ಬಿಬಿಎಂಪಿ ಚುನಾವಣಾ ಭವಿಷ್ಯ ಮತ್ತೆ ಹೈಕೋರ್ಟ್ ಅಂಗಳಕ್ಕೆ

Social Share

ಬೆಂಗಳೂರು, ಆ.26- ಬಿಬಿಎಂಪಿ ಚುನಾವಣೆ ಭವಿಷ್ಯ ಮತ್ತೆ ಹೈಕೋರ್ಟ್ ಅಂಗಳಕ್ಕೆ ಬಂದಿದೆ ಈಗಾಗಲೇ ಒಂದು ಕಡೆ ಚುನಾವಣಾ ಆಯೋಗ ಮತದಾರರ ಕರಡು ಪಟ್ಟಿಯನ್ನು ಬಿಡುಗಡೆ ಮಾಡಿ ಸಿದ್ಧತೆ ಮಾಡಿಕೊಳ್ಳುತ್ತಿದ್ದರೆ ಇನ್ನೊಂದೆಡೆ ಇಂದು ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್‍ನ ನ್ಯಾಯಮೂರ್ತಿ ಅಬ್ದುಲ್ ನಜೀರ್ ಮತ್ತು ನ್ಯಾಯಮೂರ್ತಿ ಜೆ.ಕೆ.ಮಹೇಶ್ವರಿ ಅವರ ಪೀಠ ಕರ್ನಾಟಕ ಹೈಕೋರ್ಟ್‍ನಲ್ಲಿ ನಡೆಯುತ್ತಿರುವ ಕ್ಷೇತ್ರ ಪುನರ್ ವಿಂಗಡಣೆ ಆಕ್ಷೇಪ ಕುರಿತ ಅರ್ಜಿ ವಿಚಾರಣೆ ಇತ್ಯರ್ಥ ನಡೆಸಲಿ ಎಂದು ಸೂಚನೆ ನೀಡಿ ವಿಚಾರಣೆಯನ್ನು ಎಂಟು ವಾರಗಳ ಕಾಲ ಮುಂದೂಡಿದೆ.

ಇದರನ್ವಯ ಹೈಕೋರ್ಟ್‍ನ ಏಕಸದಸ್ಯ ಪೀಠದ ನ್ಯಾಯ ಮೂರ್ತಿ ಹೇಮಚಂದ್ರ ಗೌಂಡರ್ ಅವರು ಇದೇ ಆ.29ರಂದು ಕ್ಷೇತ್ರ ಪುನರ್ ವಿಂಗಡಣೆ ಕುರಿತು ವಿಚಾರಣೆ ನಡೆಯಲಿದೆ. ನಂತರ ಸೆ.1ರಂದು ಮೀಸಲಾತಿ ಕುರಿತ ವಿಚಾರಣೆ ನಡೆಯಲಿದೆ. ಇವೆಲ್ಲದರ ಬಗ್ಗೆ ವಿಚಾರಣೆ ಮುಕ್ತಾಯಗೊಂಡ ನಂತರ ಸ್ಪಷ್ಟ ಚಿತ್ರಣ ಹೊರಬೀಳಲಿದೆ.

ಒಂದು ವೇಳೆ ಹೈಕೋರ್ಟ್‍ನಲ್ಲಿ ಪ್ರಕರಣ ಇತ್ಯರ್ಥವಾದರೆ ಸುಪ್ರೀಂಕೋರ್ಟ್‍ನಲ್ಲೂ ಕೂಡ ಹಸಿರು ನಿಶಾನೆ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅಕ್ಟೋಬರ್‍ನಲ್ಲಿ ಪಾಲಿಕೆ ಚುನಾವಣೆ ನಡೆಯುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ, ಪ್ರಸ್ತುತ ಎಲ್ಲ ಅಡೆತಡೆಗಳನ್ನು ನೋಡಿದರೆ ಮತ್ತೆ ಚುನಾವಣೆ ಅನಿಶ್ಚಿತತೆಗೆ ಬೀಳಬಹುದು ಎಂದು ಹೇಳಲಾಗುತ್ತಿದೆ.

ಈ ವರ್ಷಾಂತ್ಯದಲ್ಲಿ ಚುನಾವಣೆ ನಡೆಯದಿದ್ದರೆ 2023ರಲ್ಲಿ ಹೊಸ ಜನಗಣತಿ ಅನ್ವಯವಾಗುತ್ತದೆ. ಅದರಂತೆ ಮತದಾರರ ಪಟ್ಟಿ ಸಿದ್ಧಪಡಿಸಲು ಕೂಡ ಬಹುಕಾಲ ಹಿಡಿಯುತ್ತದೆ. ಇದರಿಂದಾಗಿ ಚುನಾವಣೆ ವಿಳಂಬವಾಗುವುದಂತೂ ನಿಶ್ಚಿತ.
2023ರ ಮೇ-ಜೂನ್‍ನಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ಬರುವುದರಿಂದ ಪಾಲಿಕೆ ಚುನಾವಣೆ ಅದರ ನಂತರ ನಡೆಯುವುದು ಬಹುತೇಕ ಖಚಿತ ಎಂದು ಕೆಲವರು ಹೇಳುತ್ತಿದ್ದಾರೆ.

ಬಿಬಿಎಂಪಿ ಚುನಾವಣೆ ನಡೆಸುವಂತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿರುವ ಮಾಜಿ ಪಾಲಿಕೆ ಸದಸ್ಯರಾದ ಶಿವರಾಜ್ ಮತ್ತು ಅಬ್ದುಲ್ ವಾಜೀದ್ ಅವರು ಸುಪ್ರೀಂಕೋರ್ಟ್‍ನಲ್ಲಿಂದು ನಡೆದಿರುವ ವಿಚಾರಣೆ ಕುರಿತು ಪ್ರಕ್ರಿಯೆ ನೀಡಿ ನಮಗಿನ್ನೂ ನ್ಯಾಯಾಲಯದ ಮೇಲೆ ನಂಬಿಕೆ ಇದ್ದು, ಚುನಾವಣೆ ನಡೆಸಲು ಸೂಚನೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ ಎಂದು ತಿಳಿಸಿದ್ದಾರೆ. ಒಟ್ಟಾರೆ ಪಾಲಿಕೆ ಚುನಾವಣೆಗೆ ಇನ್ನೂ ಮುಹೂರ್ತ ನಿಗದಿಪಡಿಸಲು ಸಾಕಷ್ಟು ಅಡೆತಡೆಗಳು ಎದುರಾಗುತ್ತಿವೆ.

Articles You Might Like

Share This Article