ಬೆಂಗಳೂರು,ಜು.21- ಬಿಬಿಎಂಪಿ ಚುನಾವಣೆ ವಿಚಾರದಲ್ಲಿ ಎಲ್ಲರ ಚಿತ್ತ ಸುಪ್ರೀಂಕೋರ್ಟ್‍ನತ್ತ ನೆಟ್ಟಿದೆ. ಎಂಟು ವಾರಗಳ ಒಳಗೆ ವಾರ್ಡ್ ಪುನರ್ ವಿಂಗಡಣೆ ಹಾಗೂ ವಾರ್ಡ್‍ವಾರು ಮೀಸಲಾತಿ ಪ್ರಕಟಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿ ವಿಚಾರಣೆಯನ್ನು ನ್ಯಾಯಾಲಯ ಜು.22ಕ್ಕೆ ಮುಂದೂಡಿತ್ತು.
ನ್ಯಾಯಾಲಯ ನೀಡಿದ್ದ ಗಡುವು ಅಂತ್ಯಗೊಂಡಿದ್ದರೂ ರಾಜ್ಯ ಸರ್ಕಾರ ಮಾತ್ರ ವಾರ್ಡ್ ಪುನರ್ ವಿಂಗಡಣೆ ಮಾತ್ರ ಮಾಡಿ ಮೀಸಲಾತಿ ಪ್ರಕಟಿಸದೆ ವಿಳಂಬ ಧೋರಣೆ ಅನುಸರಿಸುತ್ತಿದೆ. ಹೀಗಾಗಿ ಸರ್ಕಾರ ನ್ಯಾಯಾಲಯದ ಆದೇಶ ಪಾಲಿಸದಿರುವುದರಿಂದ ನಾಳೆ ಸುಪ್ರೀಂಕೋರ್ಟ್‍ನಲ್ಲಿ ನಡೆಯಲಿರುವ ವಿಚಾರಣೆ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ತರಾತುರಿಯಲ್ಲಿ ಮೀಸಲಾತಿ ಪ್ರಕಟ ಸಾಧ್ಯತೆ: ಸುಪ್ರೀಂ ಕೋರ್ಟ್‍ನಲ್ಲಿ ನಾಳೆ ಬಿಬಿಎಂಪಿ ಚುನಾವಣೆ ಅರ್ಜಿ ವಿಚಾರಣೆ ನಡೆಯಲಿರುವುದರಿಂದ ಸರ್ಕಾರ ತರಾತುರಿಯಲ್ಲಿ ವಾರ್ಡ್ ಮೀಸಲಾತಿ ಪ್ರಕಟಿಸುವ ಸಾಧ್ಯತೆಗಳಿವೆ. ಶೇ.50 ಮೀರದಂತೆ ಹಿಂದುಳಿದ ವರ್ಗದವರಿಗೆ ಮೀಸಲಾತಿ ಕಲ್ಪಿಸುವ ಸಂಬಂಧ ರಚನೆ ಮಾಡಿದ್ದ ನ್ಯಾ.ಭಕ್ತವತ್ಸಲಂ ಅವರ ಸಮಿತಿ ತನ್ನ ವರದಿಯನ್ನು ಸಿದ್ಧಪಡಿಸಿದ್ದು, ಇಂದು ಸಂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ವರದಿ ಸಲ್ಲಿಸಲು ಸಮಯ ನಿಗಪಡಿಸಲಾಗಿದೆ.
ಭಕ್ತವತ್ಸಲಂ ಸಮಿತಿ ನೀಡುವ ವರದಿಯನ್ನಾಧರಿಸಿ ಇಂದು ರಾತ್ರಿ ವೇಳೆಗೆ 243 ವಾರ್ಡ್‍ಗಳ ಮೀಸಲಾತಿ ಪಟ್ಟಿ ಪ್ರಕಟಿಸಿ ನಾಳೆ ಸುಪ್ರೀಂ ಕೋರ್ಟ್‍ನಲ್ಲಿ ನಡೆಯಲಿರುವ ವಿಚಾರಣೆ ವೇಳೆ ಮೀಸಲಾತಿ ಪಟ್ಟಿ ಮಂಡನೆ ಮಾಡಲು ಸರ್ಕಾರ ಸಿದ್ದತೆ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ.
