ಬೆಂಗಳೂರುನಲ್ಲಿ ಮುಂದುವರೆದ ಒತ್ತುವರಿ ತೆರವು ಕಾರ್ಯಾಚರಣೆ

Social Share

ಬೆಂಗಳೂರು,ಸೆ.13- ರಾಜಕಾಲುವೆ ಒತ್ತುವರಿ ತೆರವು ಕಾರ್ಯಚರಣೆಯನ್ನು ಬಿಬಿಎಂಪಿ ಇಂದು ಕೂಡ ಮುಂದುವರೆಸಿದೆ.
ಪ್ರತಿಷ್ಠಿತ ಐಟಿ ಪಾರ್ಕ್ ಗಳು ಮತ್ತು ಬಿಲ್ಡರ್‍ಗಳು ಮಾಡಿಕೊಂಡಿರುವ ಒತ್ತುವರಿ ಪತ್ತೆ ಹಚ್ಚಿ ತೆರವು ಕಾರ್ಯಚರಣೆ ನಡೆಸಲಾಗುತ್ತಿದೆ.

ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಐಟಿ ಪಾರ್ಕ್‍ಗಳು, ಬೃಹತ್ ಕಟ್ಟಡಗಳು ಮಾಡಿಕೊಂಡಿರುವ ಒತ್ತುವರಿ ಪತ್ತೆ ಮಾಡಲಾಗಿದ್ದು ಅವಗಳನ್ನು ಇಂದಿನಿಂದ ತೆರವುಗೊಳಿಸಲಾಗುವುದು ಎಂದು ಮಹದೇವಪುರ ವಲಯದ ಮುಖ್ಯ ಅಭಿಯಂತರ ಬಸವರಾಜ್ ಕಬಾಡೆ ತಿಳಿಸಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಹದೇವಪುರ ವಲಯ ವ್ಯಾಪ್ತಿಯ ಶಾಂತಿನಿಕೇತನ ಲೇಔಟ, ಸ್ಪೈಸಿ ಗಾರ್ಡನ, ಪಾಪಯ್ಯ ರೆಡ್ಡಿ ಲೇಔಟ್ ಹಾಗೂ ಚೆಲ್ಲಘಟ್ಟದ ಬಳಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗುವುದೆಂದು ಅವರು ವಿವರಣೆ ನೀಡಿದ್ದಾರೆ.

ಬಾಗ್ಮಾನೆ ಟೆಕ್ ಪಾರ್ಕ್, ಪೂರ್ವ ಪ್ಯಾರಡೈಸ್, ಆರ್‍ಬಿಡಿ, ವಿಪ್ರೋ, ಇಕೋಸ್ಪೇಸ್, ಗೋಪಾಲನ್ ಬೆಳ್ಳಂದೂರು, ದಿಯಾ ಶಾಲೆ, ಆದರ್ಶ, ಕೊಲಂಬಿಯಾ ಏಷ್ಯಾ ಆಸ್ಪತ್ರೆ, ನ್ಯೂ ಹಾರಿಜನ್ ಕಾಲೇಜ್ , ದಿವ್ಯಶ್ರೀ, ಪ್ರೆಸ್ಟೀಜ್, ಸಲಾರ್‍ಪುರಿಯಾ, ನಲ್ಪಾಡ್ ಡೆವಲಪರ್ಸ್ ಮತ್ತಿತರ ಸಂಸ್ಥೆಗಳು ಮಾಡಿಕೊಂಡಿರುವ ಒತ್ತುವರಿ ಪಟ್ಟಿಯನ್ನು ಬಿಬಿಎಂಪಿ ಸಿದ್ದಪಡಿಸಿಕೊಂಡಿದೆ ಎಂದು ತಿಳಿದುಬಂದಿದೆ.

