ಬೆಂಗಳೂರಿನಲ್ಲಿ ಬಿಬಿಎಂಪಿ ಹದ್ದಿನ ಕಣ್ಣು, ಅಧಿಕಾರಿಗಳಿಗೆ ಪೊಲೀಸರ ಸಾಥ್

ಬೆಂಗಳೂರು, ಏ.21- ಕೊರೊನಾ ಸೋಂಕು ತಡೆಗಟ್ಟಲು ಸರ್ಕಾರ ಜನರ ಹಿತಾಸಕ್ತಿ ಆಧರಿಸಿ ಕೆಲ ಕಠಿಣ ಕ್ರಮ ಕೈಗೊಂಡಿದೆ. ಇದನ್ನು ಚಾಚೂತಪ್ಪದೆ ಪಾಲಿಸಲು ಬಿಬಿಎಂಪಿ ಪೊಲೀಸ್ ಸಹಕಾರದಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದ್ದಾರೆ. ನೈಟ್ ಕಫ್ರ್ಯೂ, ಅಂಗಡಿಗಳು, ಮಾರುಕಟ್ಟೆ ಮುಚ್ಚಿಸುವ ಹೊಣೆ ಪಾಲಿಕೆಗೆ ಇದ್ದು, ಪ್ರತಿದಿನ ಈ ಬಗ್ಗೆ ಕಣ್ಣಿಡಲಿದ್ದು, ಪೊಲೀಸರಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಹೇಳಿದ್ದಾರೆ.

ಹೊಟೇಲ್, ರೆಸ್ಟೋರೆಂಟ್, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದರೆ ದಂಡ ವಿಸುವುದು, ಕೇಸ್ ಹಾಕುವ ಮೂಲಕ ಜನರಿಗೆ ಎಚ್ಚರಿಕೆ ನೀಡಲಾಗುತ್ತದೆ. ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಸಂಖ್ಯೆ ಶೇ.50ರಷ್ಟು ಇರುವಂತೆ ನೋಡಿಕೊಳ್ಳಬೇಕಿದೆ. ಹೊಟೇಲ್‍ಗಳಲ್ಲಿ ಪಾರ್ಸೆಲ್‍ಗೆ ಮಾತ್ರ ಅವಕಾಶ ನೀಡಲಾಗಿದ್ದು, ಇದರ ಮೇಲೆ ಬಿಬಿಎಂಪಿ ಅಕಾರಿಗಳು ನಿಗಾ ಇಡಲಿದ್ದಾರೆ.

ವೀಕೆಂಡ್ ಕಫ್ರ್ಯೂ: ವೀಕೆಂಡ್ ಕಫ್ರ್ಯೂ ಇರುವುದರಿಂದ ನಿಗದಿತ ಸಮಯದಲ್ಲಿ ಅಗತ್ಯ ವಸ್ತುಗಳು ಸಿಗುವಂತೆ ಕೊರೊನಾ ನಿಯಮ ಪಾಲಿಸಿ ನೋಡಿಕೊಳ್ಳಲಾಗುವುದು. ಪೊಲೀಸರ ಜೊತೆಗೆ ಕೋ-ಆರ್ಡಿನೇಷನ್ ಇಟ್ಟುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಮಾರುಕಟ್ಟೆ ಬಗ್ಗೆ ಮಹತ್ವ ತೀರ್ಮಾನ: ಏ.23ರಂದು ಮಾರುಕಟ್ಟೆ ವಿಕೇಂದ್ರೀಕರಣ ಆಗಲಿದೆ. ನಗರದ ವ್ಯಾಪಾರಿಗಳು ಸಮಯ ಕೇಳಿದ್ದಾರೆ. ಎಲ್ಲ ಭಾಗಗಳ ಅಕಾರಿಗಳ ಜತೆ ಚರ್ಚೆ ಮಾಡಿ ಮಾರುಕಟ್ಟೆ ವಿಕೇಂದ್ರೀಕರಣ ಮಾಡಲಿದ್ದೇವೆ ಎಂದು ಗೌರವ್ ಗುಪ್ತ ತಿಳಿಸಿದ್ದಾರೆ. ನಗರದ 8 ವಲಯಗಳಲ್ಲಿ ಮಾರುಕಟ್ಟೆ ವಿಕೇಂದ್ರೀಕರಣ ಆಗಲಿದೆ. ಸಾರ್ವಜನಿಕ ಮೈದಾನಗಳಲ್ಲಿ ಮಾರುಕಟ್ಟೆಗೆ ಅವಕಾಶ ನೀಡುವ ಕುರಿತು ಸಭೆಯಲ್ಲಿ ತೀರ್ಮಾನಿಸಲಿದ್ದೇವೆ ಎಂದು ಹೇಳಿದರು.

