ಬೆಂಗಳೂರು,ಆ.1- ವರ್ಷಾಂತ್ಯದೊಳಗೆ ನಡೆಯಲಿರುವ ಬಿಬಿಎಂಪಿ ಚುನಾವಣೆಗೆ ಪ್ರಮುಖ ಮೂರು ರಾಜಕೀಯ ಪಕ್ಷಗಳು ಸಿದ್ಧತೆ ಮಾಡಿಕೊಳ್ಳುತ್ತಿರುವ ಬೆನ್ನಲ್ಲೆ ಇತರ ಕೆಲವು ಹೊಸ ಪಕ್ಷಗಳು ತಮ್ಮ ಅದೃಷ್ಟ ಪರೀಕ್ಷೆಗೆ ತಯಾರಿ ನಡೆಸಿವೆ.
ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ವಿಧಾನಸಭೆ ಚುನಾವಣೆಯ ದಿಕ್ಸೂಚಿ ಎಂದು ಭಾವಿಸಿ ಬಿಬಿಎಂಪಿ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕಾರ್ಯತಂತ್ರ ರೂಪಿಸುತ್ತಿವೆ.
ಪ್ರಮುಖ ಮೂರು ರಾಜಕೀಯ ಪಕ್ಷಗಳಿಗೆ ಸಡ್ಡು ಹೊಡೆಯಲು ಸನ್ನದ್ಧರಾಗಿರುವ ಆಮ್ ಆದ್ಮಿ, ಕೆಆರ್‍ಎಸ್ ಹಾಗೂ ಬಿಎನ್‍ಪಿ ಮತ್ತಿತರ ಪಕ್ಷಗಳು ಬಿಬಿಎಂಪಿ ಚುನಾವಣೆಯಲ್ಲಿ ತಮ್ಮ ಸಾಮಥ್ರ್ಯ ಪ್ರದರ್ಶನಕ್ಕೆ ತಾಲೀಮು ಆರಂಭಿಸಿದೆ.
ದೆಹಲಿ ನಂತರ ಪಂಜಾಬ್‍ನಲ್ಲಿ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಗಿರುವ ಅಮ್ ಆದ್ಮಿ ಪಕ್ಷ ಇದೀಗ ಕರ್ನಾಟಕದತ್ತ ತನ್ನ ಚಿತ್ತ ಹರಿಸಿದ್ದು, ಮೊದಲ ಹಂತದಲ್ಲಿ ಬಿಬಿಎಂಪಿ ಚುನಾವಣೆಯಲ್ಲಿ ತನ್ನ ಹುರಿಯಾಳುಗಳನ್ನು ಕಣಕ್ಕಿಳಿಸಲು ತೀರ್ಮಾನಿಸಿದೆ.
ಬಿಬಿಎಂಪಿಯ 243 ವಾರ್ಡ್‍ಗಳಲ್ಲಿ ಸ್ರ್ಪಧಿಸಲು ನಾವು ಸಿದ್ಧತೆ ಮಾಡಿಕೊಂಡಿದ್ದೇವೆ. ಬುದ್ಧಿವಂತ ಜನರಾಗಿರುವ ಬೆಂಗಳೂರಿಗರು ನಮ್ಮ ಪಕ್ಷದ ಕೈ ಹಿಡಿಯಲಿದ್ದಾರೆ ಎಂದು ಬೆಂಗಳೂರು ಘಟಕದ ಆಪ್ ಅಧ್ಯಕ್ಷ ಮೋಹನ್ ದಾಸರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಆಪ್‍ನಲ್ಲಿದ್ದು ಆ ಪಕ್ಷದಿಂದ ಹೊರ ಬಂದಿರುವ ರವಿಕೃಷ್ಣಾ ರೆಡ್ಡಿ ಅವರು ಕಳೆದ 2019 ರಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ರಚಿಸಿಕೊಂಡು ತಮ್ಮದೆ ಆದ ರೀತಿಯಲ್ಲಿ ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಬೇಕಾದರೆ ರಾಜಕೀಯ ಅಸ್ಥಿತ್ವ ಇರಬೇಕು ಎಂಬ ಭಾವನೆಯಿಂದ ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಸ್ರ್ಪಧಿಸಲು ಕೆಆರ್‍ಎಸ್ ಪಕ್ಷ ಮುಂದಾಗಿದೆ.
