ಬೆಂಗಳೂರು.ಜು.22- ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ಎಲ್ಲಾ ವಾರ್ಡ್‍ಗಳಲ್ಲೂ ಸ್ರ್ಪಧಿಸಲಿದೆ ಎಂದು ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ತಿಳಿಸಿದ್ದಾರೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಾಮಾನ್ಯ ಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಣಕ್ಕಿಳಿಸಲು ಪಕ್ಷವು ಅಭ್ಯರ್ಥಿ ಶೋಧನಾ ಸಮಿತಿಯನ್ನು ರಚಿಸಿದೆ ಎಂದರು.
ಇಡೀ ದೇಶ ಸ್ವಾತಂತ್ರ್ಯ ದಿನದ 75 ವರ್ಷದ ಅಮೃತ ಮಹೋತ್ಸವ ಆಚರಿಸುತ್ತಿದೆ. ದುರ ದೃಷ್ಟವಶಾತ್ ಪ್ರಜಾಪ್ರಭುತ್ವ ಎಂಬುದು ಆಯ್ದ ಕೆಲವರಿಂದ, ಕೆಲವರಿಗಾಗಿ, ಕೆಲವರಿ ಗೋಸ್ಕರ ಮಾತ್ರ ಇರುವಂತೆ ಭಾಸವಾಗುತ್ತಿದೆ ಎಂದು ಹೇಳಿದರು.
ದೆಹಲಿ ರಾಜ್ಯದ ಪ್ರಾಮಾಣಿಕ ಆಡಳಿತವು ಇಡೀ ದೇಶಕ್ಕೇ ಮಾದರಿಯಾಗಿದೆ , ಪಂಜಾಬ್‍ನಲ್ಲೂ ಕೂಡಾ ಭ್ರಷ್ಟಾಚಾರ ರಹಿತ ಸರ್ಕಾರ ಸೃಷ್ಟಿಯಾಗಿದೆ ಬೆಂಗಳೂರಿನಲ್ಲಿ ಯಾಕೆ ಆಗಬಾರದು? ಇದು ಸಾಧ್ಯ .ಒಂದು ಕೋಟಿಗೂ ಹೆಚ್ಚು ಜನರು ಇರುವ ಈ ನಗರವನ್ನು ಕೆಲವೇ ಕೆಲವು ದುಷ್ಕರ , ಭ್ರಷ್ಟರ ಕೈಗಳಿಗೆ ನೀಡಿ ಸುಮ್ಮನೆ ಕುಳಿತಿದ್ದೇವೆ. ಅವರು ನಮ್ಮ ಭವಿಷ್ಯದ ಮೇಲೆ ಪ್ರಹಾರ ಮಾಡುತ್ತಿದ್ದಾರೆ ಎಂದು ಪೃಥ್ವಿ ರೆಡ್ಡಿ ಕಿಡಿಕಾರಿದರು.
ನಮ್ಮ ನಗರವನ್ನು, ನಮ್ಮ ಜನರನ್ನು ರಕ್ಷಿಸಲು ಬೆಂಗಳೂರನ್ನು ಪ್ರೀತಿಸುವ ಜನರನ್ನು ನಾವು ಸ್ವಾಗತಿಸುತ್ತೇವೆ . ಇಲ್ಲಿನ ಕರೆಗಳಿಗಾಗಿ ಹೋರಾಡುವವರು , ನಗರದ ಮರಗಳನ್ನು ರಕ್ಷಿಸುತ್ತಾ ಬಂದವರು , ಮಕ್ಕಳಿಗಾಗಿ ಶಾಲೆ , ಬಡವರಿಗಾಗಿ ಸರ್ಕಾರಿ ಆಸ್ಪತ್ರೆ, ಗುಂಡಿ ಮುಕ್ತ ರಸ್ತೆಗಳನ್ನು ಕೇಳುತ್ತಾ ಬಂದಿರುವ ಸಾಮಾಜಿಕ ಹೋರಾಟಗಾರರು ಇರಬಹುದು, ಇತರ ಪಕ್ಷಗಳ ಹೀಗೆ ಎಲ್ಲರನ್ನೂ ಸ್ವಾಗತಿಸುತ್ತೇವೆ. ಜನರು ಬೆಂಗಳೂರಿಗಾಗಿ ಮುಂದೆ ಸಮರ್ಥ ನಾಯಕರಾಗಿ ಕಡೆಗಣಿಸಲ್ಪಟ್ಟವರು ಬರಬೇಕು.
ಅವರ ಒಂದು ಹೆಜ್ಜೆಯಿಂದ ನಮ್ಮ ಶಕ್ತಿ ಇನ್ನಷ್ಟು ಹಿಗ್ಗಲಿದೆ ಎಂದರು. ಸಾಂಪ್ರದಾಯಿಕ ಪಕ್ಷಗಳು ಇಷ್ಟು ದಿನ ಹಣಬಲ, ತೋಳ್ಳಲದ ಜೊತೆ ಕುಟುಂಬ ರಾಜಕಾರಣವನ್ನೇ ಕೇಂದ್ರೀಕರಿಸಿ ರಾಜಕಾರಣ ಮಾಡುತ್ತಿದ್ದವು. ಕೇಜಿವಾಲ್‍ಗೆ ಒಂದು ಅವಕಾಶ ಎಂಬ ಘೋಷವಾಕ್ಯದ ಅಡಿಯಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ಬಿ.ಟಿ.ನಾಗಣ್ಣ ನೇತೃತ್ವದಲ್ಲಿ ಅಭ್ಯರ್ಥಿ ಶೋಧನಾ ಸಮಿತಿಯನ್ನು ರಚಿಸಲಾಗಿದೆ ಎಂದರು.
ಸುರೇಶ್ ರಾಥೋಡ್, ಕುಶಲಸ್ವಾಮಿ, ಫರಿದುದ್ದೀನ್ ಷರೀಫ್, ಸಂಚಿತ್ ಸಹಾನಿಯವರು ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ. ಇದರ ಮೂಲಕ ನಗರದ ಸಾಮಾನ್ಯ ಪ್ರಜೆಗಳು , ಯುವಜನರು, ಮಹಿಳೆಯರು, ವಕೀಲರು ಮತ್ತು ಸಮಾಜದ ಎಲ್ಲಾ ಸ್ತರದ ಜನರನ್ನು ಚುನಾವಣೆಯಲ್ಲಿ ಭಾಗವಹಿಸಲು ಆಹ್ವಾನಿಸುತ್ತಿದ್ದೇವೆ ಎಂದು ಪೃಥ್ವಿ ರೆಡ್ಡಿ ತಿಳಿಸಿದರು