ಮೀಸಲಾತಿ ಆಕ್ಷೇಪಣೆ ಮುಗಿದರೂ ಬಿಬಿಎಂಪಿ ಚುನಾವಣೆ ನಡೆಯೋದೇ ಡೌಟ್..!

Social Share

ಬೆಂಗಳೂರು,ಆ.9-ಬಿಬಿಎಂಪಿಯ 243 ವಾರ್ಡ್‍ಗಳಿಗೆ ಕಲ್ಪಿಸಿರುವ ಮೀಸಲಾತಿಗೆ ಆಕ್ಷೇಪಣೆ ಸಲ್ಲಿಸಲು ಇಂದು ಕೊನೆ ದಿನವಾಗಿದ್ದು, ಈಗಾಗಲೇ ಸಾವಿರಾರು ಆಕ್ಷೇಪಣೆಗಳು ಸಲ್ಲಿಕೆಯಾಗಿವೆ. ಇಂದು ಸಂಜೆವರೆಗೆ ಸಲ್ಲಿಕೆಯಾಗುವ ಆಕ್ಷೇಪಣೆಗಳನ್ನು ಪರಿಗಣಿಸಿ ಮೂರ್ನಾಲ್ಕು ದಿನಗಳ ಒಳಗೆ ಮೀಸಲಾತಿ ಅಂತಿಮ ಅಧಿಸೂಚನೆ ಹೊರಡಿಸುವ ಸಾಧ್ಯತೆಗಳಿವೆ.

7 ದಿನಗಳ ಹಿಂದೆ ಪ್ರಕಟಿಸಿದ್ದ ಮೀಸಲಾತಿಗೆ ಸಾವಿರಾರು ಆಕ್ಷೇಪಣೆಗಳು ಸಲ್ಲಿಕೆಯಾಗಿರುವುದರಿಂದ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ತೀವ್ರ ವಿರೋಧ ವ್ಯಕ್ತವಾಗಿರುವ ವಾರ್ಡ್‍ಗಳ ಮೀಸಲು ಬದಲು ಮಾಡುವ ಸಾಧ್ಯತೆಗಳಿವೆ.

ಸರ್ಕಾರ ಸೂಚಿಸಿರುವ ಮೀಸಲಾತಿಗೆ ಕಾಂಗ್ರೆಸ್ ಪಕ್ಷ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಅಂತಿಮ ಅಧಿಸೂಚನೆ ಹೊರಡಿಸಿದ ನಂತರ ಕಾನೂನು ಹೋರಾಟ ನಡೆಸಲಾಗುವುದು ಎಂದು ಆ ಪಕ್ಷದ ಹಲವಾರು ಮುಖಂಡರು ತಿಳಿಸಿದ್ದಾರೆ.

ಹೀಗಾಗಿ ಮೀಸಲಾತಿಯಲ್ಲಿ ಕೆಲ ಸಣ್ಣಪುಟ್ಟ ಬದಲಾವಣೆ ಮಾಡಿ ಯಥಾವತ್ ಮೀಸಲು ಕಲ್ಪಿಸಿದರೆ ಕಾಂಗ್ರೆಸ್ ಮುಖಂಡರು ಮತ್ತೆ ನ್ಯಾಯಾಲಯದ ಕದ ತಟ್ಟುವ ಸಾಧ್ಯತೆಗಳಿವೆ.

ಫ್ರೀ ಪ್ಲಾನ್: ಸುಪ್ರೀಂ ಕೋರ್ಟ್ ಎಂಟು ವಾರಗಳ ಒಳಗೆ ವಾರ್ಡ್ ಪುನರ್‍ ವಿಂಗಡಣೆ ಹಾಗೂ ಮೀಸಲಾತಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸರ್ಕಾರಕ್ಕೆ ಸ್ಪಷ್ಟ ಸೂಚನೆ ನೀಡಿರುವ ಹಿನ್ನಲೆಯಲ್ಲಿ ಅಳೆದು ತೂಗಿ ಮೀಸಲಾತಿ ಕಲ್ಪಿಸಿರುವ ಸರ್ಕಾರ ಉದ್ದೇಶಪೂರ್ವಕವಾಗಿಯೇ ದೋಷಮುಕ್ತ ಮೀಸಲು ಕಲ್ಪಿಸಿದೆ ಎಂದು ಬಿಜೆಪಿ ಪಕ್ಷದ ಕೆಲ ಮಾಜಿ ಸದಸ್ಯರೇ ಆರೋಪಿಸಿದ್ದಾರೆ.

