ಅನುದಾನ ನೀಡದಿದ್ದರೆ ಬಿಬಿಎಂಪಿ -ಸಿಎಂ ಕಚೇರಿ ಎದುರು ಧರಣಿ : ರಾಮಲಿಂಗಾ ರೆಡ್ಡಿ

Social Share

ಬೆಂಗಳೂರು,ಜ.7-ಮಳೆ ನೀರು ಸರಾಗವಾಗಿ ಹರಿಯುವ ಕಾಮಗಾರಿಗಳನ್ನು ಕೈಗೊಳ್ಳಲು ಜಯನಗರ ಮತ್ತು ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರಗಳಿಗೆ ಒಂದು ಪೈಸೆಯೂ ಹಣ ಕೊಟ್ಟಿಲ್ಲ. ಇದನ್ನು ವಿರೋಧಿಸಿ ಬಿಬಿಎಂಪಿ ಕಚೇರಿ ಎದುರು ಫುಟ್ಪಾತ್ ಮೇಲೆ ಕುಳಿತು ಧರಣಿ ಮಾಡುತ್ತೇವೆ. ಬುಧವಾರ ಮುಖ್ಯಮಂತ್ರಿ ಕಚೇರಿ ಮುಂದೆ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ 1479 ಕೋಟಿ ರೂ. ವೆಚ್ಚದಲ್ಲಿ 298 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಅದರಲ್ಲಿ ಬಿಜೆಪಿಯ 15 ಮಂದಿ ಶಾಸಕರಿಗೆ 1,100 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ.
ಕಾಂಗ್ರೆಸ್‍ನ 9 ಮಂದಿ ಶಾಸಕರ ಕ್ಷೇತ್ರಗಳಿಗೆ 248 ಕೋಟಿ ರೂ. ಹಂಚಿಕೆಯಾಗಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪ್ರತಿಭಟನೆ ಮಾಡುತ್ತಿದ್ದರು ಎಂಬ ಕಾರಣಕ್ಕಾಗಿ ಜೆಡಿಎಸ್ ಶಾಸಕರಿರುವ ದಾಸರಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ 120 ಕೋಟಿ ರೂ. ಅನುದಾನ ನೀಡಿದ್ದಾರೆ. ಆದರೆ ನಾನು ಶಾಸಕನಾಗಿರುವ ಬಿಟಿಎಂ ಲೇಔಟ್ ಮತ್ತು ನನ್ನ ಮಗಳು ಸೌಮ್ಯ ರೆಡ್ಡಿ ಶಾಸಕಿಯಾಗಿರುವ ಜಯನಗರ ಕ್ಷೇತ್ರಕ್ಕೆ ಒಂದು ರೂ. ಅನುದಾನ ನೀಡಿಲ್ಲ.
ಇಲ್ಲಿ ಮಳೆ ನೀರಿನ ಅನಾಹುತಗಳಾಗುವುದಿಲ್ಲವೇ? ಸಾರಕ್ಕಿ ಸೇರಿದಂತೆ ಹಲವು ಭಾಗಗಳಲ್ಲಿ ಸಮಸ್ಯೆಗಳಿವೆ ಎಂದು ಕಳೆದ ಏಪ್ರಿಲ್‍ನಲ್ಲೇ ನಾನು ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದು ಆರ್ಥಿಕ ನೆರವು ಕೇಳಿದ್ದೇವೆ. ಆದರೂ ಉದ್ದೇಶಪೂರ್ವಕವಾಗಿ ನಮ್ಮ ಕ್ಷೇತ್ರಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿದರು.
ಅನುದಾನ ಹಂಚಿಕೆ ಮಾಡದಿರುವ ಬಗ್ಗೆ ಬಿಬಿಎಂಪಿ ಆಯುಕ್ತರು, ಆಡಳಿತಾಕಾರಿಯ ಜೊತೆ ಚರ್ಚೆ ನಡೆಸಿದ್ದೇನೆ. ಅವರು ಲೋಪವನ್ನು ಸರಿಪಡಿಸುವ ಭರವಸೆ ನೀಡಿದ್ದಾರೆ. ಒಂದು ವೇಳೆ ಸೋಮವಾರದೊಳಗೆ ನಮ್ಮ ಕ್ಷೇತ್ರಕ್ಕೆ ಅನುದಾನ ಬಿಡುಗಡೆಯಾಗದಿದ್ದರೆ ಹೋರಾಟ ಅನಿವಾರ್ಯವಾಗಲಿದೆ ಎಂದು ಹೇಳಿದರು.
ಪ್ರತಿಭಟನೆ ಮಾಡಬಾರದೆಂದು ರಾಜ್ಯ ಸರ್ಕಾರ ನಿಯಮಾವಳಿ ಹೊರಡಿಸಿದೆ. ನಾವು ಅದನ್ನು ಗೌರವಿಸುತ್ತೇವೆ. ಬೆಂಬಲಿಗರನ್ನು ಕರೆದುಕೊಂಡು ಹೋಗುವುದಿಲ್ಲ. ಶಾಮಿಯಾನ ಹಾಕುವುದಿಲ್ಲ. ಬಿಬಿಎಂಪಿಯ ಕಚೇರಿಯ ಫುಟ್ಪಾತ್ ಮೇಲೆ ಕುಳಿತು ನಾನು ನನ್ನ ಮಗಳು ಸೋಮವಾರ ಧರಣಿ ಮಾಡುತ್ತೇವೆ. ಆಗಲೂ ಸರಿ ಹೋಗದಿದ್ದರೆ ಸಿಎಂ ಕಚೇರಿ ಎದುರು ಇಬ್ಬರೇ ಧರಣಿ ನಡೆಸುತ್ತೇವೆ ಎಂದರು.
ಕಾಂಗ್ರೆಸ್‍ನ ಎಲ್ಲ ಶಾಸಕರಿಗೂ ಹಣ ನೀಡಲಾಗಿದೆ. ಆದರೆ ಕಡಿಮೆ ಇದೆ. ಧರಣಿಯಲ್ಲಿ ಭಾಗವಹಿಸುವುದು, ಬಿಡುವುದು ಅವರಿಗೆ ಸೇರಿದ ವಿಷಯ. ನಾನು ಮತ್ತು ನನ್ನ ಮಗಳು ಧರಣಿ ಕೂರುವುದು ಖಚಿತ ಎಂದರು.

Articles You Might Like

Share This Article