ಬೆಂಗಳೂರು,ಮಾ.1- ಬಿಬಿಎಂಪಿ ಚುನಾವಣಾ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಈ ತಿಂಗಳು ಇತ್ಯರ್ಥಪಡಿಸುವ ಸಾಧ್ಯತೆ ಇರುವುದರಿಂದ ಮೂರ್ನಾಲ್ಕು ತಿಂಗಳಲ್ಲಿ ಚುನಾವಣೆ ನಡೆಯಬಹುದು ಎಂದೇ ಎಲ್ಲರೂ ಭಾವಿಸಿದ್ದಾರೆ. ಆದರೆ ಕೆಲ ಶಾಸಕರು ತಮ್ಮ ನರಿಬುದ್ಧಿ ಬಳಸಿ ಕೊಂಡು ನವಂಬರ್ ತಿಂಗಳವರೆಗೂ ಚುನಾವಣೆ ಮುಂದೂಡಲು ಷಡ್ಯಂತ್ರ ನಡೆಸುತ್ತಿದ್ದಾರೆ.
ಚುನಾಯಿತ ಪ್ರತಿನಿಧಿಗಳಿಲ್ಲದ ಬಿಬಿಎಂಪಿಗೆ ಸರ್ಕಾರ ಬೊಂಬಾಟ್ ಕೊಡುಗೆ ಘೋಷಿಸಿದೆ. ಇದರ ಜತೆಗೆ ಮುಂಬರುವ ಬಜೆಟ್‍ನಲ್ಲೂ ಪಾಲಿಕೆಗೆ ಭಾರಿ ಅನುದಾನ ನೀಡುವ ಸಾಧ್ಯತೆ ಇರುವುದರಿಂದ ತಮ್ಮ ಕ್ಷೇತ್ರಗಳಿಗೆ ಬಿಡುಗಡೆಯಾಗುವ ಅನುದಾನದಲ್ಲಿ ಪಾಲಿಕೆ ಸದಸ್ಯರಿಗೆ ಪಾಲು ನೀಡಲು ಇಚ್ಚೆ ಇಲ್ಲದ ಪಕ್ಷಾತೀತವಾಗಿ ಬಹುತೇಕ ಎಲ್ಲ ಶಾಸಕರು ಬಿಬಿಎಂಪಿಗೆ ಸಧ್ಯಕ್ಕೆ ಚುನಾವಣೆ ನಡೆಸುವುದು ಬೇಡ ಎಂದು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ.
# ಏನದು ಶಾಸಕರ ಹೊಸ ಪ್ಲಾನ್:
ಹಾಗಾದರೆ, ಚುನಾವಣೆ ಮುಂದೂಡಲು ಶಾಸಕರು ಮಾಡಿರುವ ಹೊಸ ಪ್ಲಾನ್ ಏನು ಗೊತ್ತಾ…ಇಲ್ಲಿದೆ ನೋಡಿ ಅವರ ಖತರ್ನಾಕ್ ಐಡಿಯಾ. ಬಿಬಿಎಂಪಿ ವ್ಯಾಪ್ತಿಯಲ್ಲಿ ಇದ್ದ 198 ವಾರ್ಡ್‍ಗಳನ್ನು ಆಡಳಿತಾತ್ಮಕ ದೃಷ್ಟಿಯಿಂದ ಹೊರ ವಲಯದ ಒಂದು ಕಿ.ಮೀ ವ್ಯಾಪ್ತಿಯ ಪ್ರದೇಶಗಳನ್ನು ಸೇರ್ಪಡೆ ಮಾಡಿಕೊಂಡು 243 ವಾರ್ಡ್ ರಚಿಸಿ ಚುನಾವಣೆ ನಡೆಸುವುದಾಗಿ ಘೋಷಿಸಿದ್ದ ಸರ್ಕಾರ ಇದೇ ನೆಪದಿಂದ ಕಳೆದ 2020ರ ಸೆಪ್ಟೆಂಬರ್‍ನಲ್ಲಿ ನಡೆಯಬೇಕಿದ್ದ ಚುನಾವಣೆಯನ್ನು ಮುಂದೂಡಿತ್ತು.
