ಬೆಂಗಳೂರು,ಜ.5-ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಮಹಾಸ್ಪೋಟವಾಗಿದೆ. ಇಂದು ಒಂದೇ ದಿನ 3605 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ನಿನ್ನೆ ನಗರದಲ್ಲಿ 2053 ಕೊರೊನಾ ಪ್ರಕರಣಗಳು ಪತ್ತೆಯಾಗಿತ್ತು. ನಿನ್ನೆಗಿಂತ ಇಂದು ಒಂದೇ ದಿನ 1552 ಹೆಚ್ಚಿನ ಪ್ರಕರಣಗಳು ದಾಖಲಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
201 ದಿನಗಳ ಬಳಿಕ ನಗರದಲ್ಲಿ ನಿನ್ನೆ ಒಂದೇ ದಿನ 2053 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿತ್ತು. ಇದೀಗ ಮತ್ತೆ 1552ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗಿರುವುದರಿಂದ ಜನ ಮತ್ತೆ ಎಚ್ಚರಿಕೆವಹಿಸಬೇಕಿದೆ. ದಿನೇ ದಿನೇ ಸೋಂಕು ಉಲ್ಬಣಗೊಳ್ಳುತ್ತಿರುವುದರಿಂದ ನಗರದಲ್ಲಿ ಸಕ್ರಿಯ ಕೊರೊನಾ ಪ್ರಕರಣಗಳ ಸಂಖ್ಯೆ 11423ಕ್ಕೆ ಏರಿಕೆಯಾಗಿದೆ.
ಇದರೊಂದಿಗೆ ನಗರದಲ್ಲಿ ಕೊರೊನಾ ಸೋಂಕಿಗೆ ಗುರಿಯಾದವರ ಒಟ್ಟು ಸಂಖ್ಯೆ 12,78,445ಕ್ಕೆ ಏರಿಕೆಯಾಗಿದ್ದರೆ, ಇದುವರೆಗೂ ಸೋಂಕಿಗೆ 16412 ಮಂದಿ ಬಲಿಯಾಗಿರುವುದು ಉಲ್ಲೇಖಾರ್ಹ. ಕೊರೊನಾ ಜತೆಗೆ ಓಮಿಕ್ರಾನ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಪರಿಸ್ಥಿತಿಯ ಭೀಕರತೆಗೆ ಮತ್ತೊಂದು ಕಾರಣವಾಗಿದೆ.
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಓಮಿಕ್ರಾನ್ ಬ್ಲಾಸ್ಟ್ ಆಗಿದ್ದು, ನಿನ್ನೆ ಒಂದೇ ದಿನ 149 ಮಂದಿಗೆ ಓಮಿಕ್ರಾನ್ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ ರಾಜ್ಯದಲ್ಲಿ ಓಮಿಕ್ರಾನ್ ಸೋಂಕಿತರ ಸಂಖ್ಯೆ 226ಕ್ಕೆ ಏರಿಕೆಯಾಗಿದೆ. ಓಮಿಕ್ರಾನ್ ಸೋಂಕು ತಗುಲಿರುವವರ ಟ್ರಾವಲ್ ಹಿಸ್ಟರಿ ಭಯಾನಕವಾಗಿದ್ದು, ಸೋಂಕಿತರಿಂದ ಮತ್ತಷ್ಟು ಮಂದಿಗೆ ಓಮಿಕ್ರಾನ್ ಹರಡುವ ಭೀತಿ ಎದುರಾಗಿದೆ.
# ವಲಯವಾರು ಕೊರೊನಾ ಪಾಸಿಟಿವ್ ಕೇಸ್‍ಗಳು:
ಬೆಂಗಳೂರು ಪೂರ್ವ ವಲಯ-745, ಮಹದೇವಪುರ-717, ಬೊಮ್ಮನಹಳ್ಳಿ -412, ದಕ್ಷಿಣ -483, ಪಶ್ಚಿಮ-322, ಯಲಹಂಕ-232, ಆರ್‍ಆರ್‍ನಗರ-199 ಹಾಗೂ ದಾಸರಹಳ್ಳಿಯಲ್ಲಿ 23 ಕೊರೊನಾ ಪ್ರಕರಣಗಳು ದಾಖಲಾಗಿವೆ.
