ಆರಂಭದಲ್ಲಿ ಅಬ್ಬರಿಸಿ ತಣ್ಣಗಾದ ಒತ್ತುವರಿ ತೆರವು ತೆರವು ಕಾರ್ಯ

Social Share

ಬೆಂಗಳೂರು, ಸೆ.16- ಪ್ರಾರಂಭದಲ್ಲಿ ಯಲಹಂಕ ವಲಯದಲ್ಲಿ ಬಿರುಸಿನಿಂದ ನಡೆಯುತ್ತಿದ್ದ ಒತ್ತುವರಿ ತೆರವು ಕಾರ್ಯಾಚರಣೆ ಕಳೆದ ಮೂರು ದಿನಗಳಿಂದ ಆಮೆಗತಿಯಲ್ಲಿ ಸಾಗುತ್ತಿದೆ. ಯಲಹಂಕ ವಲಯದಲ್ಲಿ ಪಾಲಿಕೆ ಸರ್ವೆ ಪ್ರಕಾರ, 96 ಕಡೆ ಒತ್ತುವರಿಯಾಗಿದೆ.

ಆದರೆ, ಈವರೆಗೆ ಐದು ಕಡೆ ಮಾತ್ರ ಒತ್ತುವರಿ ತೆರವು ಮಾಡಲಾಗಿದೆ. ಕೇವಲ ಒಂದು ದೊಡ್ಡ ಕಾಲುವೆ ಒತ್ತುವರಿ ತೆರವು ಬಿಟ್ಟರೆ ಬಾಕಿ ಉಳಿದೆಲ್ಲವೂ ತೂಬುಗಾಲುವೆ ಒತ್ತುವರಿಯಾಗಿದ್ದು, ಇವುಗಳ ತೆರವಿನಲ್ಲೇ ಕಾಲಹರಣ ಮಾಡುತ್ತಿದ್ದಾರೆ ಎನ್ನಲಾಗಿದೆ.

ಕೇವಲ ಸಿಂಗಾಪುರ ಕೆರೆ ಸುತ್ತಮುತ್ತ ಮಾತ್ರ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಕಳೆದ ಮೂರು ದಿನಗಳಿಂದ ಯಲಹಂಕದಲ್ಲಿ ಎಷ್ಟು ಒತ್ತುವರಿ ತೆರವಾಗಿದೆ ಎಂಬುದನ್ನು ನೋಡುವುದಾದರೆ ಸೆ.13ರಂದು ಸ್ಯಾಟಲೈಟ್ ಟೌನ್ ವ್ಯಾಪ್ತಿಯ ಎನ್‍ಸಿಬಿಎಸ್ ಇನ್ಸ್‍ಟಿಟ್ಯೂಟ್‍ನಿಂದ 120ಮೀಟರ್ ರಾಜಕಾಲುವೆ ಒತ್ತುವರಿ ತೆರವು ಮಾಡಲಾಗಿದೆ.

ಇದನ್ನೂ ಓದಿ : ಅಪ್ಪು ಜನ್ಮದಿನವನ್ನು ‘ಸ್ಪೂರ್ತಿ ದಿನ’ವಾಗಿ ಆಚರಿಸಲು ಸರ್ಕಾರ ಘೋಷಣೆ

ಎನ್‍ಸಿಬಿಎಸ್ ಇನ್ಸ್‍ಟಿಟ್ಯೂಟ್‍ನಿಂದ ರಾಜಕಾಲುವೆ ಮೇಲೆ ಕಾಂಪೌಂಡ್ ನಿರ್ಮಾಣ ಮಾಡಿಕೊಂಡಿದ್ದು, ಅದನ್ನು ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ. 14ರಂದು ಸಿಂಗಾಪುರ ವಿಲೇಜ್‍ನಲ್ಲಿ ಬಾಲನ್‍ಗ್ರೂಪ್ (ಜ್ಯೂಸ್ ಫ್ಯಾಕ್ಟರಿ)ನಿಂದ 21 ಮೀಟರ್ ಅಗಲ, 65 ಮೀಟರ್ ಉದ್ದದ ಜಾಗದಲ್ಲಿ ಒತ್ತುವರಿಯಾಗಿದ್ದು, ಸಿಂಗಾಪುರದ ಕಮ್ಯಾಂಡೋ ಗ್ಲೋರಿ ಅಪಾರ್ಟ್‍ಮೆಂಟ್ ಹಿಂಭಾಗ ಸರ್ವೆ ನಂ.97 ಹಾಗೂ 100ರಲ್ಲಿ 2.4 ಮೀಟರ್ ಅಗಲ ಹಾಗೂ 200 ಮೀಟರ್ ಉದ್ದದ ತೂಬುಗಾಲುವೆ ಒತ್ತುವರಿ ತೆರವು ಮಾಡಲಾಗಿದೆ.

ಸಿಂಗಾಪುರದ ಡ್ರೀಮ್‍ಲ್ಯಾಂಡ್ ಮಾರ್ಕ್ ಅಪಾರ್ಟ್‍ಮೆಂಟ್‍ನಿಂದ 2.4 ಅಡಿ ಅಗಲ, 75 ಮೀಟರ್ ಉದ್ದದ ತೂಬುಗಾಲುವೆ ಒತ್ತುವರಿಯಾಗಿದ್ದು, ತೆರವು ಕಾರ್ಯಾಚರಣೆ ಅರ್ಧದಷ್ಟಾಗಿದೆ. ಸೆ.15ರಂದು ಸಿಂಗಾಪುರದ ಡ್ರೀಮ್‍ಲ್ಯಾಂಡ್ ಮಾರ್ಕ್ ಅಪಾರ್ಟ್‍ಮೆಂಟ್‍ನಿಂದ ಒತ್ತುವರಿಯಾಗಿದ್ದ ಉಳಿದ ಪ್ರದೇಶವನ್ನು ತೆರವು ಮಾಡಲಾಗಿದೆ.

ಸಿಂಗಾಪುರದ ಸರ್ವೆ ನಂ.94, 95ರಲ್ಲಿ ತೂಬುಗಾಲುವೆ ಒತ್ತುವರಿ ಮಾಡಿಕೊಂಡು ಲೇಔಟ್ ನಿರ್ಮಾಣ ಮಾಡಲಾಗಿದ್ದು, ನಿನ್ನೆ ಇಡೀ ದಿನ ಇದರ ತೆರವಿನಲ್ಲೇ ಅಕಾರಿಗಳು ಕಾಲ ಕಳೆದಿದ್ದಾರೆ ಎನ್ನಲಾಗಿದೆ. ಇಂದು ಸಹ ಸರ್ವೆ ನಂ.94, 95ರಲ್ಲಿ ತೆರವು ಕಾರ್ಯಾಚರಣೆ ಮುಂದುವರೆದಿದೆ.

Articles You Might Like

Share This Article