ಯಲಹಂಕ, ಬೆಂಗಳೂರು ದಕ್ಷಿಣ, ಯಶವಂತಪುರ, ದಾಸರಹಳ್ಳಿ ಹಾಗೂ ಮಹದೇವಪುರ ವಿಧಾನಸಭಾ ಕ್ಷೇತ್ರಗಳ ಕೆಲ ಪ್ರದೇಶಗಳನ್ನು ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳಲು ನಿರ್ಧರಿಸಲಾಗಿತ್ತು. ಹೀಗಾಗಿ ಕೆಲ ಪ್ರದೇಶಗಳಿಗೆ ನಡೆಯಬೇಕಿದ್ದ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ನಡೆಸಿರಲಿಲ್ಲ.
ಇದೀಗ ಸರ್ಕಾರ ತಾಂತ್ರಿಕ ನೆಪವೊಡ್ಡಿ ಬಿಬಿಎಂಪಿಗೆ ಯಾವುದೇ ಹೊಸ ಪ್ರದೇಶಗಳನ್ನು ಸೇರ್ಪಡೆ ಮಾಡಿಕೊಳ್ಳದಿರಲು ತೀರ್ಮಾನಿಸಿ ಹಾಲಿ ಇರುವ 198 ವಾರ್ಡ್‍ಗಳನ್ನೇ 243 ವಾರ್ಡ್‍ಗಳನ್ನಾಗಿ ವಿಂಗಡಿಸಲು ಮುಂದಾಗಿದೆ. ಸರ್ಕಾರದ ಈ ಧೋರಣೆಯನ್ನೆ ತಮ್ಮ ಅಸ್ತ್ರವನ್ನಾಗಿಸಿಕೊಂಡಿರುವ ಕೆಲ ಶಾಸಕರು ಅತ್ತ ಗ್ರಾ.ಪಂ ಚುನಾವಣೆ ನಡೆಯದೆ ಇತ್ತ ಬಿಬಿಎಂಪಿಗೂ ಸೇರ್ಪಡೆಗೊಳ್ಳದಿರುವ 50ಕ್ಕೂ ಹೆಚ್ಚು ಗ್ರಾಮಗಳ ಮುಖಂಡರುಗಳಿಂದ ನಮಗೆ ಅನ್ಯಾಯವಾಗಿದೆ ನ್ಯಾಯ ದೊರಕಿಸಿಕೊಡಿ ಎಂದು ಮತ್ತೆ ಕೋರ್ಟ್ ಮೆಟ್ಟಿಲೇರುವಂತೆ ನೋಡಿಕೊಳ್ಳಲಿದ್ದಾರೆ.
ಅವರ ಈ ಖತರ್ನಾಕ್ ಐಡಿಯಾದಿಂದ ಒಂದು ವೇಳೆ ಸುಪ್ರೀಂ ಕೋರ್ಟ್ ಕೂಡಲೆ ಬಿಬಿಎಂಪಿಗೆ ಚುನಾವಣೆ ನಡೆಸುವಂತೆ ತೀರ್ಪು ನೀಡಿದರೂ 50 ಹಳ್ಳಿಗಳ ಮುಖಂಡರಿಂದ ನಮ್ಮ ಗ್ರಾಮಕ್ಕೆ ಅನ್ಯಾಯವಾಗಿದೆ ಎಂದು ಮತ್ತೆ ಕೋರ್ಟ್ ಮೆಟ್ಟಿಲೇರಿದರೆ ಮತ್ತೆ ಮೂರ್ನಾಲ್ಕು ತಿಂಗಳು ಚುನಾವಣೆ ಮುಂದೂಡುವುದು ಗ್ಯಾರಂಟಿ.
ಹೊಸ ಪ್ರದೇಶಗಳ ಸೇರ್ಪಡೆ ವಿಚಾರ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದು ತೀರ್ಪು ಹೊರಬೀಳುವ ಮುನ್ನ ತಮ್ಮ ಪಾಲಿನ ಅನುದಾನ ಬಳಕೆ ಮಾಡಿಕೊಂಡು ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಸಿದ್ದರಾಗುವುದು ಶಾಸಕರ ಪ್ಲಾನ್ ಆಗಿದೆ.
