ಬೆಂಗಳೂರು,: ಬರೋಬ್ಬರಿ ಎಂಟು ತಿಂಗಳ ಹಿಂದೆ ಕೋವಿಡ್‍ನಿಂದ ಮೃತಪಟ್ಟ ವ್ಯಕ್ತಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ ಎಂದು ಬಿಬಿಎಂಪಿ ಎಡವಟ್ಟು ಮಾಡಿಕೊಂಡಿದೆ. ಬರೀ ಲಸಿಕೆ ಮಾತ್ರವಲ್ಲದೆ ಮೃತನ ಮೊಬೈಲ್ ಸಂಖ್ಯೆಗೆ ಸಂದೇಶ ಜೊತೆಗೆ ಲಸಿಕೆ ಪ್ರಮಾಣ ಪತ್ರ ಕಳುಹಿಸಿರುವ ವಿಚಾರವೂ ಹೊರಬಿದ್ದಿದೆ.
ಎಂಟು ತಿಂಗಳ ಹಿಂದೆ ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ರಾಘವೇಂದ್ರ ಎಂಬುವವರು ಮೃತಪಟ್ಟಿದ್ದರು. ಕುಟುಂಬಸ್ಥರಿಂದ ರಾಘವೇಂದ್ರ ಅಂತ್ಯಸಂಸ್ಕಾರ ಮಾಡಲಾಗಿತ್ತು. ನಿನ್ನೆ ಏಕಾಏಕಿ ರಾಘವೇಂದ್ರ ಬಳಕೆ ಮಾಡುತ್ತಿದ್ದ ಮೊಬೈಲ್ ಗೆ ಸಂದೇಶ ಬಂದಿದ್ದು, ನೀವೂ ಎರಡನೇ ಡೋಸ್ ಪಡೆದಿದ್ದೀರಿ ಎಂದು ತಿಳಿಸಿದ್ದಾರೆ. ಇದನ್ನು ನೋಡಿ ಕುಟುಂಬಸ್ಥರು ಅಚ್ಚರಿಗೆ ಒಳಗಾಗಿದ್ದಾರೆ.
ಎಂಟು ತಿಂಗಳ ಹಿಂದೆ ಮೃತಪಟ್ಟ ವ್ಯಕ್ತಿಗೆ, ನಿನ್ನೆ ಲಸಿಕೆ ಕೊಟ್ಟವರು ಯಾರು, ಲಸಿಕೆ ಗುರಿ ತಲುಪಲು ಮೃತಪಟ್ಟವರಿಗೂ ಲಸಿಕೆ ನೀಡಲಾಗುತ್ತಿದೆಯೇ ಎನ್ನುವ ಅನುಮಾನ ವ್ಯಕ್ತವಾಗಿದ್ದು, ಉತ್ತರ ಹಳ್ಳಿ ನಿವಾಸಿ ರಾಘವೇಂದ್ರ ಕುಟುಂಬಸ್ಥರಿಂದ ಬಿಬಿಎಂಪಿ ಕಾರ್ಯವೈಖರಿಗೆ ಆಕ್ರೋಶ ಹೊರಹಾಕಿದ್ದಾರೆ.