ಚಿತಾಗರಾದ ಮುಂದೆ ಆ್ಯಂಬುಲೆನ್ಸ್‍ಗಳು ಕ್ಯೂ ನಿಲ್ಲುತ್ತಿವೆಯಲ್ಲ ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಗೌರವ್ ಗುಪ್ತ, ಚಿತಾಗಾರಗಳ ಮೇಲೆ ಭಾರೀ ಒತ್ತಡ ಇದೆ. ಪಾಲಿಕೆ ವ್ಯಾಪ್ತಿಗೆ ಬರುವ ಚಿತಾಗಾರಕ್ಕೆ ಹೊರವಲಯಗಳಿಂದಲೂ ಮೃತ ದೇಹಗಳು ಬರುತ್ತಿವೆ. ಹೀಗಾಗಿ ಪಾಲಿಕೆ ವ್ಯಾಪ್ತಿಯ ಚಿತಾಗಾರದ ಮುಂದೆ ಕ್ಯೂ ಕಾಣುತ್ತಿದೆ ಎಂದು ಹೇಳಿದರು. ನಗರದ ಹೊರವಲಯಗಳ ಶವಗಳನ್ನು ಆಯಾ ಭಾಗಗಳಲ್ಲೇ ವಿಲೇವಾರಿ ಮಾಡಬೇಕು. ಹಾಗಾದಾಗ ಮಾತ್ರ ನಗರದಲ್ಲಿನ ಚಿತಾಗಾರದಲ್ಲಿ ಒತ್ತಡ ಇರುವುದಿಲ್ಲ ಎಂದು ತಿಳಿಸಿದರು.

ಬೆಡ್ ಕೊರತೆ ಇಲ್ಲ: ನಗರದಲ್ಲಿ ಬೆಡ್‍ಗಳ ಕೊರತೆ ಇಲ್ಲ. ಆದರೆ ಐಸಿಯು ಬೆಡ್‍ಗಳ ಕೊರತೆ ಇದೆ. ಈ ಬಗ್ಗೆ ಸರ್ಕಾರದೊಂದಿಗೆ ಚರ್ಚೆ ನಡೆದಿವೆ. ಆದಷ್ಟು ಬೇಗ ಸೂಕ್ತ ವ್ಯವಸ್ಥೆಯನ್ನು ಸರ್ಕಾರ ಮಾಡಲಿದೆ ಎಂದು ಆಯುಕ್ತರು ಹೇಳಿದರು. ನಗರದಲ್ಲಿ ಈಗಾಗಲೇ 12 ಕಡೆ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ. ಅವುಗಳಲ್ಲಿ 10 ಕೋವಿಡ್ ಕೇರ್ ಸೆಂಟರ್‍ಗಳು ಸಿದ್ಧವಾಗಿವೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡುವುದು ಸರಿಯಲ್ಲ ಎಂದರು.

ಖಾಸಗಿ ಸಂಸ್ಥೆಯಿಂದ ಬೆಡ್ ಪಡೆಯುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಸುವರ್ಣ ಸುರಕ್ಷಾ ವತಿಯಿಂದ 7 ಸಾವಿರ ಬೆಡ್ ಪಡೆಯಲಾಗಿದೆ. 5600 ಬೆಡ್‍ಗಳು ಸಿಕ್ಕಿವೆ. ಈ ಸಂಖ್ಯೆಯನ್ನು ಹೆಚ್ಚಳ ಮಾಡಬೇಕಾಗಿದೆ. ಇದನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ಇಂದಿನಿಂದಲೇ ಬೆಡ್ ನೀಡದ ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್ ನೀಡಲಾಗುವುದು ಎಂದು ಹೇಳಿದರು.

