್ದಾಣದಲ್ಲೇ ನಿಲ್ಲುವಂತೆ ನೋಡಿಕೊಳ್ಳಲು ಸಿಬ್ಬಂದಿಗಳನ್ನು ನಿಯೋಜಿಸುವಂತೆ ಬಿಎಂಟಿಸಿ ಅಧಿಕಾರಿಗಳಿಗೆ ಸಲಹೆ ನೀಡಿದರು.

ಇಕೋಸ್ಪೇಸ್ ಬಳಿ ರಾಜಕಾಲುವೆಯ ಪುನರ್ ವಿನ್ಯಾಸ ಕಾಮಗಾರಿಯನ್ನು ಪೂರ್ಣಗೊಳಿಸಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಪರ್ಯಾಯವಾಗಿ ಕ್ರಾಸ್ ಕಲ್ವರ್ಟ್‍ಗಳನ್ನು ಮಾಡಲು ಸೂಚಿಸಿದರು. ಪ್ರಮುಖ ನೀರುಗಾಲುವೆಗೆ ಅಳವಡಿಸಿರುವ 3 ಕೊಳವೆಗಳು ಚಿಕ್ಕದಾಗಿದ್ದು, ಅದನ್ನು ವಿಸ್ತರಿಸುವಂತೆ ಸಲಹೆ ನೀಡಿದರು. ಮೇಲ್ಸೇತುವೆಯ ರ್ಯಾಂಪ್ ಕೆಳಭಾಗದ ಮೂಲಕ ನೇರವಾಗಿ ಮಳೆ ನೀರು ಕಾಲುವೆಗೆ ಹರಿದು ಹೋಗುವಂತಹ ಕಾರ್ಯ ಮಾಡಬೇಕು ಎಂದು ತಾಕೀತು ಮಾಡಿದರು.

ಇಕೋ ಸ್ಪೇಸ್ ಆವರಣದ ಕೆಇಬಿ ಸ್ಟೇಷನ್ ಬಳಿ ಇರುವ ಕಾಲುವೆ ಒತ್ತುವರಿಯಿಂದಾಗಿ ಬ್ಲಾಕ್ ಆಗಿದ್ದು, ಕೂಡಲೇ ಒತ್ತುವರಿ ತೆರವುಗೊಳಿಸುವಂತೆ ಆದೇಶಿಸಿದರು.

ನಂತರ ಇಬ್ಲೂರು ಜಂಕ್ಷನ್, ಜೆಡಿ ಮರ ಜಂಕ್ಷನ್, ಸಾರಕ್ಕಿ ಜಂಕ್ಷನ್, ಸುಮ್ಮನಹಳ್ಳಿ ಜಂಕ್ಷನ್, ಗೊರಗುಂಟೆ ಪಾಳ್ಯ ಜಂಕ್ಷನ್ ಪ್ರದೇಶಗಳಿಗೆ ತೆರಳಿ ಅಲ್ಲಿನ ಸಮಸ್ಯೆಗಳನ್ನು ಸಮರೋಪಾದಿಯಲ್ಲಿ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ವಲಯ ಆಯುಕ್ತರಾದ ಡಾ.ತ್ರಿಲೋಕ್ ಚಂದ್ರ, ಡಾ. ಹರೀಶ್ ಕುಮಾರ್, ಡಾ. ರಾಮ್ ಪ್ರಸಾತ್ ಮನೋಹರ್, ಪೂರ್ಣಿಮಾ, ವೆಂಕಟಾ ಚಲಪತಿ, ನಾಗರಾಜ, ಮುಖ್ಯ ಅಭಿಯಂತರರಾದ ಲೋಕೇಶ್, ಬಸವರಾಜ್ ಕಬಾಡೆ, ಶಶಿಕುಮಾರ್, ವಿಜಯ್ ಕುಮಾರ್ ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.

Articles You Might Like

Share This Article