ಎಲ್ಲಾ 243 ವಾರ್ಡ್‍ಗಳಲ್ಲಿ ಸ್ರ್ಪಧಿಸಲು ನಿರ್ಧರಿಸಿರುವ ಕೆಆರ್‍ಎಸ್ ಈಗಾಗಲೇ ಜೆಡಿಯು ಹಾಘೂ ವೆಲ್‍ಫೇರ್ ಪಾರ್ಟಿ ಆಫ್ ಇಂಡಿಯಾ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಸದ್ದಿಲ್ಲದೆ ಚುನಾವಣಾ ತಯಾರಿ ಆರಂಭಿಸಿದೆ.
ಇನ್ನು ರಾಜಕೀಯ ಪಕ್ಷಗಳ ಮುಖಂಡರಿಂದ ಬೆಂಗಳೂರಿನ ಘನತೆ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಅಭಿಮತಕ್ಕೆ ಬಂದಿರುವ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಕೆಲವು ಘಟಾನುಘಟಿ ವ್ಯಕ್ತಿಗಳು ತಮ್ಮದೆ ಆದ ಬೆಂಗಳೂರು ನವ ನಿರ್ಮಾಣ ಪಕ್ಷ ಸ್ಥಾಪನೆ ಮಾಡಿಕೊಂಡಿವೆ.
ಯಾವುದೆ ರಾಜಕೀಯ ಪಕ್ಷಗಳ ಮುಖಂಡರಿಲ್ಲದೆ ರಚಿಸಿಕೊಂಡಿರುವ ಬಿಎನ್‍ಪಿ ಪಕ್ಷಕ್ಕೆ ಸಮಾಜ ಸೇವಕರು, ಗೃಹಿಣಿಯರು ಹಾಗೂ ವಿದ್ಯಾರ್ಥಿ ಸಮೂಹವೇ ಬೆನ್ನೆಲುಬಾಗಿರುವುದು ವಿಶೇಷ ಎನ್ನುತ್ತಾರೆ ಆ ಪಕ್ಷದ ಸಹ ಸಂಸ್ಥಾಪಕ ಹಾಗೂ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನರಸಿಂಹನ್ ಅವರು.
ಅಷ್ಟು ಸುಲಭವಲ್ಲ: ಮೂರು ಹೊಸ ಪಕ್ಷಗಳು ತಮ್ಮ ಆದೃಷ್ಟ ಪರೀಕ್ಷೆಗೆ ಬಿಬಿಎಂಪಿ ಚುನಾವಣೆಯನ್ನೇ ಆರಿಸಿಕೊಂಡಿರುವುದು ಉತ್ತಮ ಬೆಳವಣಿಗೆಯಾದರೂ ಅವರು ನಿರೀಕ್ಷಿಸಿದಂತಹ ಫಲಿತಾಂಶ ಪಡೆಯುವುದು ಅಷ್ಟು ಸುಲಭವಲ್ಲ.
ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ತಮ್ಮದೆ ಕಾರ್ಯಕರ್ತರ ಪಡೆಯನ್ನು ಹೊಂದಿವೆ. ಚುನಾವಣೆ ಸಂದರ್ಭದಲ್ಲಿ ಮತದಾರರನ್ನು ತಮ್ಮ ಪಕ್ಷದತ್ತ ಸೆಳೆಯುವುದು ಆ ಪಕ್ಷದ ಮುಖಂಡರಿಗೆ ಅಷ್ಟು ಕಷ್ಟವೇನಲ್ಲ. ಹೀಗಿದ್ದರೂ ಬಿಬಿಎಂಪಿ ಚುನಾವಣೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆಗಿಳಿದಿರುವ ಹೊಸ ಪಕ್ಷಗಳು ಯಾವ ರೀತಿ ಮತದಾರರನ್ನು ಸೆಳೆಯುತ್ತಾರೆ ಎನ್ನುವುದರ ಮೇಲೆ ಆ ಪಕ್ಷಗಳ ಭವಿಷ್ಯ ನಿಂತಿದೆ.
