ಬೆಂಗಳೂರು, ಮಾ.10- ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ 198 ವಾರ್ಡ್‍ಗಳ ಪೌರ ಕಾರ್ಮಿಕರು ಕೆಲಸಕ್ಕೆ ಗೈರು ಹಾಜರಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ನಗರದ ಫ್ರೀಡಂಪಾರ್ಕ್‍ನಲ್ಲಿ ಜಮಾಯಿಸಿರುವ ಸಾವಿರಾರು ಪೌರ ಕಾರ್ಮಿಕರು ತಮ್ಮ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಈ ಕೂಡಲೇ 18,500 ಪೌರ ಕಾರ್ಮಿಕರನ್ನು ಹಾಗೂ ಮೇಲ್ವಿಚಾರಕರನ್ನು ಖಾಯಂಗೊಳಿಸುವಂತೆ ಪ್ರತಿಭಟನಾನಿರತರು ಒತ್ತಾಯಿಸಿದ್ದಾರೆ.
ಇದರ ಜತೆಗೆ ವೇತನ ಹೆಚ್ಚಳ, ಆರೋಗ್ಯ ಕಾರ್ಡ್, ಗರ್ಭಿಣಿಯರಿಗೆ ಆರು ತಿಂಗಳ ರಜೆ ನೀಡುವುದು ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈ ಕೂಡಲೇ ಈಡೇರಿಸಬೇಕು ಎಂದು ಆಗ್ರಹಿಸಿದ್ದಾರೆ.
ಸ್ಥಳಕ್ಕೆ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಭೇಟಿ ನೀಡಬೇಕು. ತಮ್ಮ ಅಹವಾಲು ಸ್ವೀಕರಿಸಿ ಬೇಡಿಕೆ ಈಡೇರಿಸುವ ಭರವಸೆ ನೀಡುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಪೌರ ಕಾರ್ಮಿಕರು ಎಚ್ಚರಿಸಿದ್ದಾರೆ.
