ಬೆಂಗಳೂರು,ಜ.25-ಹಲವು ಕಾರಣಗಳಿಂದ ನೆನೆಗುದಿಗೆ ಬಿದ್ದಿರುವ ಬಹುನಿರೀಕ್ಷಿತ ಬಿಬಿಎಂಪಿ ಚುನಾವಣೆಯನ್ನು ಮಾರ್ಚ್‍ನಲ್ಲಿ ನಡೆಸುವ ಕುರಿತಾಗಿ ಇಂದು ಬಿಜೆಪಿಯ ಪ್ರಮುಖ ನಾಯಕರು ಮಹತ್ವದ ಸಭೆ ನಡೆಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪಕ್ಷದ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್, ಬೆಂಗಳೂರು ಉತ್ತರ, ದಕ್ಷಿಣ ಮತ್ತು ಕೇಂದ್ರ ಜಿಲ್ಲೆಗಳ ಪದಾಧಿಕಾರಿಗಳು ಸೇರಿದಂತೆ ಮತ್ತಿತರರು ಬೊಮ್ಮಾಯಿ ಅವರ ರೇಸ್‍ಕೋರ್ಸ್ ರಸ್ತೆಯ ಸರ್ಕಾರಿ ನಿವಾಸದಲ್ಲಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಪೂರ್ವ ಸಿದ್ದತೆಗಳ ಬಗ್ಗೆ ಸಭೆ ನಡೆಸಿದರು.
ಮಾರ್ಚ್ ತಿಂಗಳಿನಲ್ಲಿ ಬಿಬಿಎಂಪಿ ಚುನಾವಣೆ ನಡೆಸಲು ಸಿದ್ದತೆಗಳನ್ನು ಕೈಗೊಳ್ಳಬೇಕು. ವಾರ್ಡ್‍ಗಳ ಸಂಖ್ಯೆ ಹೆಚ್ಚಳ, ಮೀಸಲಾತಿ ಪರಿಷ್ಕರಣೆ, ಅಭ್ಯರ್ಥಿಗಳ ಆಯ್ಕೆ, ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡುವುದು ಸೇರಿದಂತೆ ಹತ್ತು ಹಲವು ವಿಷಯಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಈ ಹಿಂದೆ 198 ಇದ್ದ ವಾರ್ಡ್‍ಗಳನ್ನು ಇದೀಗ 243 ವಾರ್ಡ್‍ಗಳಿಗೆ ಹೆಚ್ಚಳ ಮಾಡಲಾಗಿದೆ. ವಿಧಾನಮಂಡಲದ ಉಭಯ ಸದನಗಳಲ್ಲಿ ತಿದ್ದುಪಡಿ ಮಾಡಿದ್ದ ಮಸೂದೆಗೆ ಅಂಗೀಕಾರವಾಗಿದ್ದು, ರಾಜ್ಯಪಾಲರು ಇದಕ್ಕೆ ಅಂಕಿತವನ್ನು ಹಾಕಿದ್ದಾರೆ.
ಈಗಾಗಲೇ ಚುನಾವಣಾ ಆಯೋಗ 243 ವಾರ್ಡ್‍ಗಳ ಕ್ಷೇತ್ರ ಪುನರ್ ವಿಂಗಡಣೆ ಮಾಡಿ ಮೀಸಲಾತಿ ಪರಿಷ್ಕರಣೆ, ಬಿಬಿಎಂಪಿ ಗಡಿ ನಿಗದಿ ಮಾಡಿ ಚುನಾವಣಾ ಆಯೋಗವು ಕರಡು ಪಟ್ಟಿಯನ್ನು ಸದ್ಯದಲ್ಲೇ ಸರ್ಕಾರಕ್ಕೆ ಹಸ್ತಾಂತರ ಮಾಡಲಿದೆ.
ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ ನೇತೃತ್ವದ ಕ್ಷೇತ್ರ ಪುನರ್ ವಿಂಗಡಣೆ ಆಯೋಗ ಸದ್ಯದಲ್ಲೇ ಚುನಾವಣಾ ಆಯೋಗಕ್ಕೆ ವರದಿಯನ್ನು ಹಸ್ತಾಂತರ ಮಾಡಲಿದೆ. ಇದರ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಿ ಅಭ್ಯರ್ಥಿಗಳನ್ನು ನಂತರ ಆಯ್ಕೆ ಮಾಡಬೇಕೆಂದು ಸಭೆಯಲ್ಲಿ ಚರ್ಚೆ ಮಾಡಲಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ಆದಷ್ಟು ವೇಗವಾಗಿ ಮುಗಿಸಬೇಕು. ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚುವುದು, ಕಾಲುವೆ ಹೂಳೆತ್ತುವುದು, ಬೀದಿದೀಪ ಅಳವಡಿಕೆ, ಸಮರ್ಪಕ ನೀರು ಪೂರೈಕೆ ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ.
ಬಿಜೆಪಿಗೆ ಬಿಬಿಎಂಪಿ ಚುನಾವಣೆ ಅತ್ಯಂತ ಪ್ರತಿಷ್ಠೆಯಾಗಿದ್ದು, ಇಲ್ಲಿ ಅಧಿಕಾರ ಹಿಡಿದರೆ ಹಿಂದಿನ ಚುನಾವಣೆಯಲ್ಲಿ ಉಂಟಾಗಿರುವ ಹಿನ್ನಡೆಯನ್ನು ಸಮತೋಲನ ಮಾಡಬಹುದು. ಹೀಗಾಗಿ ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆ ಎದುರಿಸೋಣ ಎಂದು ಸಿಎಂ ಹೇಳಿದ್ದಾರೆ. ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಚುನಾವಣೆ ನಡೆಸಲು ಸಿದ್ದರಿದ್ದೇವೆ. ಇಂದು ನಡೆದ ಸಭೆಯಲ್ಲಿ ಕೆಲವು ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗಿದೆ.
ಚುನಾವಣಾ ದೃಷ್ಟಿಯಿಂದ ಕೈಗೊಳ್ಳಬೇಕಾದ ಕಾರ್ಯತಂತ್ರಗಳು, ವಾರ್ಡ್‍ವಾರು ಮಟ್ಟದಲ್ಲಿ ಕಾಮಗಾರಿಗಳು, ಮೂಲಭೂತ ಸೌಲಭ್ಯಗಳ ಕೊರತೆ, ಕ್ಷೇತ್ರವಾರು ಅನುದಾನ ಬಿಡುಗಡೆ ಸೇರಿದಂತೆ ಹತ್ತು ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದರು.
ಸಾರ್ವಜನಿಕರ ಜೊತೆ ಉತ್ತಮವಾದ ಸಂಪರ್ಕವಿಟ್ಟುಕೊಳ್ಳಲು ಸೂಚಿಸಲಾಗಿದೆ. ಬೆಂಗಳೂರಿಗೆ ನಮ್ಮ ಸರ್ಕಾರ ನೀಡಿರುವ ಕೊಡುಗೆಗಳು, ಕೈಗೊಂಡಿರುವ ಕಾಮಗಾರಿ, ಸರ್ಕಾರದ ಸಾಧನೆಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ಹೇಳಿದರು.
ಬಿಬಿಎಂಪಿ ಚುನಾವಣೆ ನಡೆಸಲು ಸರ್ಕಾರ ಸಿದ್ದವಿದೆ. ಪ್ರಕರಣ ಸುಪ್ರೀಂಕೋರ್ಟ್‍ನಲ್ಲಿ ಶೀಘ್ರದಲ್ಲೇ ಇತ್ಯರ್ಥವಾಗುವ ವಿಶ್ವಾಸವಿದೆ. 243 ವಾರ್ಡ್‍ಗಳಿಗೆ ಚುನಾವಣೆ ನಡೆಸಲು ಸರ್ಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳಲಾಗಿದೆ. ವಾರ್ಡ್‍ಗಳ ಮರುಹಂಚಿಕೆ, ಮೀಸಲಾತಿ ನಿಗದಿ, ಕ್ಷೇತ್ರ ಪುನರ್ ವಿಂಗಡಣೆ ಶೀಘ್ರದಲ್ಲೇ ಮುಗಿಯಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಭಿವೃದ್ಧಿ ಕೆಲಸಗಳು ಶೀಘ್ರದಲ್ಲೇ ಮುಗಿಯಬೇಕೆಂದು ಸೂಚಿಸಲಾಗಿದೆ. ಪ್ರತಿಯೊಂದು ಕಾಮಗಾರಿಗಳು ಪಾರದರ್ಶಕವಾಗಿರಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