# ಕಾಯ್ದೆ ಗೊಂದಲವೂ ವರದಾನ:
ಬಿಬಿಎಂಪಿ ವ್ಯಾಪ್ತಿಯಲ್ಲಿ ಈ ಹಿಂದೆ ಇದ್ದ ಕೆಎಂಸಿ ಕಾಯ್ದೆ ಬದಲಿಗೆ ನಗರಕ್ಕೆ ಅನ್ವಯವಾಗುವಂತೆ ಹೊಸ ಕಾಯ್ದೆ ಜಾರಿ ಮಾಡಲಾಗಿದೆ. ಈ ಹೊಸ ಕಾಯ್ದೆಯಲ್ಲಿ ಬಿಬಿಎಂಪಿ ಸದಸ್ಯರ ಅಧಿಕಾರ ಮೊಟಕುಗೊಳಿಸಲಾಗಿದೆ ಎಂಬ ಆರೋಪಗಳಿರುವುದರಿಂದ ಕೆಲವರು ನ್ಯಾಯಾಲಯದ ಮೊರ ಹೋಗಿದ್ದಾರೆ. ಸರ್ಕಾರ ದೋಷಗಳನ್ನು ತಿದ್ದುಪಡಿ ಮಾಡುವುದಾಗಿ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದೆ.
ಆದರೆ, ಕಾಯ್ದೆಯಲ್ಲಿನ ದೋಷಗಳಿಗೆ ತಿದ್ದುಪಡಿ ಮಾಡಬೇಕಾದರೆ ಅವೇಶನದಲ್ಲಿ ಒಪ್ಪಿಗೆ ಪಡೆಯಬೇಕು. ಈ ಬಾರಿಯ ಬಜೆಟ್ ಬಿಟ್ಟರೆ ಮತ್ತೆ ಮಳೆಗಾಲದ ಅಧಿವೇಶನ ನಡೆಯುವುದು ಬರುವ ಜೂನ್‍ನಲ್ಲೇ. ಅಲ್ಲಿಯವರೆಗೆ ಯಾವುದೆ ತಿದ್ದುಪಡಿ ಮಾಡದೆ ಜೂನ್‍ವರೆಗೆ ಬಿಬಿಎಂಪಿ ಚುನಾವಣೆ ನಡೆಯುವುದು ಅನುಮಾನವಾಗಿದೆ.
# ವಿಧಾನಸಭಾ ಚುನಾವಣೆ ನಂತರ ಬಿಬಿಎಂಪಿಗೆ ಎಲೆಕ್ಷನ್?
ವಿಧಾನಸಭಾ ಚುನಾವಣೆಗೂ ಮುನ್ನ ಬಿಬಿಎಂಪಿಗೆ ಚುನಾವಣೆ ನಡೆಸಿದರೆ ಸೀಟು ಸಿಗದೆ ಅತೃಪ್ತಿಗೊಳಗಾದವರೂ ವಿಧಾನಸಭಾ ಚುನಾವಣೆಯಲ್ಲಿ ಕೈ ಕೊಡುವ ಸಾಧ್ಯತೆ ಇರುವುದರಿಂದ ಎಂಎಲ್‍ಎ ಎಲೆಕ್ಷನ್ ಮುಗಿದ ಮೇಲೆ ಬಿಬಿಎಂಪಿ ಚುನಾವಣೆ ನಡೆಸುವುದು ಸೂಕ್ತ ಎನ್ನುವುದು ಶಾಸಕರ ಬೇಡಿಕೆಯಾಗಿದೆ. ಅವರ ಈ ಬೇಡಿಕೆಗೆ ಬಿಜೆಪಿಯ ಬೇರಣೇಳಿಕೆ ಶಾಸಕರನ್ನು ಹೊರತುಪಡಿಸಿದರೆ ಉಳಿದವರು ಬೆಂಬಲ ಸೂಚಿಸಿದ್ದಾರೆ ಎಂದು ಕೆಲ ಮಾಜಿ ಸದಸ್ಯರು ಆರೋಪಿಸಿದ್ದಾರೆ.