ಕಾಂಗ್ರೆಸ್ ಮತ್ತು ಬಿಜೆಪಿಯ ಯಾವ ಶಾಸಕರಿಗೂ ಸಧ್ಯಕ್ಕೆ ಬಿಬಿಎಂಪಿ ಚುನಾವಣೆ ನಡೆಯುವುದು ಬೇಕಾಗಿಲ್ಲ. ಹೀಗಾಗಿ ವಾರ್ಡ್ ಪುನರ್‍ ವಿಂಗಡಣೆ ಹಾಗೂ ಮೀಸಲು ಸಮರ್ಪಕವಾಗಿ ಮಾಡಿಲ್ಲ ಎಂದು ಆರೋಪಿಸುವ ಮೂಲಕ ನ್ಯಾಯಾಲಯದ ಮೂಲಕ ಮತ್ತೆ ಚುನಾವಣೆ ಮುಂದೂಡಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸುಪ್ರೀಂ ಕೋರ್ಟ್ ಆದೇಶದಂತೆ ಎಂಟು ವಾರಗಳ ಒಳಗೆ ವಾರ್ಡ್ ಪುನರ್‍ವಿಂಗಡಣೆ ಹಾಗೂ ಮೀಸಲು ಪ್ರಕ್ರಿಯೆ ಪೂರ್ಣಗೊಂಡಿದ್ದು, ಒಂದೇರಡು ದಿನಗಳಲ್ಲಿ ಮೀಸಲಾತಿ ಅಂತಿಮ ಅಸೂಚನೆ ಹೊರಬೀಳುವ ಲಕ್ಷಣಗಳಿದ್ದರೂ ಯಾವುದೇ ಪಕ್ಷದ ಟಿಕೆಟ್ ಆಕಾಂಕ್ಷಿಗಳಲ್ಲೂ ಚುನಾವಣೆ ನಡೆಯಲಿದೆ ಎಂಬ ಬಗ್ಗೆ ದೃಢತೆ ಇಲ್ಲ.

ಏನೋ ಹೋಗಿ ಸಾರ್.. ಚುನಾವಣಾ ಆಯೋಗ ಬಿಬಿಎಂಪಿ ಚುನಾವಣೆಯ ದಿನಾಂಕ ಘೋಷಣೆ ಮಾಡಿ ನೀತಿ ಸಂಹಿತೆ ಜಾರಿಗೆ ಬರುವವರೆಗೆ ನಮಗೆ ಚುನಾವಣೆ ನಡೆಯಲಿದೆ ಎಂಬ ವಿಶ್ವಾಸವೇ ಇಲ್ಲ ಎನ್ನುತ್ತಾರೆ ಕೆಲ ಬಿಬಿಎಂಪಿ ಮಾಜಿ ಸದಸ್ಯರುಗಳು.
ಮದುವೆ ಫಿಕ್ಸ್ ಆಗಿ ಚಪ್ಪರ ಕಾರ್ಯ ಮುಗಿದ ಮೇಲೂ ಅದೇಷ್ಟೋ ಮದುವೆಗಳು ಮುರಿದು ಬಿದ್ದಿರುವ ಉದಾಹರಣೆಗಳಿವೆ. ಹೀಗಾಗಿ ಚುನಾವಣೆ ನಡೆಯುವವರೆಗೂ ನಮಗೆ ಯಾವುದೇ ಗ್ಯಾರಂಟಿ ಇಲ್ಲ ಎನ್ನುವುದು ಕೆಲವರ ವಾದವಾಗಿದೆ.

Articles You Might Like

Share This Article