ನಡೆದಿದೆ ತಂತ್ರ: ಮೀಸಲಾತಿ ಕುರಿತ ವರದಿ ಕೈ ಸೇರಲು ವಿಳಂಬವಾದ ಹಿನ್ನಲೆಯಲ್ಲಿ ಸಕಾಲಕ್ಕೆ ಮೀಸಲಾತಿ ಪಟ್ಟಿ ಪ್ರಕಟಿಸಲು ಸಾಧ್ಯವಾಗಿಲ್ಲ. ಹೀಗಾಗಿ ಇನ್ನು ಕೆಲ ದಿನಗಳ ಕಾಲವಕಾಶ ನೀಡುವಂತೆ ನ್ಯಾಯಾಲಯದ ಮನವೊಲಿಸುವ ಕಸರತ್ತಿಗೆ ಸರ್ಕಾರ ಕೈ ಹಾಕಿದೆ ಎಂಬ ಗುಮಾನಿಗಳಿವೆ.
ಈಗಾಗಲೇ ದೆಹಲಿಯಲ್ಲಿ ಬೀಡುಬಿಟ್ಟಿರುವ ಕಾನೂನು ತಜ್ಞರು ಹಾಗೂ ವಕೀಲರು ನಾಳೆ ನಡೆಯಲಿರುವ ವಿಚಾರಣೆ ಸಂದರ್ಭದಲ್ಲಿ ಸರ್ಕಾರದ ಪರ ಸಮರ್ಥ ವಾದ ಮಂಡಿಸಿ ಬಿಬಿಎಂಪಿ ಚುನಾವಣೆ ನಡೆಸಲು ಮತ್ತಷ್ಟು ಕಾಲವಕಾಶ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿಕೊಳ್ಳಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ಛೀಮಾರಿ ಸಾಧ್ಯತೆ: ಇತ್ತೀಚೆಗೆ ದೇಶದ ಇತರ ಕೆಲವು ರಾಜ್ಯಗಳ ಸ್ಥಳೀಯ ಸಂಸ್ಥೆ ಚುನಾವಣೆ ಸಂಬಂಧ ಸವೋಚ್ಚ ನ್ಯಾಯಾಲಯ ನೀಡಿರುವ ತೀರ್ಪುಗಳನ್ನು ಗಮನಿಸಿದರೆ ಸಕಾಲಕ್ಕೆ ಮೀಸಲಾತಿ ಪ್ರಕಟಿಸದೆ ವಿಳಂಭ ಧೋರಣೆ ಅನುಸರಿಸುತ್ತಿರುವ ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.
ನಮ್ಮ ಪರವೇ ತೀರ್ಪು: ಬಿಬಿಎಂಪಿ ಚುನಾವಣೆಯನ್ನು ಮುಂದೂಡುತ್ತಿರುವ ಸರ್ಕಾರದ ಧೋರಣೆ ವಿರುದ್ಧ ಕಾನೂನು ಹೋರಾಟ ನಡೆಸುತ್ತಿರುವ ಬಿಬಿಎಂಪಿ ಮಾಜಿ ಸದಸ್ಯ ಅಬ್ದುಲ್ ವಾಜೀದ್ ಅವರು ಸುಪ್ರೀಂ ಕೋರ್ಟ್ ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಳ್ಳುವುದರ ಜೊತೆಗೆ ಎರಡು ವಾರದೊಳಗೆ ಬಿಬಿಎಂಪಿ ಚುನಾವಣೆ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದರೂ ಆಶ್ಚರ್ಯಪಡುವಂತಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.