ಒತ್ತುವರಿ ತೆರವುಗೊಳಿಸಿ ಎಂದು ಬೊಬ್ಬೆ ಹೊಡೆಯುತ್ತಿರುವ ಕಾಂಗ್ರೆಸ್ ಶಾಸಕ ಹ್ಯಾರಿಸ್ ಒಡೆತನದ ನಲ್ಪಾಡ್ ಸಂಸ್ಥೆಯೇ ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಒತ್ತುವರಿ ಮಾಡಿಕೊಂಡವರಲ್ಲಿ ನಗರದ ಅತಿಗಣ್ಯ ವ್ಯಕ್ತಿಗಳು ಹಾಗೂ ಪ್ರಮುಖ ರಾಜಕಾರಣಿಗಳು ಇರುವುದು ಪತ್ತೆಯಾಗಿದೆ. ಅಂತಹ ಗಣ್ಯರ ಒತ್ತುವರಿ ತೆರವುಗೊಳಿಸುವ ಸಂಬಂಧ ಮುಖ್ಯ ಆಯುಕ್ತರ ಆದೇಶಕ್ಕೆ ಕಾಯಲಾಗುತ್ತಿದೆ.

ಆದರೆ, ಆಯುಕ್ತರಿಂದ ಯಾವುದೇ ಮಾಹಿತಿ ಬಾರದ ಹಿನ್ನಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಗಣ್ಯ ವ್ಯಕ್ತಿಗಳ ಒತ್ತುವರಿ ತೆರವಿಗೆ ಹಿಂದೇಟು ಹಾಕುತ್ತಿದ್ದಾರೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.ಯಾರ ಪ್ರಭಾವಕ್ಕೂ ಒಳಗಾಗದೆ ನಿಮ್ಮ ಕೆಲಸ ನೀವು ಮಾಡಿ ಸರ್ಕಾರ ಎಲ್ಲ ರೀತಿಯ ಬೆಂಬಲ ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭರವಸೆ ನೀಡಿದರೆ ಮಾತ್ರ ಘಟಾನುಘಟಿ ವ್ಯಕ್ತಿಗಳ ಒತ್ತುವರಿ ತೆರವು ಮಾಡಲು ಸಾಧ್ಯವಾಗಲಿದೆ.

ಹೈಕೋರ್ಟ್ ಗರಂ: ನ್ಯಾಯಾಲಯದ ಆದೇಶ ಇದ್ದರೂ ರಾಜಕಾಲುವೆ ಒತ್ತುವರಿ ತೆರವುಗೊಳಿಸುವಲ್ಲಿ ವಿಪಲವಾಗಿರುವ ಬಿಬಿಎಂಪಿ ಧೋರಣೆಗೆ ಹೈಕೋರ್ಟ್ ಗರಂ ಆಗಿದೆ.

ಒತ್ತುವರಿ ತೆರವುಗೊಳಿಸುವಂತೆ ಆದೇಶ ನೀಡಿ 18 ತಿಂಗಳು ಕಳೆದರೂ ಬಿಬಿಎಂಪಿ ಕೋರ್ಟ್ ಆದೇಶ ಪಾಲನೆ ಮಾಡಿಲ್ಲ. ಈ ಕೂಡಲೇ ರಾಜಕಾಲುವೆಗಳ ಸಮೀಕ್ಷೆ ನಡೆಸಿ ಒತ್ತುವರಿ ತೆರವುಗೊಳಿಸುವಂತೆ ನ್ಯಾಯಾಲಯ ಮತ್ತೊಮ್ಮೆ ಆದೇಶ ನೀಡಿದೆ.
ಈ ಹಿಂದೆ ನ್ಯಾಯಲಯ ಸೂಚಿಸಿದ್ದ ಒತ್ತುವರಿ ತೆರವಿನ ಬಗ್ಗೆ ಮುಂದಿನ ವಿಚಾರಣೆ ಸಂದರ್ಭದಲ್ಲಿ ಬೊಮ್ಮನಹಳ್ಳಿ ವಿಭಾಗದ ಕಾರ್ಯಪಾಲಕ ಅಭಿಯಂತರರು ಖುದ್ದು ಹಾಜರಾಗಿ ಒತ್ತುವರಿ ತೆರವು ಮಾಹಿತಿ ನೀಡುವಂತೆಯೂ ನ್ಯಾಯಾಲಯ ಸೂಚಿಸಿದೆ.

Articles You Might Like

Share This Article