ಜಗತ್ತಿನ ಸಿಲಿಕಾನ್ ಸಿಟಿ ಕಣಿವೆ ಎಂದು ಪರಿಗಣಿಸಲ್ಪಟ್ಟಿರುವ ಬೆಂಗಳೂರು ತನ್ನ ಹಿಂದಿನ ವರ್ಚಸ್ಸು ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ. ಇದಕ್ಕೆ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರ ಧೋರಣೆಯೇ ಕಾರಣ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಇಲ್ಲಿನ ಜನ ಹೊಸ ಪಕ್ಷಗಳಿಗೆ ಮಣೆ ಹಾಕುತ್ತಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಆ ಪಕ್ಷದ ಮುಖಂಡರುಗಳು.
ಕಿಂಗ್ ಮೇಕರ್‍ಗಳಾಗುವ ಸಾಧ್ಯತೆ: ಕಳೆದ ಬಿಬಿಎಂಪಿ ಚುನಾವಣೆಯಲ್ಲಿ ಯಾವುದೇ ಪಕ್ಷಗಳಿಗೂ ಬಹುಮತ ಬಾರದಿದ್ದ ಹಿನ್ನೆಲೆಯಲ್ಲಿ ಎಸ್‍ಡಿಪಿಐ ಪಕ್ಷದಿಂದ ಹಾಗೂ ಪಕ್ಷೇತರರಾಗಿ ಸ್ರ್ಪಧಿಸಿ ಗೆಲುವು ಸಾಧಿಸಿದ್ದ ಎಂಟು ಮಂದಿಯೇ ಕಿಂಗ್ ಮೇಕರ್‍ಗಳಾಗಿದ್ದರು.
ಎಂಟು ಮಂದಿಯಲ್ಲಿ ಒಬ್ಬ ಸದಸ್ಯರು ಬಿಜೆಪಿಗೆ ಸೇರ್ಪಡೆಗೊಂಡರು ಉಳಿದ 7 ಪಕ್ಷೇತರರು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಗೆ ಜೈ ಎಂದಿದ್ದರಿಂದ ಸತತ ನಾಲ್ಕು ವರ್ಷಗಳ ಕಾಲ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಬಿಬಿಎಂಪಿ ಚುಕ್ಕಾಣಿ ಹಿಡಿದಿತ್ತು.
ಕೊನೆ ವರ್ಷದಲ್ಲಿ ಪಕ್ಷೇತರರು ಹಾಗೂ ಕೆಲವು ಜೆಡಿಎಸ್ ಸದಸ್ಯರು ಬಿಜೆಪಿ ಪರ ಮತ ಚಲಾಯಿಸಿದ್ದ ಕಾರಣ ಆ ವರ್ಷ ಮಾತ್ರ ಬಿಜೆಪಿ ಮೇಯರ್ ಆಯ್ಕೆಯಾಗಿದ್ದರು.
ಎಸ್‍ಡಿಪಿಐ ಈಗಾಗಲೇ ನಗರದಲ್ಲಿ ಖಾತೆ ತೆರೆದಿರುವುದರಿಂದ ಮುಂಬರುವ ಚುನಾವಣೆಯಲ್ಲಿ ಒಂದೇರಡು ಹೆಚ್ಚು ವಾರ್ಡ್‍ಗಳಲ್ಲಿ ಗೆಲುವು ಸಾಸುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಒಂದು ವೇಳೆ ಪ್ರಜ್ಞಾವಂತ
ಮತದಾರರು ಮುಂಬರುವ ಚುನಾವಣೆಯಲ್ಲಿ ಹೊಸ ಪಕ್ಷಗಳ ಅಭ್ಯರ್ಥಿಗಳ ಪರ ಒಲವು ತೋರಿ ಕೆಲ ಕ್ಷೇತ್ರಗಳಲ್ಲಿ ಗೆಲುವು ತಂದುಕೊಟ್ಟರೆ ಆ ಸದಸ್ಯರು ಮತ್ತೆ ಕಿಂಗ್‍ಮೇಕರ್‍ಗಳಾಗುವ ಸಾಧ್ಯತೆಗಳಿವೆ.