ಸೋಂಕಿನ ಲಕ್ಷಣ ಇಲ್ಲದವರು ಮನೆಯಲ್ಲೇ ಇರಿ: ಸೋಂಕಿನ ಲಕ್ಷಣ ಇಲ್ಲದವರು ಮನೆಯಲ್ಲೇಇದ್ದು, ಆರೋಗ್ಯ ಕಾಪಾಡಿಕೊಳ್ಳಿ. ಪಾಸಿಟಿವ್ ಬಂದ ತಕ್ಷಣ ಧೃತಿಗೆಡುವುದು ಬೇಡ. ಎಲ್ಲದಕ್ಕೂ ಬೆಡ್ ಬೇಕು ಎಂದು ಒತ್ತಾಯ ಮಾಡಬೇಡಿ. ಅಗತ್ಯ ಇರುವವರಿಗೆ ಬೆಡ್ ಒದಗಿಸಲು ಸಹಕರಿಸಬೇಕೆಂದು ಗೌರವ್ ಗುಪ್ತ ಮನವಿ ಮಾಡಿದರು. ಅಧಿಕಾರಿಗಳು, ಡಾಕ್ಟರ್ಸ್‍ಗೆ ಕೊರೊನಾ ಬಂದಿದೆ. ಎಲ್ಲರೂ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಯಾರಿ, ಕೋರ್ಮಾಬಿಟ್ ಪೇಷಂಟ್‍ಗಳಿಗೆ ಬೆಡ್ ಒದಗಿಸಲಾಗುತ್ತದೆ ಎಂದು ಹೇಳಿದರು.

ಸಾವಿನ ಅಂಕಿ-ಅಂಶ ಮುಚ್ಚಿಟ್ಟಿಲ್ಲ: ಕೊರೊನಾದಿಂದ ಮೃತಪಟ್ಟ ಅಂಕಿ-ಅಂಶವನ್ನು ಮುಚ್ಚಿಟ್ಟಿಲ್ಲ. ಇಂತಹ ಆರೋಪಗಳು ಸತ್ಯಕ್ಕೆ ದೂರವಾದವು. ಆಸ್ಪತ್ರೆ ಸರ್ಟಿಫಿಕೇಟ್ ಆಧಾರದಲ್ಲಿ ಡಿಕ್ಲೇರ್ ಮಾಡುತ್ತಿದೆ. ಆಸ್ಪತ್ರೆಗಳು ನೀಡುವ ಅಂಕಿ-ಅಂಶ ತಪ್ಪು ಇರುವುದಿಲ್ಲ. ಆಸ್ಪತ್ರೆ , ಶವಾಗಾರ ಎರಡನ್ನೂ ಹೋಲಿಕೆ ಮಾಡಲಾಗುತ್ತದೆ ಎಂದು ಗೌರವ್ ಗುಪ್ತ ಸ್ಪಷ್ಟಪಡಿಸಿದರು.

ಮೂರ್ನಾಲ್ಕು ದಿನಗಳ ಹಿಂದೆ ಹೊಸ 10 ಕೇರ್ ಸೆಂಟರ್‍ಗಳನ್ನು ತೆರೆಯಲಾಗಿದೆ. ಅವೆಲ್ಲವೂ ಅಗತ್ಯ ಇರುವವರಿಗೆ ಸಿಗಲಿವೆ ಎಂದರು.
ಬಿಯು ನಂಬರ್ ಜನರೇಟ್ ಆಗದ ವಿಚಾರಕ್ಕೆ ಪ್ರತಿಕ್ರಿಯಿಸಿದ ಗೌರವ್ ಗುಪ್ತ, ಬಿಯು ನಂಬರ್ ತಾಂತ್ರಿಕ ದೋಷದಿಂದ ತೊಂದರೆ ಆಗಿತ್ತು. ನಾಲ್ಕು ದಿನಗಳ ಹಿಂದೆ ತಾಂತ್ರಿಕ ಸಮಸ್ಯೆ ಎದುರಾಗಿತ್ತು. ಈಗ ಈ ಸಮಸ್ಯೆ ಬಗೆಹರಿಸಲಾಗಿದ್ದು, ಬಿಯು ನಂಬರ್ ಜನರೇಟ್ ಆಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಆ್ಯಂಬುಲೆ£್ಸï ಚಾಲಕರ ಬಗ್ಗೆ ಬಿಬಿಎಂಪಿ ಕಾಳಜಿ ವಹಿಸುತ್ತಿದೆ. ಎಲ್ಲರಿಗೂ ಸೂಕ್ತ ರೀತಿಯಲ್ಲಿ ಪ್ರತಿಫಲ ಸಿಗಲಿದೆ. ಈ ಚಾಲಕರು ಪಿಪಿಇ ಕಿಟ್ ಬಳಸುತ್ತಿಲ್ಲ ಎಂಬ ಕಂಪ್ಲೆಂಟ್ ಬಂದಿದೆ. ಇದರ ಬಗ್ಗೆ ಅಕಾರಿಗಳ ಜತೆ ಮಾತನಾಡಿ ಬಿಗಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.